ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳಿ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಮುಖಂಡರು
Last Updated 30 ಮೇ 2018, 8:50 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಸಂಘಟಿತ ಪ್ರಯತ್ನದಿಂದ ವಿಧಾನಸಭಾ ಚುನಾವಣೆ ಎದುರಿಸಿದ್ದೇವೆ. ಮುಂದಿನ ಒಂದು ವರ್ಷದ ಒಳಗೆ ಲೋಕಸಭಾ ಚುನಾವಣೆಯೂ ಬರಲಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಈಗಿನಿಂದಲೇ ಸಜ್ಜುಗೊಳ್ಳಬೇಕು ಎಂದು ಬಿಜೆಪಿ ಮುಖಂಡರು, ಮತದಾರರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು.

ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರಿಗೆ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರೆಲ್ಲರೂ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಹೇಗೆ ಸಿದ್ಧಗೊಳ್ಳಬೇಕು ಎಂಬ ಮಾತನಾಡಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಮೋದಿ ವಿರೋಧಿ ಮುಖಂಡರು ಹಾಜರಾಗಿ ಏಕತೆ ಘೋಷಿಸಿದ್ದಾರೆ. ತೃತೀಯ ರಂಗ ಅಸ್ತಿತ್ವಕ್ಕೆ ತಂದು ಬಿಜೆಪಿ ಹಣಿಯುವ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಈ ಎಲ್ಲರೂ ಒಟ್ಟಾಗಲಿದ್ದಾರೆ.
ಅವರನ್ನು ಎದುರಿಸಲು ನಾವು ಈಗಿನಿಂದಲೇ ಸಜ್ಜುಗೊಳ್ಳಬೇಕು’ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಈಗಷ್ಟೇ ಅಸ್ತಿತ್ವಕ್ಕೆ ಬಂದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಹೆಚ್ಚಿನ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. 2019ರಲ್ಲಿ ಲೋಕಸಭೆ ಚುನಾವಣೆ ಜೊತೆಗೇ ವಿಧಾನಸಭಾ ಚುನಾವಣೆಯೂ ನಡೆಯುವ ಸಾಧ್ಯತೆ ಇದೆ. ಹಾಗಾಗಿ, ಕಾರ್ಯಕರ್ತರು ಎರಡೂ ಚುನಾವಣೆಗೆ ಸಿದ್ಧರಾಗಬೇಕು ಎಂದರು.

ಮಾಯಕೊಂಡ ಕ್ಷೇತ್ರಕ್ಕೆ ಸಂಸದರ ಅನುದಾನ ಹೆಚ್ಚು ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ‘ಮತ್ತೆ ಮೋದಿ ಪ್ರಧಾನಿ ಆಗಬೇಕಾದರೆ ಲೋಕಸಭೆಯಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕು. ಜಿಲ್ಲೆಯಿಂದ ಒಂದು ಸ್ಥಾನ ಕಾಯಂ ಎಂಬುದನ್ನು ಈಗಲೇ ದೃಢಪಡಿಸಬೇಕು ಎಂದು ಹೇಳಿದರು.

2019ರಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ತೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ 8ರಲ್ಲಿ 6 ಸ್ಥಾನಗಳನ್ನು ಗೆದ್ದಿದ್ದೇವೆ. 2ರಲ್ಲಿ ಸೋಲು ಕಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.

ಶಾಸಕ ಎಸ್‌.ಎ. ರವೀಂದ್ರನಾಥ್ ಮಾತನಾಡಿ, ‘ಈ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯ ಪಕ್ಷ ಬಿಜೆಪಿ. ಇದರಿಂದ ಆಯ್ಕೆ ಆದ ನಾವು ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿ ಋಣ ತೀರಿಸಬೇಕಿದೆ. ಪ್ರೊ.ಎನ್‌. ಲಿಂಗಣ್ಣ ಅವರಲ್ಲಿ ಹೆಚ್ಚಿನ ದೋಷ ಹುಡುಕದೇ ಕೆಲಸ ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಎಚ್.ಕೆ. ಬಸವರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಕೊಂಡ ಕ್ಷೇತ್ರ ಬಿಜೆಪಿ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್, ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಮುಖಂಡರಾದ ಹನುಮಂತನಾಯ್ಕ, ಎಲ್‌. ಬಸವರಾಜ್, ಸಹನಾ ರವಿ, ಶೈಲಾ ಬಸವರಾಜ್, ಮಮತಾ ಮಲ್ಲೇಶಪ್ಪ ಅವರೂ ಇದ್ದರು.

‘ನಾನು ಜನರ ಸೇವಕ’

‘ನನ್ನನ್ನು ನಿಮ್ಮ ಮಗನೆಂದೇ ತಿಳಿಯಿರಿ. ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ. ಯಾವುದೇ ಸಮಸ್ಯೆ ಇದ್ದರೂ ನನ್ನೊಂದಿಗೆ ಚರ್ಚಿಸಿ. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ’ ಎಂದು ಶಾಸಕ ಪ್ರೊ.ಎನ್‌. ಲಿಂಗಪ್ಪ ಹೇಳಿದರು.

‘ಇದು ನನ್ನ ಗೆಲುವು ಅಲ್ಲ; ನಿಮ್ಮ ಗೆಲುವು. ಶಾಸಕನಾಗಿ ಕೆಲಸ ಮಾಡುವುದು ಸುಲಭವಲ್ಲ. ಇದಕ್ಕೆ ನೀವು ಶಕ್ತಿ ಕೊಡಿ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅಲ್ಲಿಂದ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ’ ಎಂದರು.

‘ಜಿಲ್ಲೆಯಲ್ಲಿ ಪಕ್ಷ ಬೆಳೆಯಲು ಮಲ್ಲಿಕಾರ್ಜುನಪ್ಪ, ಎಸ್‌.ಎ. ರವೀಂದ್ರನಾಥ್‌ ಕಾರಣರು. ಇವರ ಮಾರ್ಗದರ್ಶನದಿಂದಲೇ ನಾನು ರಾಜಕೀಯ ರಂಗದಲ್ಲಿ ಬೆಳೆಯಲು ಸಾಧ್ಯವಾಯಿತು’ ಎಂದು ಸ್ಮರಿಸಿದರು.

‘ಇರುವವರೆಗೂ ಲಿಂಗಣ್ಣನೇ ಶಾಸಕ’

ಲಿಂಗಣ್ಣ ಸುಸಂಸ್ಕೃತ ಮನುಷ್ಯ. ಪ್ರಬಲ ಸ್ಪರ್ಧೆಯ ಮಧ್ಯೆಯೂ ಗೆದ್ದಿದ್ದಾರೆ. ಅವರು ಇರುವವರೆಗೂ ಮಾಯಕೊಂಡ ಕ್ಷೇತ್ರಕ್ಕೆ ಅವರೇ ಶಾಸಕರಾಗಿರುತ್ತಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಯಡಿಯೂರಪ್ಪ ಕ್ಷೇತ್ರಕ್ಕೆ ಭೇಟಿ ನೀಡಿದಾಗಲೇ ಲಿಂಗಣ್ಣರ ಗೆಲುವು ನಿಶ್ಚಿತವಾಗಿತ್ತು. ಕಣದಲ್ಲಿದ್ದ ಮಾಜಿ ಶಾಸಕ ಎಂ. ಬಸವರಾಜ್‌ನಾಯ್ಕಗೆ 7 ಬಾರಿ ಫೋನ್‌ ಕರೆ ಮಾಡಿದೆ. ಅವರು ಕರೆ ಸ್ವೀಕರಿಸಲಿಲ್ಲ ಎಂದು ಚುನಾವಣಾ ಸನ್ನಿವೇಶ ಬಿಚ್ಚಿಟ್ಟರು.

**
ಮಾಯಕೊಂಡದಂತಹ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಕೇವಲ 7 ಸಾವಿರ ಮತಗಳ ಅಂತರದಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಾವು ಮೈ ಮರೆಯುವಂತಿಲ್ಲ
ಬಿ.ಪಿ. ಹರೀಶ್,  ಮಾಜಿ ಶಾಸಕ 
**
ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ನ 78 ಶಾಸಕರ ಮುಖ್ಯಮಂತ್ರಿ, ಅವರು ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಅಲ್ಲ
ಜಿ.ಎಂ. ಸಿದ್ದೇಶ್ವರ,  ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT