ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಾಜಹಾನ್‌ ಸಹಿ ಮಾಡಿದ ದಾಖಲೆ ಇದೆಯೇ: ಸುಪ್ರೀಂ

Last Updated 11 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವಪ್ರಸಿದ್ಧ ಪ್ರೇಮ ಸ್ಮಾರಕ ತಾಜ್‌ಮಹಲ್‌ ತನ್ನದು ಎಂದು ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಮಂಡಳಿ ವಾದಿಸುತ್ತಿದೆ. ಈ ವಾದಕ್ಕೆ ಸಮರ್ಥನೆಯಾಗಿ ಮೊಘಲ್‌ ದೊರೆ ಷಾಜಹಾನ್‌ ಸಹಿ ಮಾಡಿದ ಪತ್ರ ಇದ್ದರೆ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ತಾಜ್‌ಮಹಲ್‌ ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಹೇಳಿದರೆ ಭಾರತದಲ್ಲಿ ಯಾರಾದರೂ ನಂಬುತ್ತಾರೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಪ್ರಶ್ನಿಸಿದೆ. 

ತಾಜ್‌ಮಹಲ್‌ ವಕ್ಫ್‌ ಆಸ್ತಿ ಎಂದು ಸ್ವತಃ ಷಾಜಹಾನ್‌ ಘೋಷಿಸಿದ್ದ ಎಂದು ವಕ್ಫ್‌ ಮಂಡಳಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಷಾಜಹಾನ್‌ ಸಹಿ ಇರುವ ದಾಖಲೆಯನ್ನು ತೋರಿಸುವಂತೆ ಸೂಚಿಸಿತು. ದಾಖಲೆ ಸಲ್ಲಿಸಲು ಸಮಯ ಕೊಡುವಂತೆ ವಕ್ಫ್‌ ವಕೀಲರು ಕೋರಿದ್ದಾರೆ.

ಉತ್ತರಾಧಿಕಾರಕ್ಕಾಗಿ ನಡೆದ ಸಂಘರ್ಷದ ಬಳಿಕ 1658ರಲ್ಲಿ ಷಾಜಹಾನ್‌ನನ್ನು ಆತನ ಮಗ ಔರಂಗಜೇಬ ಆಗ್ರಾ ಕೋಟೆಯಲ್ಲಿ ಬಂಧಿಸಿದ್ದ. 1666ರಲ್ಲಿ ಅಲ್ಲಿಯೇ ಷಾಜಹಾನ್‌ ಮೃತಪಟ್ಟ. ಹೀಗಿರುವಾಗ ತಾಜ್‌ಮಹಲನ್ನು ವಕ್ಫ್‌ಗೆ ನೀಡುವ ದಾಖಲೆಗೆ ಆತ ಸಹಿ ಮಾಡುವುದು ಸಾಧ್ಯವೇ ಎಂದು ಪೀಠ ಪ್ರಶ್ನಿಸಿತು.

ಮೊಘಲರು ನಿರ್ಮಿಸಿದ್ದ ಎಲ್ಲ ಕಟ್ಟಡಗಳನ್ನು ಅವರ ಆಳ್ವಿಕೆಯ ನಂತರ ಬ್ರಿಟಿಷ್‌ ಸರ್ಕಾರವು ವಶಕ್ಕೆ ಪಡೆಯಿತು. ದೇಶ ಸ್ವತಂತ್ರಗೊಂಡ ಬಳಿಕ ಈ ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಸೇರಿದವು ಎಂದು ವಕ್ಫ್‌ ವಕೀಲರಿಗೆ ಪೀಠ ಹೇಳಿತು.

ತಾಜ್‌ಮಹಲನ್ನು ವಕ್ಫ್‌ಗೆ ನೀಡಿದ ಯಾವುದೇ ದಾಖಲೆ ಇಲ್ಲ ಎಂದು ಎಎಸ್‌ಐ ಹೇಳಿದೆ.

ತಾಜ್‌ಮಹಲ್‌ ತನ್ನ ಆಸ್ತಿ ಎಂದು ವಕ್ಫ್‌ ಮಂಡಳಿಯು ಮಾಡಿದ ಘೋಷಣೆಯನ್ನು ಪ್ರಶ್ನಿಸಿ ಎಎಸ್‌ಐ 2010ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದೂರು ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT