ಹೋರಾಟದ ನಡುವೆಯೂ ಕೆರೆ ಮಾಯ

7

ಹೋರಾಟದ ನಡುವೆಯೂ ಕೆರೆ ಮಾಯ

Published:
Updated:

ಬೆಂಗಳೂರು: ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಹೈಕೋರ್ಟ್ ಆದೇಶ, ಹೋರಾಟಗಾರರ ಪರಿಶ್ರಮ ಎಲ್ಲ ಒತ್ತಡಗಳಿದ್ದರೂ ಕೊನೆಗೂ ಜರಗನಹಳ್ಳಿ– ಯಲಚೇನಹಳ್ಳಿ ಕೆರೆ ಮಾಯವಾಗಿದೆ.

ಜರಗನಹಳ್ಳಿ– ಯಲಚೇನಹಳ್ಳಿ ಎರಡೂ ಗ್ರಾಮಗಳ ಸರ್ವೇ ನಂಬರ್‌ಗಳಿಗೆ ಹೊಂದಿಕೊಂಡಂತಿದ್ದ ಈ ಕೆರೆ ಈಗ ನರ್ಸರಿ ಗಿಡಗಳ ಮಾರುಕಟ್ಟೆಯಾಗಿ, ಗ್ಯಾರೇಜ್‌ನ ತಾಣವಾಗಿ ಮಾರ್ಪಟ್ಟಿದೆ. ವಿಶಾಲವಾಗಿದ್ದ ಪ್ರದೇಶ ಮರಳು ಸಂಗ್ರಹ ಕೇಂದ್ರವಾಗಿ ಬದಲಾಗಿದೆ. ಜರಗನಹಳ್ಳಿ ಭಾಗದಲ್ಲಿ ಸುಮಾರು 4 ಎಕರೆಯಷ್ಟು ಈ ಕೆರೆ ಪ್ರದೇಶ ಇತ್ತು. ಯಲಚೇನಹಳ್ಳಿ ಭಾಗದ ಸುಮಾರು 2.36 ಎಕರೆ ಪ್ರದೇಶ ಶಾಲಾ ಮೈದಾನವಾಗಿಬಿಟ್ಟಿದೆ. 

ಪ್ರಭಾವಿಯೊಬ್ಬರು ಈ ಕೆರೆ ಭಾಗವನ್ನು ಸಂಪೂರ್ಣ ಮುಚ್ಚಿ ಹಾಕಿ ಷೆಡ್‌ ಹಾಕಿ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಎಂಬ ಆರೋಪವೂ ಕೇಳಿ ಬಂದಿದೆ. ಈಗ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. 

‘ಜರಗನಹಳ್ಳಿ ಕೆರೆಯನ್ನು ಬಡಾವಣೆಯಾಗಿ ಪರಿವರ್ತಿಸಬಾರದು ಎಂದು 1999ರಲ್ಲಿ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಅದೆಲ್ಲವೂ ಕಡತದಲ್ಲಷ್ಟೇ ಇದೆ. ಏನು ಆಗಬಾರದ್ದೋ ಆಗಿ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು ಕೆರೆ ಉಳಿವಿಗಾಗಿ ಹೋರಾಟ ನಡೆಸಿದ್ದ ಭಾನುಪ್ರಕಾಶ್‌.

‘ನಾವು ಬಾಲ್ಯ ಕಳೆದದ್ದು ಇದೇ ಕೆರೆ ದಂಡೆಯಲ್ಲಿ. ಇಲ್ಲಿ ಈಜು ಕಲಿತಿದ್ದೆವು. ಗಣೇಶ ವಿಸರ್ಜನೆ ನಡೆಯುತ್ತಿತ್ತು. ಆದರೆ, ಈಗ ಅವೆಲ್ಲಾ ಬರೀ ನೆನಪುಗಳು’ ಎಂದು ವಿಷಾದಿಸಿದರು ಇಲ್ಲಿನವರಾದ ಶ್ರೀನಿವಾಸ್‌.

‘2008ರವರೆಗೆ ಇಲ್ಲಿ ಕೆರೆ ಇದ್ದ ಕುರುಹಾಗಿ ನೀರಿನ ಸೆಲೆ ಉಳಿದುಕೊಂಡಿತ್ತು. ಈಗ ಯಾವುದೂ ಉಳಿದಿಲ್ಲ. ಆದರೆ, ಮೂಲತಃ ಕೆರೆಯ ಜಾಗದ ಮಣ್ಣಿನ ಗುಣ (ತೇವಾಂಶದ ಭೂಮಿ) ಉಳಿದಿದೆ. ಸ್ಥಳೀಯರು ಸಾಕಷ್ಟು ಹೋರಾಟ ನಡೆಸಿದರು. ಹತ್ತಾರು ವರ್ಷ ನಡೆದ ಕಾನೂನು ಹೋರಾಟ ವ್ಯರ್ಥವಾಯಿತು’ ಎಂದು ಹೇಳಿದರು ಜರಗನಹಳ್ಳಿಯ ಅಲೀಂ.

‘ಕೆರೆ ಒತ್ತುವರಿಯಾದ ಬಗ್ಗೆ ದೂರು ಸಲ್ಲಿಸಿದಾಗ ಹೈಕೋರ್ಟ್‌ ಸೂಚನೆ ಮೇರೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ ಒಬ್ಬರು ಬಂದು ಭೇಟಿ ನೀಡಿ ಹೋದರು. ಮುಂದೇನಾಯಿತೋ ಗೊತ್ತಾಗಲಿಲ್ಲ. ಅಂದೇ ಒತ್ತುವರಿ ತಡೆಯುತ್ತಿದ್ದರೆ ಅಲ್ಪ ಪಾರ್ಶ್ವವನ್ನಾದರೂ ಉಳಿಸಬಹುದಿತ್ತು’ ಎಂದರು ಭಾನುಪ್ರಕಾಶ್‌.

ವಿಜಯನಗರ ಅರಸರ ಕಾಲದ ಕೆರೆ: ‘ಯಲಚೇನಹಳ್ಳಿ ಕೆರೆ ಮೂಲತಃ ವಿಜಯನಗರ ಅರಸರ ಕಾಲದ್ದು. ಅದಕ್ಕೆ ಸಾಕ್ಷಿಯಾಗಿ ಕ್ರಿ.ಶ 1402ರ ಶಾಸನವೊಂದು ಇಲ್ಲಿ ಪತ್ತೆಯಾಗಿದೆ. ವಿಜಯನಗರದ ಅರಸ ಇಮ್ಮಡಿ ಹರಿಹರನ ಕಾಲದಲ್ಲಿ ಯಲಚೇನಹಳ್ಳಿ ಕೆರೆ, ನೀರು ಹೊರ ಹರಿಸುವ ತೂಬುಗಳನ್ನು ನಿರ್ಮಿಸಲಾಗಿತ್ತು’ ಎಂದು ಶಾಸನ ಹೇಳಿದೆ.

ಹಾನಿಯಾದದ್ದು... ‘ಕೆರೆಯ ಒಳಹರಿವಿನ ಮಾರ್ಗ ಸಂಪೂರ್ಣವಾಗಿ ಇಲ್ಲವಾಗಿದೆ. ಕಾಲುವೆಗಳಿದ್ದಲ್ಲೆಲ್ಲಾ ಕಟ್ಟಡ ತ್ಯಾಜ್ಯ ಸುರಿದು ಬಂದ್‌ ಮಾಡಲಾಗಿದೆ. ಕೆರೆಯ ಅಂಗಳದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಜೀವ ವೈವಿಧ್ಯ ಸಂಪೂರ್ಣ ನಾಶವಾಗಿದೆ. ವಲಸೆ ಹಕ್ಕಿಗಳು ಬರುವುದು ನಿಂತಿವೆ. ಒಟ್ಟಿನಲ್ಲಿ ಸುಂದರ ಪರಿಸರವೊಂದು ತನ್ನ ಸಹಜತೆ ಕಳೆದುಕೊಂಡು ಬರಡಾಗಿಬಿಟ್ಟಿದೆ’ ಎಂದು ಸ್ಥಳೀಯರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ಸಂಪರ್ಕಕ್ಕೆ ಸಿಗಲಿಲ್ಲ.

*
ಮುಚ್ಚಿ ಹೋಗಿರುವ ಕೆರೆಯನ್ನು ವಶಪಡಿಸಿಕೊಂಡು ಜೈವಿಕ ವೈವಿಧ್ಯದ ಉದ್ಯಾನವನ್ನಾಗಿಸಿದರೆ ಒತ್ತುವರಿದಾರರಿಗೆ ಪಾಠ ಕಲಿಸಿದಂತಾಗುವುದು. ಪರಿಸರಕ್ಕೆ ಒಳ್ಳೆಯದಾಗುವುದು.
-ಭಾನುಪ್ರಕಾಶ್‌, ಕೆರೆ ಉಳಿವಿಗಾಗಿ ಕೋರ್ಟ್‌ ಮೊರೆ ಹೋದವರು

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !