ಭಾನುವಾರ, ಮಾರ್ಚ್ 7, 2021
30 °C

ಜೆ.ಕೆ.ಫಿಶ್‌ಲ್ಯಾಂಡಿನ ಬೊಂಡಾಸ್

ಶಶಿಕುಮಾರ್ ಸಿ. Updated:

ಅಕ್ಷರ ಗಾತ್ರ : | |

Deccan Herald

ಬೊಂಡಾಸ್, ಹೊಳೆ ಹಾಗೂ ನದಿ ನೀರು ಸಮುದ್ರಕ್ಕೆ ಸೇರುವ ಸಂಗಮ ಜಾಗದಲ್ಲಿ ದೊರೆಯುವ ವಿಶಿಷ್ಟವಾದ ಹಾಗೂ ಹೆಚ್ಚು ರುಚಿಕರವಾದ ಮೀನು. ಸೀಮಿತ ಅವಧಿಯಲ್ಲಿ ಮಾತ್ರ ಸಿಗುವ ಈ ಮೀನಿನ ವಿಶೇಷ ಖಾದ್ಯಗಳ ತಾಣ ನಗರದ ಜೆ.ಕೆ.ಫಿಶ್ ಲ್ಯಾಂಡ್ ಹೋಟೆಲ್.

‘ಕರಾವಳಿ ಶೈಲಿಯ ಮೀನು ಊಟ’ ಅಡಿಬರಹ ಒಕ್ಕಣೆ ಹೊಂದಿರುವ ಈ ಹೋಟೆಲ್‌ನಲ್ಲಿ ಸುಮಾರು 20 ರೀತಿಯ ಮೀನುಗಳ 60ಕ್ಕೂ ಅಧಿಕ ವಿಶೇಷ ಖಾದ್ಯಗಳು ಲಭ್ಯ. ಆ ಪೈಕಿ ವಿಶೇಷ ಎನಿಸುವುದು ಬೊಂಡಾಸ್ ಗೀ ರೋಸ್ಟ್‌.

ಹೋಟೆಲ್‌ ಪ್ರವೇಶಿಸುತ್ತಿದ್ದಂತೆ  ಸಿಬ್ಬಂದಿ ತಮ್ಮಲ್ಲಿ ಲಭ್ಯವಿರುವ ವಿಶೇಷ ಖಾದ್ಯಗಳ ಬಗ್ಗೆ ಪರಿಚಯಿಸಿದರು. ಬೊಂಡಾಸ್ ಮೀನಿನ ಸ್ವಾರಸ್ಯಕರ ಸಂಗತಿಯನ್ನು ರುಚಿಕರವಾಗಿಯೇ ಕಟ್ಟಿಕೊಟ್ಟರು. ಬೊಂಡಾಸ್ ಗೀ ರೋಸ್ಟ್‌ಗೂ ಮುನ್ನ ಟೇಬಲ್‌ಗೆ ಬಂದದ್ದು ಏಡಿ
ಪುಳಿಮುಂಚಿ.

ಚಿಕನ್ ಲೆಗ್‌ಪೀಸ್‌ನ ಆಕಾರವಿದ್ದ ಏಡಿಯ ಲೆಗ್ ತಟ್ಟೆಯಲ್ಲಿ ಮಿರಮಿರ ಮಿಂಚುತ್ತಿತ್ತು. ಇಡೀ ಬಟ್ಟಲನ್ನು ಆವರಿಸಿದ್ದ ಏಡಿಯ ಆ ಖಾದ್ಯ  ನೋಡಿದಾಕ್ಷಣ ಬಾಯಲ್ಲಿ ನೀರೂರಿತು. ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಪುಡಿಮಾಡಿ, ಧನಿಯಾ ಪುಡಿ, ಜೀರಿಗೆ, ಕಾಳು ಮೆಣಸು ಹಾಕಿ ಪೇಸ್ಟ್ ರೂಪಕ್ಕೆ ತಂದಿದ್ದ ಮಸಾಲೆಯಲ್ಲೇ ಉರುಳಾಡಿ ಹದವಾಗಿ ಬೆಂದಿತ್ತು ಆ ಏಡಿ. ರುಚಿ ಕೊಂಚ ಭಿನ್ನವಾಗಿರಲೆಂದು ಅದಕ್ಕೆ ಕರಬೇವು ಹಾಗೂ ಪುಡಿ ಮಾಡಿದ ಗೋಡಂಬಿ ಬೆರೆಸಲಾಗಿತ್ತು.

ಏಡಿಯಷ್ಟೇ ರುಚಿ ಅದರ ಗ್ರೇವಿಯದ್ದು. ಬೆಣ್ಣೆಯಂತಿದ್ದ ನೀರ್‌ದೋಸೆ ಆ ಖಾದ್ಯಕ್ಕೆ ಉತ್ತಮ ಕಾಂಬಿನೇಷನ್. ಗ್ರೇವಿಯಲ್ಲಿ ಉರುಳಾಡಿ ನೀರ್‌ದೋಸೆ ಬಾಯಿಗಿಟ್ಟರೆ ಆಹಾ... ಆಹಹಾ.

ಹೊಳೆಬೈಗೆ ತವಾ ಫ್ರೈ ಸಹ ಚೆನ್ನಾಗಿತ್ತು. ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಪುಡಿಮಾಡಿ, ಧನಿಯಾ ಪುಡಿ, ಜೀರಿಗೆ, ಕಾಳು ಮೆಣಸು, ಮೊಟ್ಟೆ, ಉಪ್ಪು, ನಿಂಬೆಹಣ್ಣಿನ ರಸದ ಪೇಸ್ಟ್‌ನಲ್ಲಿ ಹಲವು ಗಂಟೆಗಳ ಕಾಲ ನೆನೆದಿದ್ದ ಹೊಳೆಬೈಗೆ ಮೀನು ಉಪ್ಪು, ಖಾರ ಹಾಗೂ ಮಸಾಲೆ ಪದಾರ್ಥವನ್ನು ಚೆನ್ನಾಗಿಯೇ ಹಿಡಿದಿತ್ತು. ತವಾ ಮೇಲೆ ಹದವಾಗಿ ಫ್ರೈ ಮಾಡಿದ್ದ ಹೊಳೆಬೈಗೆ, ಬೆಣ್ಣೆ ಮುಟ್ಟಿದಂತಹ ಅನುಭವ ನೀಡುತ್ತಿತ್ತು. ಅಷ್ಟಾಗಿ ಮುಳ್ಳುಗಳಿಲ್ಲದ ಈ ಮೀನು ರುಚಿಕರವಾಗಿತ್ತು. 

ನಂತರ ಟೇಬಲ್‌ಗೆ ಬಂದದ್ದು ಬೊಂಡಾಸ್ ಗೀ ರೋಸ್ಟ್. 

ರಿಂಗ್ ಆಕಾರದಲ್ಲಿ ಕತ್ತರಿಸಿದ ಆ ಮೀನಿನ ತುಂಡುಗಳನ್ನು ಪ್ರತ್ಯೇಕವಾಗಿ ಬೇಯಿಸಿಕೊಂಡು ಅದನ್ನು ಮಸಾಲೆ ಪೇಸ್ಟ್‌ನೊಂದಿಗೆ ಮಿಶ್ರಣ ಮಾಡಿ ಬಾಣಲಿಗೆಯಲ್ಲಿ ಬೇಯಿಸಲಾಗಿತ್ತು. ಹುರಿದ ಗೋಡಂಬಿಯ ಜೊತೆಗೆ ಅದೇ ಬಾಣಲಿಗೆ ತುಪ್ಪವೂ ಬಿದ್ದಿದ್ದರಿಂದ ರುಚಿ ಹೆಚ್ಚಿತ್ತು.

ಮೀನಿನ ಖಾದ್ಯಗಳನ್ನು ನಿರಾಳವಾಗಿ ಸವಿಯಲು ಮುಳ್ಳುಗಳೇ ಅಡ್ಡಿ. ಆದರೆ, ಈ ಮೀನಿನಲ್ಲಿ ಅಷ್ಟಾಗಿ ಮುಳ್ಳುಗಳು ಇರಲಿಲ್ಲ.

ಈ ಹೋಟೆಲ್‌ನಲ್ಲಿ ಅಂಜಲ್, ಪಾಂಪ್ರೆಟ್, ಕಾಣೆ, ಕೊಡುವಾಯ್, ನಂಗ್, ಹೊಳೆಬೈಗೆ, ಸಿಲ್ವರ್, ಬಾಂಗಡ, ಮತ್ತಿ, ಬೊಂಡಾಸ್, ಸಿಗಡಿ ಮೀನಿನ ಖಾದ್ಯಗಳಲ್ಲಿ ಲಭ್ಯ. ಜೊತೆಗೆ ಏಡಿಯ ವಿಭಿನ್ನ ಖಾದ್ಯಗಳು, ಹಾಗೂ ಚಿಕನ್ ಖಾದ್ಯಗಳು ಸಹ ಸಿಗುತ್ತವೆ.

‘ಮೀನು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ, ನಗರದಲ್ಲಿ ಮೀನಿನ ಖಾದ್ಯಗಳನ್ನು ಸವಿಯುವ ಜನರ ಸಂಖ್ಯೆ ಹೆಚ್ಚುತ್ತಿದೆ. ನಗರವಾಸಿಗಳಿಗೆ ಮಂಗಳೂರು ಹಾಗೂ ಕುಂದಾಪುರ ಶೈಲಿ ಮೀನಿನ ಖಾದ್ಯಗಳನ್ನು ಪರಿಚಯಿಸುವ ಸಲುವಾಗಿ ಹೋಟೆಲ್ ಪ್ರಾರಂಭಿಸಿದೆ’ ಎನ್ನುತ್ತಾರೆ ಹೋಟೆಲ್‌ನ ಮಾಲೀಕ ಜೆ.ಕೆ.ಜಯರಾಮ ಶೆಟ್ಟಿ.

‘ನಾವು ಮೀನುಗಳನ್ನು ಸಂಗ್ರಹಿಸಿಡುವುದಿಲ್ಲ. ಪ್ರತಿ ದಿನವೂ ಮಂಗಳೂರಿನಿಂದ ಮೀನುಗಳನ್ನು ತರಿಸಿ ಖಾದ್ಯಗಳಿಗೆ ಬಳಸುತ್ತೇವೆ. ಕರಾವಳಿ ಭಾಗದ ನುರಿತ ಅಡುಗೆ ಭಟ್ಟರು ನಮ್ಮಲ್ಲಿದ್ದಾರೆ. ಈ ಮೊದಲು ನಾವು ಹೋಮ್ ಡೆಲಿವರಿ ಕೊಡುತ್ತಿದ್ದೆವು. ಈಗ ಸ್ವಿಗ್ಗಿ ಆನ್‌ಲೈನ್ ಆ್ಯಪ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಅಂಜಲ್ ಹಾಗೂ ಪಾಂಪ್ರೆಟ್ ಮೀನಿನ ಖಾದ್ಯಗಳಿಗೆ ಹೆಚ್ಚು ಬೇಡಿಕೆಯಿದೆ. ಗ್ರಾಹಕರಿಗೆ ರುಚಿಕಟ್ಟಾದ ಮೀನಿನ ಖಾದ್ಯಗಳನ್ನು ಉಣಬಡಿಸುವುದು ನಮ್ಮ ಆದ್ಯತೆ’ ಎನ್ನುತ್ತಾರೆ.

ಹೋಟೆಲ್‌ನಲ್ಲಿ ಸಿಗುವ ವಿಶೇಷ ಖಾದ್ಯಗಳು

ಅಂಜಲ್ ಮಸಲಾ ಫ್ರೈ, ಕಾಣೆ ತವಾ ಫ್ರೈ, ಕೊಡುವಾಯ್, ಸೀಗಡಿ ಗೀ ರೋಸ್ಟ್, ಏಡಿ ಸುಕ್ಕಾ, ಏಡಿ ಗೀ ರೋಸ್ಟ್, ಬಂಡಾಸ್ ಪುಳಿಮುಂಚಿ, ನಂಗ್ ತವಾ ಫ್ರೈ, ಸಿಲ್ವರ್ ಮಸಲಾ ಲಭ್ಯ. ಜೊತೆಗೆ ಮುದ್ದೆ ಮೀನಿನೂಟ, ಚಪಾತಿ ಮೀನಿನೂಟ ಹಾಗೂ ಕೋರಿ ರೊಟ್ಟಿ, ನೀರ್‌ದೋಸೆ.

*****

ಸಮಯ: ಮಧ್ಯಾಹ್ನ 12ರಿಂದ 4 ರಾತ್ರಿ 7ರಿಂದ 11

ವಿಶೇಷ : ಹೊಳೆಬೈಗೆ ತವಾ ಫ್ರೈ

ಬೆಲೆ: ₹150

ಸ್ಥಳ: 14ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಶಾಸ್ತ್ರಿನಗರ, ಬನಶಂಕರಿ 2ನೇ ಹಂತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು