ಭಾನುವಾರ, ಡಿಸೆಂಬರ್ 15, 2019
26 °C

ಅಪಘಾತ: ನ್ಯಾಯಾಧೀಶ ಪ್ರಾಣಾಪಾಯದಿಂದ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಳಂದೂರು/ ಚಾಮರಾಜನಗರ: ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದ ಹೊಸ ಬಡಾವಣೆ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಮಂಗಳವಾರ ನಡೆದ ಅಪಘಾತದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಬಸವರಾಜ ಅವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಚಾಮರಾಜನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ‌ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಮಂಗಳವಾರ ಬೆಳಿಗ್ಗೆ 10.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸವರಾಜ ಅವರಿದ್ದ ಮಾರುತಿ ಆಲ್ಟೊ 800 ಕಾರು ಕೊಳ್ಳೇಗಾಲ ತಹಶೀಲ್ದಾರ್‌ ಅವರ ಬೊಲೆರೊ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಕಾರಿನಲ್ಲಿ ತಹಶೀಲ್ದಾರ್‌ ಇರಲಿಲ್ಲ.

ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹಠಾತ್‌ ಆಗಿ ಅಡ್ಡ ಬಂದಿದ್ದರಿಂದ ತಹಶೀಲ್ದಾರ್‌ ವಾಹನದ ಚಾಲಕ ಬ್ರೇಕ್‌ ಹಾಕಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ನ್ಯಾಯಾಧೀಶರ ಕಾರು ಬೊಲೆರೊಗೆ ಡಿಕ್ಕಿ ಹೊಡೆದಿದೆ. ಬಸವರಾಜ ಅವರು ಮುಂದಿನ ಸೀಟಿನಲ್ಲಿ ಕುಳಿತಿದ್ದರು.

ಗಾಯಗೊಂಡಿದ್ದ ಬಸವರಾಜ ಅವರಿಗೆ ಯಳಂದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಚಾಮರಾಜನಗರದ ಜೆಎಸ್‌ಎಸ್‌ ಆಸ್ಪತ್ರೆಗೆ ಕರೆತರಲಾಯಿತು.

ಜೀವಕ್ಕೆ ಅಪಾಯ ಇಲ್ಲ: ಬಸವರಾಜ ಅವರ ಆರೋಗ್ಯದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಮಂಜುನಾಥ್‌, ‘ನ್ಯಾಯಾಧೀಶರ ಜೀವಕ್ಕೆ ಅಪಾಯ ಇಲ್ಲ. ಮಂಡಿಗೆ ಏಟಾಗಿದೆ. ಎಲ್ಲ ಪರೀಕ್ಷೆಗಳನ್ನು ಮಾಡಲಾಗಿದೆ. ಆರೋಗ್ಯ ಸ್ಥಿರವಾಗಿದೆ. ರಕ್ತದ ಒತ್ತಡ ಸ್ವಲ್ಪ ಹೆಚ್ಚಿದೆ’ ಎಂದು ಹೇಳಿದರು‌. 

ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಕ್ರಿಯಿಸಿ (+)