ಭಾನುವಾರ, ಮೇ 16, 2021
22 °C
ಕೆ.ಸಿ. ವ್ಯಾಲಿ: ಸುಪ್ರೀಂ ಆದೇಶದಿಂದ ಆಘಾತ

ತಡೆಯಾಜ್ಞೆ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳಲಿ: ಸಂಸದ ಕೆ.ಎಚ್. ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬರದಿಂದ ತತ್ತರಿಸಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಕೆರೆಗಳನ್ನು ತುಂಬಿಸುವ ಕೆ.ಸಿ. (ಕೋರಮಂಗಲ– ಚಲ್ಲಘಟ್ಟ) ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಗಳಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌ ಆದೇಶದಿಂದ ಆಘಾತ ಉಂಟಾಗಿದೆ ಎಂದು ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಲ್ಲಿನ ಒಟ್ಟು 191 ಕೆರೆಗಳಿಗೆ ಶುದ್ಧೀಕರಿಸಿದ ಕೊಳಚೆ ನೀರು ಹರಿಸುವ ಈ ಯೋಜನೆಯ ಅಗತ್ಯದ ಕುರಿತು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸೂಕ್ತ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರವು ಹೊಸದಾಗಿ ಅಧ್ಯಯನ ನಡೆಸುವ ಮೂಲಕ, ಶುದ್ಧೀಕರಿಸಿದ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸುವುದರಿಂದ ಜನರ ಆರೋಗ್ಯದ ಮೇಲೆ ಹಾಗೂ ಅಂತರ್ಜಲದ ಗುಣಮಟ್ಟದಲ್ಲಿ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬ ಅಂಶವನ್ನು ಕೋರ್ಟ್‌ಗೆ ಮನವರಿಕೆ ಮಾಡಬೇಕು ಎಂದು ಅವರು ಕೋರಿದರು.

ಈಗಾಗಲೇ ವರ್ತೂರು ಕೋಡಿಯ ಮೂಲಕ ಹರಿಯುವ ಕೊಳಚೆ ನೀರನ್ನು ತಮಿಳುನಾಡಿನ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಯ ರೈತರು ನೀರಾವರಿಗೆ ಬಳಸುವ ಮೂಲಕ ತರಕಾರಿ ಬೆಳೆಯುತ್ತಿದ್ದಾರೆ. ಅದೇ ಮಾದರಿಯ ನೀರನ್ನು ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಹರಿಸುವ ಯೋಜನೆಯಿಂದ ರೈತರಿಗೆ ಅನುಕೂಲ ಉಂಟಾಗಲಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು