ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾಪುರ ಕೆರೆಗೆ ₹500 ಕೋಟಿ ಪರಿಸರ ಪರಿಹಾರ: ದಂಡ ವಿನಾಯಿತಿ ಕೋರಿದ್ದ ಅರ್ಜಿ ವಜಾ

ಚಂದಾಪುರ ಕೆರೆಗೆ ₹500 ಕೋಟಿ ಪರಿಸರ ಪರಿಹಾರ
Last Updated 1 ಡಿಸೆಂಬರ್ 2022, 18:57 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಚಂದಾಪುರ ಕೆರೆಗೆ ಪರಿಸರ ಪರಿಹಾರದ ರೂಪದಲ್ಲಿ ವಿಧಿಸಿದ್ದ ₹500 ಕೋಟಿ ದಂಡಕ್ಕೆ ವಿನಾಯಿತಿ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ತಿರಸ್ಕರಿಸಿದೆ.

ಕೆರೆಗೆಸುತ್ತಮುತ್ತಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಕೊಳಚೆ ನೀರು ಸೇರಿ ಅಪಾರ ಹಾನಿ ಉಂಟಾಗಿದ್ದು, ಈ ಪರಿಸರ ಹಾನಿ ಸರಿಪಡಿಸಲು ಕರ್ನಾಟಕ ಸರ್ಕಾರವು ಕೆರೆಗೆ ₹500 ಕೋಟಿ ಪರಿಹಾರ ನೀಡಬೇಕು ಎಂದು ಪ್ರಧಾನ ಪೀಠ ಅಕ್ಟೋಬರ್‌ನಲ್ಲಿ ಆದೇಶ
ಹೊರಡಿಸಿತ್ತು.

’ಈ ಪರಿಹಾರದ ಮೊತ್ತವನ್ನು ಒಂದು ತಿಂಗಳಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಖಾತೆಯಲ್ಲಿ ಇಡಬೇಕು. ಈ ಮೊತ್ತವನ್ನು ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು. ಕೆರೆಯ ಪುನರುಜ್ಜೀವನಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಒಂದು ವೇಳೆ ಈ ಮೊತ್ತ ಕಡಿಮೆಯಾದರೆ ಹೆಚ್ಚುವರಿ ಅನುದಾನ ಒದಗಿಸಬೇಕು. ಅಭಿವೃದ್ಧಿ ಕಾಮಗಾರಿ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸಬೇಕು’ ಎಂದೂ ಪೀಠ ನಿರ್ದೇಶನ ನೀಡಿತ್ತು.

ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಅರ್ಜಿ ಸಲ್ಲಿಸಿತ್ತು. ‘ಕೆರೆಯ ಸಮಗ್ರ ಅಭಿವೃದ್ಧಿಗೆ ಮೂರು–ನಾಲ್ಕು ವರ್ಷಗಳ ಕಾಲಾವಕಾಶ ನೀಡಬೇಕು’ ಎಂದು ಸರ್ಕಾರವು ಅರ್ಜಿಯಲ್ಲಿ ಕೋರಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್‌ ಅವರನ್ನು ಒಳಗೊಂಡ ಪೀಠ, ‘ಕರ್ನಾಟಕ ಸರ್ಕಾರದ ವಾದ ಸಮರ್ಥನೀಯ ಅಲ್ಲ. ಘನತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಪುನರುಜ್ಜೀವನಕ್ಕೆ ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಗಡುವು ವಿಧಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿ ಕರ್ನಾಟಕ ಸರ್ಕಾರವು ಮನಸ್ಸಿಗೆ ಬಂದಂತೆ ಗಡುವು ವಿಸ್ತರಿಸುತ್ತಾ ಹೋಗುತ್ತಿದೆ. ನ್ಯಾಯಪೀಠದ ಆದೇಶವನ್ನು ಪಾಲಿಸಲು ಸಿದ್ಧವಿಲ್ಲ ಎಂದರೆ ಏನರ್ಥ’ ಎಂದು ಪ್ರಶ್ನಿಸಿದೆ.

‘3–4 ವರ್ಷಗಳಲ್ಲಿ ಈ ಮೊತ್ತ ಖರ್ಚು ಮಾಡಲಾಗುವುದು ಎಂಬ ರಾಜ್ಯ ಸರ್ಕಾರದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಈಗಾಗಲೇ ವಿಫಲವಾಗಿದೆ. ಕೆರೆ ಅಭಿವೃದ್ಧಿಗೆ ಇನ್ನಷ್ಟು ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ಪೀಠ ಕಟುವಾಗಿ ತಿಳಿಸಿದೆ.

’ಈ ಜಲಕಾಯವು 24.27 ಎಕರೆ ಪ್ರದೇಶದಲ್ಲಿದೆ. ಹೀಲಳಿಗೆ ಗ್ರಾಮದಲ್ಲಿ 7.2 ಎಕರೆ ಹಾಗೂ ಚಂದಾಪುರ ಪಟ್ಟಣದಲ್ಲಿ 17.25 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ನಿರ್ಮಾಣ ಚಟುವಟಿಕೆಗಳಿಗಾಗಿ ಜಲಕಾಯದ ಎರಡು ಎಕರೆಯನ್ನು ಒತ್ತುವರಿ ಮಾಡಲಾಗಿದೆ. ಕೆರೆಯ ಮೀಸಲು ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಅಂಗಡಿಗಳು ನಿರ್ಮಾಣವಾಗಿವೆ. ಕೆರೆಯ ಸುತ್ತ ಹಾಕಿರುವ ಬೇಲಿ ಕಿತ್ತು ಹೋಗಿದೆ. ಕೆರೆಯ ಪಕ್ಕದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇಲ್ಲ. ಹೀಗಾಗಿ, ಕೊಳಚೆ ನೀರು ನೇರವಾಗಿ ಜಲಕಾಯ ಸೇರುತ್ತಿದೆ. ಜಿಗಣಿ–ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕೈಗಾರಿಕಾ ತ್ಯಾಜ್ಯವು ಕೆರೆಯನ್ನು ಸೇರುತ್ತಿದೆ. ಇದು ಸರ್ಕಾರ ರೂಪಿಸಿರುವ ನಿಯಮಕ್ಕೆ ವಿರುದ್ಧ. ಕೈಗಾರಿಕೆಗಳು ತ್ಯಾಜ್ಯ ನೀರನ್ನು ಜಲಕಾಯಕ್ಕೆ ಬಿಡುವಂತಿಲ್ಲ’ ಎಂದು
ನ್ಯಾಯಪೀಠದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಈ ಕೈಗಾರಿಕಾ ಪ್ರದೇಶದಲ್ಲಿ ಔಷಧ ಉತ್ಪಾದಿಸುವ ಕೈಗಾರಿಕೆಗಳು, ಪವರ್ ಕೋಟಿಂಗ್‌, ಎಲೆಕ್ಟ್ರೋಪ್ಲೇಟಿಂಗ್‌ ಸೇರಿದಂತೆ ಕೆಂ‍‍ಪು ವರ್ಗೀಕರಣದ 195 ಕೈಗಾರಿಕೆಗಳು ಇವೆ. ಬೆಂಗಳೂರು ನಗರದ ಜನರ ಜಲದಾಹವನ್ನು ನೀಗಿಸಲು ಕೆರೆಯಲ್ಲಿ ಕೊಳಚೆ ಬಾವಿಗಳನ್ನು ಕೊರೆದು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಜಲಕಾಯದ ನೀರಿನ ಗುಣಮಟ್ಟ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ಸಲ್ಲಿಸಿದೆ’ ಎಂದೂ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT