Bengaluru Tech Summit | ನಾಲ್ಕು ಹನಿ ಹಾಲಿನಿಂದ ಕಾಯಿಲೆ ಪತ್ತೆ!

ಬೆಂಗಳೂರು: ರಾಸುಗಳಲ್ಲಿ ಕಾಣಿಸಿಕೊಳ್ಳುವ ಕೆಚ್ಚಲು ಬಾವು ಕಾಯಿಲೆಯನ್ನು ನಾಲ್ಕು ಹನಿ ಹಾಲಿನಿಂದ ಪತ್ತೆ ಮಾಡಬಹುದಾಗಿದೆ.
‘ಫೌನ್‌ಟೆಕ್ ಸೊಲ್ಯುಷನ್ಸ್’ ನವೋದ್ಯಮವು ಕಾಯಿಲೆಗಳ ಪತ್ತೆಗೆ ವಿಶೇಷ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ವೈದ್ಯರ ನೆರವು ಇಲ್ಲದೆಯೇ ಮೊಬೈಲ್‌ನಲ್ಲೇ ಕಾಯಿಲೆಯ ವಿವರಗಳನ್ನು ಪಡೆಯಬಹುದಾಗಿದೆ. ಈ ಕಾರ್ಯಕ್ಕೆ ‘ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮಾಲೆಕ್ಯುಲಾರ್ ಪ್ಲಾಟ್‌ಫಾರ್ಮ್’ (ಸಿ–ಸಿಎಎಂಪಿ) ನೆರವು ನೀಡಿದೆ.
‘ಬೆಂಗಳೂರು ಟೆಕ್ ಸಮಿಟ್’ನಲ್ಲಿ ಈ ಉಪಕರಣ ವನ್ನು ಪ್ರದರ್ಶಿಸಲಾಗಿದೆ. ಇದು ಆ್ಯಪ್ ಆಧಾರಿತ ಉಪಕರಣವಾಗಿದೆ. ಬ್ಲೂಟೂಥ್ ಮೂಲಕ ಮೊಬೈಲ್ ಮತ್ತು ಉಪಕರಣಕ್ಕೆ ಸಂಪರ್ಕ ಪಡೆಯಬಹುದು. ಉಪಕರಣದಲ್ಲಿ ನಾಲ್ಕು ಹನಿ ಹಾಲು ಹಾಕಿದರೆ ಕೆಲವೇ ನಿಮಿಷಗಳಲ್ಲಿ ಕಾಯಿಲೆಯ ಬಗ್ಗೆ ವಿವರಗಳು ದೊರೆಯಲಿವೆ. ಇದು ಚಿಕ್ಕದಾಗಿರುವುದರಿಂದ ಸುಲಭವಾಗಿ ಎಲ್ಲೆಡೆ ಕೊಂಡೊಯ್ಯಬಹುದಾಗಿದೆ.
‘ದೇಶದಲ್ಲಿ ಮೊದಲ ಬಾರಿ ಇಂತಹ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಹಾಲಿನ ಗುಣಮಟ್ಟ ಕಾಪಾಡಲು ಸಹಕಾರಿಯಾಗಲಿದೆ. ಜತೆಗೆ, ರೈತರಿಗೂ ತಮ್ಮ ರಾಸುಗಳ ಆರೋಗ್ಯದ ಮೇಲೆ ನಿರಂತರವಾಗಿ ನಿಗಾವಹಿಸಲು ಅನುಕೂಲವಾಗಲಿದೆ. ಮೊಬೈಲ್ ಆ್ಯಪ್‌ನಲ್ಲಿ ರಾಸುಗಳಲ್ಲಿನ ಕಾಯಿಲೆ ವಿವರಗಳು ಲಭ್ಯವಾಗಲಿವೆ. ಸದ್ಯಕ್ಕೆ ಕೆಚ್ಚಲು ಬಾವು ಕಾಯಿಲೆ ಬಗ್ಗೆ ಸಂಶೋಧನೆ ಮಾಡಲಾಗಿದೆ. ಇತರ ಕಾಯಿಲೆಗಳು ಮತ್ತು ಜಾನುವಾರುಗಳ ಆರೋಗ್ಯ ಕಾಪಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ’ ಎಂದು ಫೌನ್‌ಟೆಕ್‌ನ ವ್ಯವಸ್ಥಾಪಕ ಅಷರಿತ್ ವಿವರಿಸಿದರು.
ಸುಲಭವಾಗಿ ಸರಕು ಸಾಗಿಸುವ ಯಂತ್ರ: ಕಚೇರಿಯಲ್ಲೇ ಕುಳಿತು ನೆಟ್‌ವರ್ಕ್ ಮೂಲಕ ಸರಕು ಸಾಗಿಸುವ ಯಂತ್ರವನ್ನು ‘ಇನ್ನೊಮೈಂಡ್ಸ್’ ಅಭಿವೃದ್ಧಿಪಡಿಸಿದೆ. ಇದು ಉಗ್ರಾಣಗಳಲ್ಲಿ ಹೆಚ್ಚು ಉಪಯುಕ್ತ ಎಂದು ಕಂಪನಿ ತಿಳಿಸಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಇದು 100 ಕೆಜಿಯಷ್ಟು ಸರಕು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.