ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ‘ಸೂತ್ರ’: ‌‘ಕೈ’ ಸಂಕಲ್ಪ

ರಾಜ್ಯ ‘ಚಿಂತನಾ ಶಿಬಿರ’ದಲ್ಲಿ ಕಾಂಗ್ರೆಸ್‌ ನಾಯಕರ ಒಗ್ಗಟ್ಟಿನ ಕಾರ್ಯತಂತ್ರ
Last Updated 2 ಜೂನ್ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷವನ್ನು ಸೈದ್ಧಾಂತಿಕ, ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಬಲಪಡಿಸಿ, 2023ರ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಕಾಂಗ್ರೆಸ್‌ ನಾಯಕರು ‘ನವ ಸಂಕಲ್ಪ ಚಿಂತನಾ ಶಿಬಿರ’ದ ಹೆಸರಿನಲ್ಲಿ ಒಟ್ಟಾಗಿದ್ದಾರೆ.

ನಗರದ ಹೊರವಲಯದ ಕ್ಲಾರ್ಕ್ ಎಕ್ಸಾಟಿಕದಲ್ಲಿ ಗುರುವಾರದಿಂದ ಆರಂಭವಾದ ಎರಡು ದಿನಗಳ ಈ ಶಿಬಿರದಲ್ಲಿ, ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ‘ಕೈ’ ನಾಯಕರು ನಿರ್ಣಯ ಕೈಗೊಂಡು ಪಕ್ಷವನ್ನು ಪುನರ್ ಸಂಘಟಿಸುವ ಪಣ ತೊಟ್ಟಿದ್ದಾರೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ‘ಪಕ್ಷದ ಹಿರಿಯರ ಮಾರ್ಗದರ್ಶನ ಪಡೆಯಲು ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ. ಉದಯಪುರ ಸಭೆಯ ತೀರ್ಮಾನವನ್ನು ಸೂತ್ರ ರೂಪದಲ್ಲಿ ಎಲ್ಲ ಸಮಿತಿಗಳಲ್ಲಿಯೂ ಅನುಸರಿಸಬೇಕು. ಬಡವರು, ಶೋಷಿತರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರು ಹಾಗೂ ಪರಿಶಿಷ್ಟರ ಧ್ವನಿಯಾಗದೇ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಎಲ್ಲ ಸಮಿತಿಗಳಲ್ಲಿ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಎಲ್ಲ ವರ್ಗದವರಿಗೂ ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದರು.

‘ನಾಯಕರು, ಲಕ್ಷಾಂತರ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲು ಇಲ್ಲಿ ಸೇರಿರುವವರು ಕಾರ್ಯ ಸೂಚಿ, ಗುರಿ ಹಾಗೂ ನಿರ್ಣಯಗಳನ್ನು ಕೈಗೊಳ್ಳಬೇಕು. 15 ದಿನಗಳಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪೂರ್ಣಗೊಳಿಸಲಾಗುವುದು’ ಎಂದರು.

ಶಿಬಿರ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಎಐಸಿಸಿ ಸೂಚನೆಯನ್ವಯ ಪಕ್ಷದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದಿಷ್ಟ ಜವಾಬ್ದಾರಿ ನೀಡಲಾಗಿದ್ದು, ತಿಂಗಳಲ್ಲಿ 15-20 ದಿನ ಪಕ್ಷಕ್ಕೆ ಸಮಯ ನೀಡಬೇಕು. ಪಕ್ಷದ ಸಿದ್ಧಾಂತದ ಪರವಾಗಿರುವ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ರಮ ರೂಪಿಸಬೇಕು’ ಎಂದರು.

‘ಈ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು. ಮಾಧ್ಯಮಗಳ ಮುಂದೆ ಮಾತನಾಡಿದ್ದು ಗೊತ್ತಾದರೆ ನಾವು ಸಮಯ ಬಂದಾಗ ಅವರನ್ನು ಯಾವ ಕಣ್ಣಿಂದ ನೋಡಬೇಕೋ ಆ ಮೂಲಕ ನೋಡುತ್ತೇವೆ. ಇದು ರಾಷ್ಟ್ರ ನಾಯಕರು ನೀಡಿರುವ ಎಚ್ಚರಿಕೆ. ಶಿಬಿರದ ನಂತರ ಅಂತಿಮ ನಿರ್ಣಯಗಳನ್ನು ಪ್ರಕಟಿಸಲಾಗುವುದು’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಬೂತ್‌ ಮಟ್ಟದಿಂದ ಕೆಪಿಸಿಸಿ ಮಟ್ಟದವರೆಗೆ ಪಕ್ಷ ಸಂಘಟಿತಗೊಂಡರೆ ಚುನಾವಣೆಯಲ್ಲಿ ಗೆಲುವು ಕಷ್ಟದ ಕೆಲಸವಲ್ಲ. ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ಅಧಿಕಾರಕ್ಕೆ ಬರಬೇಕಿದೆ. ಆದ್ದರಿಂದ ಈ ಸವಾಲು ಸ್ವೀಕರಿಸಬೇಕು’ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮುಖಂಡರಾದ ವೀರಪ್ಪ ಮೊಯಿಲಿ, ಜಿ. ಪರಮೇಶ್ವರ, ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT