ಗುರುವಾರ , ಮಾರ್ಚ್ 30, 2023
21 °C

ಪ್ರತಿಕೃತಿ ಸುಟ್ಟ ತಕ್ಷಣ ನಾನು, ನನ್ನ ಪ್ರೀತಿಸುವವರು ಸುಟ್ಟೋಗಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯವರಂತಹ ಜಾತಿವಾದಿಗಳು ಬೇರಾರು ಇಲ್ಲ, ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದವರ ಪಕ್ಷಕ್ಕೆ ಸ್ವಾರ್ಥಕ್ಕಾಗಿ ಹಲವರು ಹೋಗುತ್ತಿದ್ದಾರೆ ಎಂದು ಭಾಷಣದಲ್ಲಿ ಹೇಳಿದ್ದೆ. ಆದರೆ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಮಗೆ ಬೇಕಾದಂತೆ ತಿರುಚಿ, ನನ್ನ ವಿರುದ್ಧ ಹೋರಾಟ ಮಾಡಿದ್ದಾರೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, 'ನನ್ನ ಪ್ರತಿಕೃತಿ ಸುಟ್ಟ ತಕ್ಷಣ ನಾನು ಸುಟ್ಟೋಗಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ. ಎಲ್ಲರೂ ಸಮಾನವಾಗಿರಬೇಕು, ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು, ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು ಎಂಬ ನನ್ನ ನಿಲುವಿಗೆ ನಾನು ಈಗಲೂ ಬದ್ಧ' ಎಂದಿದ್ದಾರೆ.

'ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನು ಕೊಟ್ಟಿದ್ದಾರೆ? ಎಂದು ಕೆಲವರು ಕೇಳ್ತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವರಿದ್ದಾರಾ? ಮುಖ್ಯಮಂತ್ರಿಯಾಗಿ ಒಂದು ಸಮಾಜದ ಅಭಿವೃದ್ಧಿ ಮಾತ್ರ ಬಯಸುವುದು ಸರಿಯೇ? ಹೀಗಾಗಿ ಅವಕಾಶದಿಂದ ವಂಚಿತರಾದ ಎಲ್ಲ ಜನರ ಪರ ನಾನು ಕೆಲಸ ಮಾಡಿದ್ದೇನೆ' ಎಂದು ಹೇಳಿದ್ದಾರೆ.

'ಕೆಂಪೇಗೌಡರು, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರಥ, ಕೃಷ್ಣ, ವೇಮನ ಮತ್ತಿತರರ ಜಯಂತಿ ಆಚರಣೆ ಮಾಡಿದ್ದು ನಮ್ಮ ಸರ್ಕಾರ.  ಜಾತಿ, ಧರ್ಮಗಳನ್ನು ಮೀರಿ ಸಾಧನೆಯನ್ನು ಮಾಡಿದವರ ಜಯಂತಿ ಆಚರಣೆಗೆ ಜಾತಿ ಏಕೆ?  ಸಮಾಜದಲ್ಲಿ ಜಾತಿ ವಿಷಬೀಜ ಬಿತ್ತುವ ಕೊಳಕು ಮನಸ್ಸಿನವರಿಗೆ ಮಾತ್ರ ನಾನು ಜಾತಿವಾದಿಯಂತೆ ಕಾಣುವುದು. ನನ್ನನ್ನು ಜಾತಿವಾದಿ ಎನ್ನುವವರು ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಸಾಲಮನ್ನಾ ಮುಂತಾದ ಯೋಜನೆಗಳ ಫಲಾನುಭವಿಗಳ ಬಳಿ ಸಿದ್ದರಾಮಯ್ಯ ಜಾತಿವಾದಿಯೇ ಎಂದು ಕೇಳಿ' ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು