ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಡು ಗುತ್ತಿಗೆ ದರ್ಬಾರ್‌; ಇ–ಟೆಂಡರ್‌ ಇಲ್ಲದೆ ₹50 ಕೋಟಿ ಮೊತ್ತದ ಕಾಮಗಾರಿ

Last Updated 1 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕೇಂದ್ರ ಕಚೇರಿ ಆವರಣದಲ್ಲೇ ಇರುವ ನಂ.6ನೇ ಕಟ್ಟಡಗಳ ಉಪ ವಿಭಾಗದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಇ–ಸಂಗ್ರಹಣೆ ಮತ್ತು ಕೆಟಿಪಿಪಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟು 1,000ಕ್ಕೂ ಹೆಚ್ಚು ಕಾಮಗಾರಿಗಳನ್ನು ತುಂಡು ಗುತ್ತಿಗೆ ಮೂಲಕ ನಡೆಸಲಾಗಿದೆ.

ಒಂದೇ ಉಪ ವಿಭಾಗದಲ್ಲಿ ಎರಡುವರ್ಷಗಳ ಅವಧಿಯಲ್ಲಿ ₹ 50 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ತುಂಡು ಗುತ್ತಿಗೆ ಮೂಲಕ ನಿರ್ವಹಿಸಲಾಗಿದೆ. ಬೆರಳೆಣಿಕೆಯಷ್ಟು ಗುತ್ತಿಗೆದಾರರೇ ಈ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಮಾಹಿತಿ ದಾಖಲೆಗಳಲ್ಲಿದೆ.

ಪಿಡಬ್ಲ್ಯುಡಿ ಪ್ರಧಾನ ಕಚೇರಿ, ನಗರದ ವಿವಿಧ ನ್ಯಾಯಾಲಯಗಳು, ಕೆಲವು ಸರ್ಕಾರಿ ಕಚೇರಿಗಳು, ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ, ಜೀವನ್‌ಭಿಮಾ ನಗರದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯ ವಸತಿ ಗೃಹ ಸೇರಿದಂತೆ ಹಲವು ಕಟ್ಟಡಗಳ ನಿರ್ವಹಣೆ, ದುರಸ್ತಿಯು ನಂ.2ನೇ ಕಟ್ಟಡಗಳ ವಿಭಾಗ, ನಂ.6ನೇ ಕಟ್ಟಡಗಳ ಉಪ ವಿಭಾಗದ ವ್ಯಾಪ್ತಿಯಲ್ಲಿದೆ.

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆದಿರುವ ‘ಬಿಲ್‌ ರಿಜಿಸ್ಟರ್‌’ ಕಡತದ ಪ್ರತಿಯಲ್ಲಿ ಇರುವ ಮಾಹಿತಿ ಪ್ರಕಾರ, 2018ರ ಅಕ್ಟೋಬರ್‌ನಿಂದ 2019ರ ಅಕ್ಟೋಬರ್‌ವರೆಗೆ 771 ಕಾಮಗಾರಿಗಳಿಗೆ ಬಿಲ್‌ ಪಾವತಿಸಲಾಗಿದೆ. ಈ ಪೈಕಿ ₹ 5ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳ ಸಂಖ್ಯೆ 711. 2019ರ ಅಕ್ಟೋಬರ್‌ನಿಂದ 2020ರ ಅಕ್ಟೋಬರ್‌ವರೆಗೆ 450 ಕಾಮಗಾರಿಗಳಿಗೆ ಬಿಲ್‌ ನೀಡಿದ್ದು, 250ಕ್ಕೂ ಹೆಚ್ಚು ಕಾಮಗಾರಿಗಳು ₹ 5 ಲಕ್ಷದ ಮಿತಿಯೊಳಗೆ ಇವೆ.

ಪಿಡಬ್ಲ್ಯುಡಿ ‘ಕೋಡ್‌’ (ಡಿ–ಕೋಡ್‌) ಪ್ರಕಾರ, ಒಂದೇ ಕಟ್ಟಡದ ಕಾಮಗಾರಿಗಳನ್ನು ವಿಭಜಿಸಲು ಅವಕಾಶವಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಪ್ರಕಾರ, ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಇ– ಟೆಂಡರ್‌ ಮೂಲಕ ಗುತ್ತಿಗೆ ನೀಡುವುದು ಕಡ್ಡಾಯ. ಆದರೆ, ಈ ಉಪ ವಿಭಾಗದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ವಿಭಜಿಸಿ ಲಕೋಟೆ ಮಾದರಿಯಲ್ಲಿ (ಮ್ಯಾನ್ಯುಯಲ್‌) ಟೆಂಡರ್‌ ನಡೆಸಲಾಗಿದೆ.

ಒಂದೇ ದಿನ ಹಲವು ಬಿಲ್‌: ಒಂದೇ ಕಟ್ಟಡದ ಶೌಚಾಲಯ ದುರಸ್ತಿ, ಟೈಲ್ಸ್‌ ಅಳವಡಿಕೆ, ಬಣ್ಣ ಬಳಿಯುವ ಕಾಮಗಾರಿಗಳನ್ನು ತುಂಡು ತುಂಡಾಗಿ ವಿಭಜಿಸಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಒಬ್ಬನೇ ಗುತ್ತಿಗೆದಾರ ಕಾಮಗಾರಿ ನಿರ್ವಹಿಸಿದ್ದು, ಎಲ್ಲ ಬಿಲ್‌ಗಳನ್ನೂ ಒಂದೇ ದಿನ ಪಾವತಿ ಮಾಡಲಾಗಿದೆ.

ಭದ್ರತಾ ಸಿಬ್ಬಂದಿ, ಕಟ್ಟಡ ನಿರ್ವಹಣಾ ಸಿಬ್ಬಂದಿಯ ಪೂರೈಕೆಯನ್ನೂ ‘ತುಂಡು ಗುತ್ತಿಗೆ’ ಮೂಲಕವೇ ಮಾಡಿರುವುದೂ ದಾಖಲೆಗಳಲ್ಲಿದೆ. ಕೆಟಿಟಿಪಿ ಕಾಯ್ದೆಯ ಸೆ‌ಕ್ಷನ್‌ 4ಜಿ ಅಡಿಯಲ್ಲಿ ವಿನಾಯಿತಿ ಪಡೆದು ಕೆಲವು ಕಾಮಗಾರಿಗಳ ವಿವರಗಳನ್ನು ಬಿಲ್‌ ಪುಸ್ತಕದಲ್ಲಿ ನಮೂದಿಸದೇ, ಪುಟಗಳನ್ನು ಖಾಲಿ ಬಿಡಲಾಗಿದೆ.

2015ರಲ್ಲಿ ಇದೇ ಉಪ ವಿಭಾಗದಲ್ಲಿ ‘ತುಂಡು ಗುತ್ತಿಗೆ ಹಗರಣ’ ನಡೆದಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಆಗಿನ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್‌ ಬಿ.ಅಡಿ ಅವರು ಹಲವು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು.

ಪರಿಶೀಲಿಸಿ ಕ್ರಮ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಂ.2ನೇ ಕಟ್ಟಡಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ್‌ ಮೂರ್ತಿ, ‘ಒಂದೇ ಕಟ್ಟಡದ ಕಾಮಗಾರಿಗಳನ್ನು ವಿಭಜಿಸಿ ತುಂಡು ಗುತ್ತಿಗೆ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಈ ಸ್ಥಾನಕ್ಕೆ ಬಂದ ಬಳಿಕ ಅಂತಹ ಕಾಮಗಾರಿಗೆ ಒಪ್ಪಿಗೆ ನೀಡಿಲ್ಲ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಎಲ್ಲ ಕಡೆಗಳಲ್ಲೂ ನಡೆದಿದೆ’
‘ಪಿಡಬ್ಲ್ಯುಡಿ ಅಧೀಕ್ಷಕ ಎಂಜಿನಿಯರ್‌ ಒಪ್ಪಿಗೆ ಪಡೆದು ಅನುದಾನವನ್ನು ₹ 5 ಲಕ್ಷಕ್ಕಿಂತ ಕಡಿಮೆ ವೆಚ್ಚಕ್ಕೆ ವಿಭಜಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಇದು ನಮ್ಮ ಉಪ ವಿಭಾಗಕ್ಕೆ ಸೀಮಿತವಲ್ಲ. ನಂ.1 ಮತ್ತು ನಂ.2ನೇ ಕಟ್ಟಡ ವಿಭಾಗಗಳ ವ್ಯಾಪ್ತಿಯಲ್ಲಿರುವ ಎಲ್ಲ ಉಪ ವಿಭಾಗಗಳಲ್ಲೂ ನಡೆದಿದೆ. ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ಎಂ.ಎಸ್‌. ಬಿಲ್ಡಿಂಗ್‌ಗಳ ನಿರ್ವಹಣೆ, ದುರಸ್ತಿ ಕಾಮಗಾರಿಗಳೂ ಇದೇ ರೀತಿ ನಡೆದಿವೆ’ ಎಂದು ನಂ. 6ನೇ ಕಟ್ಟಡಗಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ಆರ್‌. ನಾರಪ್ಪ ಪ್ರತಿಕ್ರಿಯಿಸಿದರು.

*
ಸಾವಿರಕ್ಕಿಂತ ಹೆಚ್ಚು ತುಂಡು ಗುತ್ತಿಗೆ ನೀಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತರು ಸ್ವಯಂಪ್ರೇರಿತ ತನಿಖೆ ನಡೆಸಬೇಕು
-ರವಿಕೃಷ್ಣಾ ರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT