ಶನಿವಾರ, ಮಾರ್ಚ್ 25, 2023
27 °C
ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸು

ಆರ್ಥಿಕ ನಷ್ಟಕ್ಕೆ ಇಲಾಖೆಗಳನ್ನೇ ಹೊಣೆ ಮಾಡಿ: ಸರ್ಕಾರಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಯಾವ ಇಲಾಖೆಯಿಂದ ಅನಗತ್ಯ ಆರ್ಥಿಕ ನಷ್ಟ ಆಗುತ್ತಿದೆಯೋ ಅಂತಹ ಇಲಾಖೆಗಳಿಗೆ ಕಡಿವಾಣ ಹಾಕಿ, ಅವರನ್ನೇ ಜವಾಬ್ದಾರರನ್ನಾಗಿ ಮಾಡಿ ದಂಡ ವಿಧಿಸಬೇಕು’ ಎಂದು ಕುಮಾರ್‌ ಬಂಗಾರಪ್ಪ ಅಧ್ಯಕ್ಷತೆಯ ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿಯ 4ನೇ ವರದಿಯಲ್ಲಿ ಹಲವು ಇಲಾಖೆಗಳಲ್ಲಿ ಅನಗತ್ಯವಾಗಿ ಆರ್ಥಿಕ ನಷ್ಟ ಆಗುತ್ತಿರುವುದನ್ನು ಗುರುತಿಸಿದ್ದು, ತೆರಿಗೆದಾರರ ಹಣ  ಪೋಲಾಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದೆ.

ಹೊಸ ಹೊಸ ಯೋಜನೆಗಳನ್ನು ಪ್ರಕಟಿಸುವುದರ ಬದಲು, ಈಗಾಗಲೇ ಪ್ರಕಟಿಸಿರುವ ಯೋಜನೆಗಳನ್ನೇ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಸರ್ಕಾರದ ಬೊಕ್ಕಸದಿಂದ ಖರ್ಚಾಗುವ ಪ್ರತಿ ಒಂದು ರೂಪಾಯಿಯು ಬಡವರು, ಹಿಂದುಳಿದವರು ಮತ್ತು ದೀನ– ದಲಿತರ ಕಲ್ಯಾಣಕ್ಕೆ ಅನುಕೂಲವಾಗುವಂತೆ ದೀರ್ಘಾವಧಿಯ ಯೋಜನೆ ಸಿದ್ಧಪಡಿಸಿ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತ ವರ್ಗಗಳ ಇಲಾಖೆಯ ಅಧೀನಕ್ಕೆ ಸೇರಿದ ಸಾಕಷ್ಟು ಸ್ವತ್ತುಗಳಿವೆ. ಇವುಗಳು ದಾಖಲೆಗಳಲ್ಲಿ ಲೆಕ್ಕ ಇಲ್ಲ. ಅವೆಲ್ಲವನ್ನೂ ಸರ್ಕಾರಿ ದಾಖಲೆಗಳ ವ್ಯಾಪ್ತಿಗೆ ತರಬೇಕು. ಅದರಲ್ಲೂ ಬೆಂಗಳೂರಿನಲ್ಲಿ ಅತ್ಯಂತ ಬೆಲೆಬಾಳುವ ಸ್ವತ್ತುಗಳನ್ನು ಹೊಂದಿವೆ. ಅವುಗಳನ್ನು ಸರ್ಕಾರದ ದಾಖಲೆಯ ವ್ಯಾಪ್ತಿಗೆ ಒಳಪಡಿಸಬೇಕು ಮತ್ತು ಇವುಗಳಿಂದ ಸರ್ಕಾರಕ್ಕೆ ಆದಾಯ ಬರುವಂತೆ ವ್ಯವಸ್ಥೆ ಮಾಡಬೇಕಾಗಿದೆ ಎಂದು ತಾಕೀತು ಮಾಡಿದೆ.

‘ಯಾವುದೇ ದಾಖಲೆಗಳಿಲ್ಲದೇ, ಯಾರೋ ಎಲ್ಲೋ ಕುಳಿತುಕೊಂಡು ವ್ಯವಹಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧ. ಇದಕ್ಕೆ ಆರ್ಥಿಕ ಇಲಾಖೆ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಮಿತಿ ಸೂಚಿಸಿದೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರಸ್ತೆಯ ಮಧ್ಯದಲ್ಲಿ ನಿಂತುಕೊಂಡು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಾರೆ. ಅದರ ಬದಲು ವಾಹನಗಳು ಟೋಲ್‌ಗೇಟ್‌ ದಾಟಿದ ನಂತರ ಅಲ್ಲಿಯೇ ಒಂದು ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವಾಹನ ತಪಾಸಣೆ ಮಾಡುವುದರಿಂದ ಶೇ 50 ರಷ್ಟು ಆದಾಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ಯಾವ ಉದ್ದೇಶಕ್ಕಾಗಿ ಇಲಾಖೆಗಳಲ್ಲಿ ಗುರುತು ಮಾಡಲಾಗಿದೆಯೋ ಆ ಉದ್ದೇಶಕ್ಕಾಗಿಯೇ ಉಪಯೋಗ ಮಾಡುವಂತೆ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಮತ್ತು ಅದಕ್ಕಾಗಿ ಸೂಕ್ತ ನಿಯಮ ರೂಪಿಸಬೇಕು ಎಂದೂ ಶಿಫಾರಸು ಮಾಡಿದೆ.

ನಿರಂತರ ಜ್ಯೋತಿಯಿಂದ ವಿದ್ಯುತ್‌ ಪೋಲು
ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ವರದಿ ತಿಳಿಸಿದೆ.

ನಿರಂತರ ಜ್ಯೋತಿ ಯೋಜನೆಯಡಿ ಕಳೆದ 7–8 ತಿಂಗಳಿಂದ 24 ಗಂಟೆಗಳೂ ಬಲ್ಬುಗಳು ಉರಿಯುತ್ತಿವೆ. ಇದರಿಂದ ಹಗಲಿನಲ್ಲಿ ವಿದ್ಯುತ್‌ ಪೋಲಾಗುತ್ತಿದೆ. ಇದಕ್ಕೆ ಗ್ರಾಮ ಪಂಚಾಯಿತಿಯವರು ಹಣ ಕಟ್ಟುತ್ತಿದ್ದಾರೆ. ಇಂಧನ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಈ ಬಗ್ಗೆ ಗಮನಹರಿಸಿ ಲೋಪ ಸರಿಪಡಿಸಬೇಕು ಎಂದು ಹೇಳಿದೆ.

ಈಗಾಗಲೇ ಆರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಹಣ ಮೀಸಲಿಡಬೇಕು. ಯಾವುದೇ ಒಂದು ಯೋಜನೆ ಮಾಡುವಾಗ ಎಷ್ಟು ಅನುಕೂಲವಾಗುತ್ತದೆ. ಎಷ್ಟು ಸ್ವತ್ತು ಸೃಷ್ಟಿಯಾಗುತ್ತದೆ ಮತ್ತು ಅದರಿಂದ ಎಷ್ಟು ಉದ್ಯೋಗ ಸೃಷ್ಟಿ ಆಗುತ್ತದೆ ಎಂಬುದನ್ನು ಗಮನದಲ್ಲಿ ಹಾಗೂ ದೂರದೃಷ್ಟಿ ಇಟ್ಟುಕೊಂಡು ಯೋಜನೆ ಸಾಕಾರಗೊಳಿಸಬೇಕು ಎಂದೂ ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು