ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಿನ್ನೆಲೆ: ಇ‌–ಆಸ್ಪತ್ರೆಗೆ ಅನುದಾನ ಇಲ್ಲವೆಂದ ಕೇಂದ್ರ ಸರ್ಕಾರ

Last Updated 3 ಡಿಸೆಂಬರ್ 2020, 20:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇ–ಹಾಸ್ಪಿಟಲ್ ಸೇವೆ ಪ್ರಾರಂಭಿಸುವ ಯೋಜನೆಗೆ ಕೇಂದ್ರ ಸರ್ಕಾರವು ಕೋವಿಡ್ ಕಾರಣ ನೀಡಿ ಅನುದಾನ ನಿರಾಕರಿಸಿದೆ.

ಇದರಿಂದಾಗಿ ಗ್ರಾಮೀಣ ಭಾಗದ ಜನತೆಗೆ ತಂತ್ರಾಂಶದ ನೆರವಿನಿಂದ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ರಾಜ್ಯದಲ್ಲಿ ಜಾರಿ ಮಾಡಲಾಗಿದ್ದ ಇ–ಹಾಸ್ಪಿಟಲ್‌ ವ್ಯವಸ್ಥೆಯಡಿ 4 ಕೋಟಿಗೂ ಅಧಿಕ ಮಂದಿ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ 47 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನ ಮಾಡಿ, ಜಿಲ್ಲಾ ಆಸ್ಪತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಎರಡನೇ ಹಂತದಲ್ಲಿ ಆರೋಗ್ಯ ಇಲಾಖೆಯು ರಾಜ್ಯದ 175 ಆಸ್ಪತ್ರೆಗಳಲ್ಲಿ ಇ–ಹಾಸ್ಪಿಟಲ್ ಸೇವೆಯನ್ನು ಅನುಷ್ಠಾನ ಮಾಡುತ್ತಿದೆ.ಇದರಲ್ಲಿ 122 ತಾಲ್ಲೂಕು ಆಸ್ಪತ್ರೆಗಳು ಸೇರಿವೆ.

ಈ ಸಾಲಿನಲ್ಲಿಯೇ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 156 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇ–ಹಾಸ್ಟಿಟಲ್ ಸೇವೆಯನ್ನು ಪ್ರಾರಂಭಿಸುವ ಸಂಬಂಧ ಆರೋಗ್ಯ ಇಲಾಖೆಯು ಯೋಜನೆಯನ್ನು ರೂಪಿಸಿ, ಕೇಂದ್ರ ಸರ್ಕಾರಕ್ಕೆ ಪ‍್ರಸ್ತಾವನೆಯನ್ನು ಸಲ್ಲಿಸಿತ್ತು. ಇದಕ್ಕೆ ಸುಮಾರು ₹ 100 ಕೋಟಿ ವೆಚ್ಚ ಆಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಆದರೆ, ಕೋವಿಡ್‌ ಸಂಬಂಧ ವೈದ್ಯಕೀಯ ಉಪಕರಣಗಳ ಖರೀದಿ, ವೈಯಕ್ತಿಕ ಸುರಕ್ಷಾ ಸಾಧನಗಳ ಪೂರೈಕೆ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚಿದ ಕಾರಣ ನೀಡಿ, ಇ–ಹಾಸ್ಪಿಟಲ್ ಸೇವೆಗೆ ಅನುದಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ಶೇ 60ರಷ್ಟು ಕೇಂದ್ರದ ಪಾಲು: ‘ಇ- ಹಾಸ್ಪಿಟಲ್‌ ವ್ಯವಸ್ಥೆಯಿಂದ ರೋಗಿಗಳು ಆಸ್ಪತ್ರೆಗಳಲ್ಲಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ. ಪ್ರತಿ ಬಾರಿಯೂ ಹಿಂದಿನ ಚಿಕಿತ್ಸೆಯ ವಿವರವನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ. ಹಾಗಾಗಿ ಈ ಸೇವೆಯನ್ನು ವಿಸ್ತರಿಸಲು ಮುಂದಾಗಿದ್ದೆವು. ಇದಕ್ಕೆ ಕೇಂದ್ರ ಸರ್ಕಾರವು ನೀಡಬೇಕಿದ್ದ ಶೇ 60ರಷ್ಟು ಅನುದಾನವನ್ನು ಕೋವಿಡ್ ಕಾರಣ ಮಂಜೂರು ಮಾಡಿಲ್ಲ. ಪೂರಕ ಬಜೆಟ್‌ಗಾಗಿ ಕಾಯುತ್ತಿದ್ದೇವೆ’
ಎಂದು ರಾಜ್ಯ ಇ–ಹಾಸ್ಪಿಟಲ್ ಉಪ ನಿರ್ದೇಶಕ ಡಾ. ಅರುಣ್ ಅವರು ತಿಳಿಸಿದರು.

ಅಂಕಿ– ಅಂಶಗಳು

140

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇ ಹಾಸ್ಪಿಟಲ್‌ಗಳು

4.06 ಕೋಟಿ ‌

ನೋಂದಾಯಿಸಿಕೊಂಡು ಸೇವೆ ಪಡೆದವರು

ಈ ವರ್ಷ ತಿಂಗಳುವಾರು ಸೇವೆ ಪಡೆದವರು

ತಿಂಗಳು; ಸೇವೆ ಪಡೆದವರು

ಜನವರಿ; 13,89,487

ಫೆಬ್ರವರಿ; 12,84,067

ಮಾರ್ಚ್; 11,48,830

ಏಪ್ರಿಲ್; 5,00,563

ಮೇ; 6,92,364

ಜೂನ್; 7,67,498

ಜುಲೈ; 6,37,105

ಆಗಸ್ಟ್; 6,81,731

ಸೆಪ್ಟೆಂಬರ್; 7,66,807

ಅಕ್ಟೋಬರ್; 7,38,031

ನವೆಂಬರ್; 8,68,070

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT