ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಸಂತ್ರಸ್ತೆಯರ ಪರವೋ, ಸ್ವಾಮೀಜಿ ಪರವೋ: ಎಚ್‌.ವಿಶ್ವನಾಥ್ ಪ್ರಶ್ನೆ

Last Updated 4 ಸೆಪ್ಟೆಂಬರ್ 2022, 11:48 IST
ಅಕ್ಷರ ಗಾತ್ರ

ಮೈಸೂರು: ‘ಮುರುಘಾ ಶರಣರ ವಿರುದ್ಧದ‍ಪೋಕ್ಸೊ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದರಿಂದಲೇ ಸಾಕ್ಷ್ಯಗಳು ನಾಶವಾಗಿವೆ. ಸರ್ಕಾರ ಸಂತ್ರಸ್ತೆಯರ ಪರವಾಗಿದೆಯೋ, ಆರೋಪಿ ಸ್ವಾಮೀಜಿ ಪರವಾಗಿದೆಯೋ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಪ್ರಶ್ನಿಸಿದರು.

‘ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದಾಗ ಆರೋಪಿಯೇ ಅಪರಾಧಿಯಾಗುತ್ತಾನೆ. ಆದರೆ, ಚಿತ್ರದುರ್ಗ ಎಸ್ಪಿ ಆರೋಪಿಯನ್ನು ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳಲಿಲ್ಲ. ಬೆಡ್‌ಶೀಟ್‌, ಹಾಸಿಗೆ, ಹೊದಿಕೆಗಳೆಲ್ಲ ಬದಲಾದ ಮೇಲೆ, ಮಠದಲ್ಲಿದ್ದ ಸಾಕ್ಷ್ಯಗಳು ನಾಶವಾದ ನಂತರ ಬಂಧಿಸಲಾಗಿದೆ. ಎಷ್ಟು ಉದಾಸೀನ?’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಆಕ್ರೋಶ ವ್ಯಕ್ತಪಡಿಸಿದರು.

‘ಆರೋಪಿಯ ಪರವಾಗಿಯೇ ಹಲವು ಮಠಗಳ ಸ್ವಾಮೀಜಿಗಳು, ಜನಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ಅವರನ್ನೂ ಪ್ರಕರಣದಡಿ ಬಂಧಿಸಬೇಕು. ಪೋಕ್ಸೊ ಎಷ್ಟು ಗಟ್ಟಿಯಾದ ಕಾಯ್ದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ’ ಎಂದು ಕೇಳಿದರು.

‘ಅಪರಾಧಿಗಳು ಮಠದೊಳಗೇ ಇದ್ದರೂ ಪೊಲೀಸರು ಹುಡುಕುತ್ತಿದ್ದಾರೆ. ಕರ್ತವ್ಯ ಲೋಪ ಎಸಗಿದ ಚಿತ್ರದುರ್ಗ ಎಸ್ಪಿಯನ್ನು ಅಮಾನತುಗೊಳಿಸಬೇಕು. ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಯನ್ನು ಖಾವಿಯಲ್ಲಿ ಕರೆದೊಯ್ಯುತ್ತಾರಾ’ ಎಂದು ಪ್ರಶ್ನಿಸಿದರು.

‘ಮಕ್ಕಳಿಗೆ ನ್ಯಾಯ ಸಿಗುವುದೆಂದು ಇಡೀ ರಾಜ್ಯದ ಜನತೆ ಸರ್ಕಾರದತ್ತ ನೋಡುತ್ತಿದೆ ಎಂಬ ಎಚ್ಚರ ಇರಲಿ. ಸಾಮಾಜಿಕ ಹೋರಾಟಗಾರರಿಗೆ ರಕ್ಷಣೆ ನೀಡುವ ಕೆಲಸವಾಗಬೇಕು. ಮಕ್ಕಳಿಗೆ ನೆರವಾಗಿರುವ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಂ ಕಾರ್ಯ ಅಭಿನಂದನೀಯ. ಅವರಿಗೂ ಬೆದರಿಕೆ ಕರೆಗಳು ಬರುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದರು.

ಲೆಕ್ಕ ಕೊಡಿ: ‘ಮಠಗಳಿಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿರುವುದು ಮಕ್ಕಳ ಭವಿಷ್ಯ ಹಾಳು ಮಾಡುವುದಕ್ಕಾ? ‌ಸ್ವಾಮೀಜಿ ಪರವಾಗಿ ನಿಂತಿರುವ, ಈ ನೆಲದ ಕಾನೂನಿಗೆ ಗೌರವ ನೀಡದ ಮಠಗಳಿಂದ ಅನುದಾನ ವಾಪಸ್‌ ಪಡೆಯಬೇಕು. ಅದಕ್ಕೆ ಸಂಬಂಧಿಸಿದ ಲೆಕ್ಕ ಕೊಡಬೇಕು’ ಎಂದು ಆಗ್ರಹಿಸಿದರು.

‘ವಿವಾಹಿತರೇ ಮಠಾಧಿಪತಿಗಳಾಗಲಿ’:‘ನಾಡಿನ ಬಹುತೇಕ ಮಠಗಳ ಪೀಠಾಧಿಪತಿಗಳು ಬ್ರಹ್ಮಚಾರಿಗಳಲ್ಲ. ಸ್ವಾಮೀಜಿ ವೇಷ ಧರಿಸಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ವಿವಾಹಿತರೇ ಮಠಾಧಿಪತಿಗಳಾಗಬೇಕು’ ಎಂದು ವಿಶ್ವನಾಥ್ ಹೇಳಿದರು.

‘ಜಗದ್ದುರುಗಳೆಲ್ಲ ಜಾತಿ ಗುರುಗಳಿದ್ದಾರೆ. ಸಮುದಾಯ ಬೆಂಬಲಕ್ಕಿದೆ ಎಂಬ ಹುಸಿ ನಂಬಿಕೆ ಅವರಿಗಿದೆ. ಕಾನೂನು–ನ್ಯಾಯಾಲಯ ದೊಡ್ಡದೇ ಹೊರತು, ಧರ್ಮ– ಜಾತಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT