ಶುಕ್ರವಾರ, ಜೂನ್ 25, 2021
29 °C
ಮುನವಳ್ಳಿಯ ಹಳೆ ಸೇತುವೆ ಮುಳುಗಡೆ

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರಿದ ಜೋರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾನುವಾರವೂ ಮಳೆ ಮುಂದುವರಿದಿದೆ.

ಶನಿವಾರ ರಾತ್ರಿಯಿಂದಲೂ ಜೋರು ಮಳೆಯಾಗುತ್ತಿದೆ. ಇದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ನದಿಗಳಿಗೆ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣವೂ ಜಾಸ್ತಿಯಾಗಿದೆ. ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಖಾನಾಪುರ ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ಸವದತ್ತಿ ತಾಲ್ಲೂಕಿನ ನವಿಲುತೀರ್ಥ (ಮಲಪ್ರಭಾ) ಜಲಾಶಯಕ್ಕೆ 19,990 ಕ್ಯುಸೆಕ್ ಒಳಹರಿವಿದ್ದು, 11,264 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಆ ತಾಲ್ಲೂಕಿನ ಮುನವಳ್ಳಿಯ ಹಳೆಯ ಸೇತುವೆ ಮುಳುಗಡೆಯಾಗಿದೆ. ಒಳಹರಿವಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಹೊರಹರಿವು ಕೂಡ ಜಾಸ್ತಿಯಾಗಲಿದ್ದು, ನದಿ ತೀರದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಮುನವಳ್ಳಿ ಪುರಸಭೆಯಿಂದ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಹಿಡಕಲ್ (ಘಟಪ್ರಭಾ) ಜಲಾಶಯವೂ ಬಹುತೇಕ ಭರ್ತಿಯಾಗಿದೆ. 18,052 ಕ್ಯುಸೆಕ್‌ ಒಳಹರಿವಿದ್ದು, 15,203 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಬೆಳಗಾವಿ ಹಾಗೂ ಹುಕ್ಕೇರಿ ತಾಲ್ಲೂಕಿನಲ್ಲಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ನೂರಾರು ಎಕರೆ ಭತ್ತ ಮೊದಲಾದ ಬೆಳೆ ಜಲಾವೃತವಾಗಿದೆ.

ಕೃಷ್ಣಾ ನದಿಗೆ ಹೆಚ್ಚಿನ ನೀರು:

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ ಸೇರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನೆರೆಯ ರಾಜಾಪುರ ಬ್ಯಾರೇಜ್‌ನಿಂದ 90ಸಾವಿರ ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 15ಸಾವಿರ ಕ್ಯುಸೆಕ್‌ ಸೇರಿ 1.05 ಲಕ್ಷ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರಿಕೊಳ್ಳುತ್ತಿದೆ. ಈ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯ ಶೇ 86ರಷ್ಟು ಭರ್ತಿಯಾಗಿದ್ದು, ಅಲ್ಲಿಂದ ನದಿಗೆ ನೀರು ಬಿಡುತ್ತಿಲ್ಲ.

ನಿಪ್ಪಾಣಿ ತಾಲ್ಲೂಕಿನ ಜತ್ರಾಟ-ಭೀವಶಿ ಸೇತುವೆ ಮುಳುಗಡೆ ಹಂತ ತಲುಪಿದೆ.

ನಗರದಲ್ಲಿ ಜೋರು ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚರಂಡಿಗಳು ಉಕ್ಕಿ ಹರಿದ ಪರಿಣಾಮ ರಸ್ತೆಗಳಲ್ಲಿ ನೀರು ಸಂಗ್ರಹವಾಗಿದೆ. ಜನರು ಹಾಗೂ ವಾಹನಗಳ ಸಂಚಾರ ಕಡಿಮೆ ಇದೆ. ಮಳೆರಾಯ ‘ಲಾಕ್‌ಡೌನ್‌’ ಸ್ಥಿತಿ ನಿರ್ಮಿಸಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು