ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿರುಗಾಳಿ– ಮಳೆ: ಮರ ಬಿದ್ದು ಕುರಿಗಾಹಿ, ಸಿಡಿಲಿಗೆ ವ್ಯಕ್ತಿ ಸಾವು

ಬಾಗಿದ ಬಾಳೆ; ಕಾರುಗಳು ಜಖಂ, ಗೂಡಂಗಡಿಗಳಿಗೆ ಹಾನಿ
Last Updated 18 ಮಾರ್ಚ್ 2023, 18:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವೆಡೆ ಶನಿವಾರ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಹಾಡ್ಲಿ ಗ್ರಾಮದಲ್ಲಿ ಮರ ಬಿದ್ದು ಕುರಿಗಾಹಿ ಶಿವಲಿಂಗೇಗೌಡ (60) ಎಂಬುವವರು ಹಾಗೂ ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಸೋನಾಳದಲ್ಲಿ ಸಿಡಿಲು ಬಡಿದು ಲಹು ಮಾಧವರಾವ್ ಬೀರ್ಗೆ(36) ಎಂಬುವರು ಮೃತಪಟ್ಟಿದ್ದಾರೆ.

ಮೈಸೂರು ವರದಿ: ಮೈಸೂರು ಭಾಗದ ಮಂಡ್ಯ, ಹಾಸನ ಮತ್ತು ಚಾಮರಾಜನಗರದಲ್ಲಿ ಶನಿವಾರ ಬಿರುಗಾಳಿ ಸಹಿತ ಮಳೆಯಿಂದ ಬೆಳೆನಷ್ಟವಾಗಿದ್ದು, ಹತ್ತಾರು ಮರಗಳು ಉರುಳಿ ಮನೆ, ವಾಹನಗಳಿಗೆ ಹಾನಿಯಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಹಾಡ್ಲಿ ಗ್ರಾಮದಲ್ಲಿ ಮರ ಬಿದ್ದು ಕುರಿಗಾಹಿ ಶಿವಲಿಂಗೇಗೌಡ ಅವರು ಕುರಿಗಳೊಂದಿಗೆ ಮನೆಗೆ ವಾಪಸಾಗುವಾಗ ಅವರ ಮೇಲೆ ಮರ ಬಿತ್ತು. ತೀವ್ರವಾಗಿ ಗಾಯಗೊಂಡ ಅವರನ್ನು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಜತೆಗೆ 1 ಹಸು, 3 ಕುರಿಗಳು ಮತ್ತು 3 ಮೇಕೆಗಳು ಕೂಡ ಸಾವಿಗೀಡಾದವು.

ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರ, ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ಮನೆಯ ಚಾವಣಿ ಹಾರಿ ಹೋದವು. ವಿವಿಧ ಗ್ರಾಮದಲ್ಲಿ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಪಟ್ಟಣದ ಹಾಸನ-ಮಡಿಕೇರಿ ರಸ್ತೆಯಲ್ಲಿ ಬಿರುಗಾಳಿಯ ರಭಸಕ್ಕೆ ರಸ್ತೆಯ ಬದಿಯಲ್ಲಿದ್ದ ಅನೇಕ ಹೂವಿನ ಅಂಗಡಿಗಳು, ಸಂಚಾರಿ ಕ್ಯಾಂಟೀನ್‌ಗಳು, ಗೂಡಂಗಡಿಗಳು ಮತ್ತು ತರಕಾರಿ ಅಂಗಡಿಗಳ ಮೇಲೆ ಹೊದಿಸಿದ್ದ ಟಾರ್ಪಲ್‌‌ಗಳು ಕಿತ್ತು ಹೋದವು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮದಲ್ಲಿ ಶುಕ್ರವಾರ ಬಿದ್ದ ಬಿರುಗಾಳಿ ಸಹಿತ ಮಳೆಗೆ ಸುಂದ್ರಮ್ಮ ಹಾಗೂ ಮಹಾದೇವಸ್ವಾಮಿ ಅವರ ಬಾಳೆ ಫಸಲು ನೆಲಕಚ್ಚಿದೆ.

ಹುಬ್ಬಳ್ಳಿ ವರದಿ: ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಶನಿವಾರ ಗುಡುಗು, ಸಿಡಿಲು ಮತ್ತು ಆಲಿಕಲ್ಲು ಸಹಿತ ಮಳೆ ಸುರಿಯಿತು.

ಸಿಂದಗಿ ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆ ತಗ್ಗು ಪ್ರದೇಶದ ಮನೆ, ಅಂಗಡಿ, ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೊಂದರೆ ಅನುಭವಿಸಿದರು. ತಾಳಿಕೋಟೆ ಮತ್ತು ನಾಲತವಾಡ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಆಗಿದೆ. ಆಲಿಕಲ್ಲು ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ದ್ರಾಕ್ಷಿ, ಜೋಳ, ಗೋಧಿ ಮತ್ತಿತರರ ಬೆಳೆಗಳಿಗೆ ಹಾನಿಯಾಗಿದೆ.

ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿತು. ಬಳ್ಳಾರಿ ತಾಲ್ಲೂಕಿನ ಕೃಷ್ಣನಗರ ಕ್ಯಾಂಪ್‌ನಲ್ಲಿ ರಾಶಿ ಮಾಡಿದ್ದ ಮೆಣಸಿನಕಾಯಿ ಬೆಳೆ ಮಳೆಯಿಂದ ತೊಯ್ದಿದೆ. ಫಸಲನ್ನು ಮಾರುಕಟ್ಟೆಗೆ ಸಾಗಿಸಬೇಕೆಂದಿದ್ದವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಸಿರುಗುಪ್ಪದಲ್ಲಿ ಭಾರಿ ಮಳೆಯಾಗಿದ್ದು, ಭತ್ತ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ಕಲಬುರಗಿ ವರದಿ: ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶನಿವಾರ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯಿತು.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುಷ್ಟಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 6 ಕುರಿಗಳು ಮತ್ತು ದೇವದುರ್ಗ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 3 ಕುರಿಗಳು ಸಾವನ್ನಪ್ಪಿವೆ.

ಬೀದರ್ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಕಲ್ಲಂಗಡಿ, ಕರಬೂಜ ಹಣ್ಣು, ಬದನೆಕಾಯಿ ಬೆಳೆಗೆ ಹಾನಿಯಾಗಿದೆ. ಹಿಂಗಾರಿನ ಬಿಳಿಜೋಳಕ್ಕೆ ಹಾನಿಯಾಗಿದೆ ಎಂದು ಬೀದರ್‌ನ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ ತಿಳಿಸಿದರು.

ಯಾದಗಿರಿ ನಗರ ಸೇರಿ ಜಿಲ್ಲೆಯ ಶಹಾಪುರದಲ್ಲಿ ಶೇಂಗಾ, ಮೆಣಸಿನಕಾಯಿ, ಜೋಳ, ಸಜ್ಜೆ, ಟೊಮೆಟೊ ಬೆಳೆ ಹಾನಿಯಾಗಿದೆ. ಸಂಗ್ರಹಿಸಿಡಲಾಗಿದ್ದ ಹತ್ತಿ ಮಳೆಗೆ ಕೊಚ್ಚಿ ಹೋಗಿದೆ.

‘ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ಮತ್ತು ವಡಗೇರಾ ತಾಲ್ಲೂಕಿನಲ್ಲಿ ಅಂದಾಜು 400 ಎಕರೆ ಭತ್ತ, ಸಜ್ಜೆ ಬೆಳೆ ಹಾನಿಯಾಗಿದೆ’ ಎಂದು ಯಾದಗಿರಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಬಿದ್ ಎಸ್‌.ಎಸ್‌. ಮಾಹಿತಿ ನೀಡಿದರು.

ಕರಾವಳಿ ವ್ಯಾಪ್ತಿಯಲ್ಲಿ ಮಳೆ ಸಾಧ್ಯತೆ
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಭಾಗದ ಅಲ್ಲಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಆಲಿಕಲ್ಲು ರಾಶಿ
ಬೀದರ್‌ ನಗರ, ಮರಕಲ್‌, ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಹಾಗೂ ಹುಮನಾಬಾದ್‌ನಲ್ಲಿ ಭಾರಿ ಪ್ರಮಾಣದ ಆಲಿಕಲ್ಲು ಸಹಿತ ಮಳೆ ಆಗಿದೆ. ಭಾರಿ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲು ಕಂಡು ಮರಕಲ್ ಗ್ರಾಮಸ್ಥರು ಸಂಭ್ರಮಿಸಿದರು. ಆಲಿಕಲ್ಲುಗಳ ರಾಶಿ ನಡುವೆ ಕೂತು ಜನರು ಮೊಬೈಲ್‌ ಫೋನ್‌ಗಳಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.

ಚಿಟ್ಟಗುಪ್ಪ ತಾಲ್ಲೂಕಿನ ತಾಳಮಡಗಿ ಸಮೀಪ (ಹೈದರಾಬಾದ್–ಸೊಲ್ಲಾಪುರ) ರಾಷ್ಟ್ರೀಯ ಹೆದ್ದಾರಿ–65ರ ಮೇಲೆ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ನೀರಿನಲ್ಲಿ ಸಿಲುಕಿದ ವಾಹನಗಳನ್ನು ಗ್ರಾಮಸ್ಥರ ನೆರವಿನಿಂದ ರಸ್ತೆ ಬದಿಗೆ ತರಲಾಯಿತು. ರಾಯಚೂರು ನಗರ ಸೇರಿ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಮಳೆಯಾಯಿತು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನರನಾಳ, ನಾಗರಾಳ, ಚಿಮ್ಮನಚೋಡ, ಹಸರಗುಂಡಗಿ, ಗುರಂಪಳ್ಳಿ, ಸಾಲೇಬೀರನಹಳ್ಳಿ, ಮರಪಳ್ಳಿ, ಯಂಪಳ್ಳಿ , ತುಮಕುಂಟಾ, ಕೊಳ್ಳೂರ ಹಾಗೂ ಚಂದ್ರಂಪಳ್ಳಿ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT