ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿಯಿಂದ ಕೆರೆಗಳು, ಕೃಷಿಗೆ ನೀರು ತಾತ್ಕಾಲಿಕ ನಿಲುಗಡೆ

ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ
Last Updated 11 ಜನವರಿ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇರುವುದರಿಂದ ಹೇಮಾವತಿ ಜಲಾಶಯದಿಂದ ಕೆರೆಗಳು ಮತ್ತು ಕೃಷಿಗೆ ಬಿಡುತ್ತಿರುವ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಲು ತೀರ್ಮಾನಿಸಲಾಗಿದೆ.

ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಮತ್ತು ಹಂಚಿಕೆ ಕುರಿತು ವಿಕಾಸಸೌಧದಲ್ಲಿ ನಡೆದ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಉದ್ದೇಶಿಸಿದ್ದೇವೆ,
ಇದಕ್ಕೆ ಸಭೆಯಲ್ಲಿ ಎಲ್ಲರ ಒಪ್ಪಿಗೆ ಸಿಕ್ಕಿದ್ದು, ಸಭೆ ಯಶಸ್ವಿಯಾಗಿದೆ. ಈಗ ನೀರು ನಿಲ್ಲಿಸದೇ ಇದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಹಾಸನ ಸೇರಿದಂತೆ ಎಲ್ಲ ಜಿಲ್ಲೆಗಳಿಗೂ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಮುಂದೆ ಮಳೆ ಬಂದಾಗ ಕೃಷಿ ಚಟುವಟಿಕೆಗಳಿಗೆ ನೀರು ಬಿಡುತ್ತೇವೆ’ ಎಂದು ಮಾಧುಸ್ವಾಮಿ ಹೇಳಿದರು.

ಲೆಕ್ಕಕೊಡಿ: ‘ತುಮಕೂರಿಗೆ ಎಷ್ಟು ನೀರು ಬಿಡಲಾಗಿದೆ. ಅದರ ಲೆಕ್ಕವನ್ನು ಕೊಡಬೇಕು. ನಮಗೆ ಅಗತ್ಯವಿರುವಷ್ಟು ನೀರು ಏಕೆ ಕೊಡುತ್ತಿಲ್ಲ? ತುರುವೇಕರೆಯಲ್ಲಿ ನೀರು ವ್ಯರ್ಥವಾಗುತ್ತಿದೆ. ನೀರು ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ವ್ಯರ್ಥವಾಗುವ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಮಿತಿ ಸಭೆಯಲ್ಲಿ ಮಾಧುಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನೀರು ಹಂಚಿಕೆ ವಿಚಾರವಾಗಿ ಸಮಿತಿ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಮತ್ತು ಸಚಿವ ಮಾಧುಸ್ವಾಮಿ ಅವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

‘ತುಮಕೂರಿಗೆ 24 ಟಿಎಂಸಿ ನೀರು ಹರಿಸಲಾಗಿದೆ ಎನ್ನುತ್ತೀರಿ. ಹಾಗಿದ್ದರೆ ಕುಣಿಗಲ್‌ಗೆ ಎಷ್ಟು ನೀರು ಹರಿದಿದೆ ಎಂಬುದನ್ನು ತಿಳಿಸಿ. ಕುಣಿಗಲ್‌ಗೆ ಅರ್ಧ ಟಿಎಂಸಿ ನೀರು ಕೊಟ್ಟಿದ್ದೀರಾ? 25 ವರ್ಷಗಳಿಂದ ಒಂದೇ ಕಥೆ ಹೇಳುತ್ತಿದ್ದೀರಿ’ ಎಂದು ಸುರೇಶ್‌ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಕುಣಿಗಲ್‌ ದೊಡ್ಡಕರೆಗೆ ಒಂದೂವರೆ ಟಿಎಂಸಿ ಅಡಿ, ಮಾರ್ಕೊನಹಳ್ಳಿಗೆ ಒಂದೂವರೆ ಟಿಎಂಸಿ ಅಡಿ ನೀರು ಹರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸುರೇಶ್‌ ಪ್ರಶ್ನೆಗೆ ಮಾಹಿತಿ ನೀಡಿದರು.

‘ನೀವು ಚುನಾವಣಾ ರಾಜಕೀಯ ಮಾಡಬೇಡಿ. ಚುನಾವಣೆಗಾಗಿ ನೀರು ಹರಿಸಿದ್ದೀರಾ’ ಎಂದು ಡಿ.ಕೆ.ಸುರೇಶ್‌ ಕಿಡಿ ಕಾರಿದರು. ಅದಕ್ಕೆ ತಿರುಗೇಟು ನೀಡಿದ ಮಾಧುಸ್ವಾಮಿ, ‘ನಿಮ್ಮ ಸಲಹೆ ಪಡೆದು ಆಡಳಿತ ಮಾಡಕ್ಕೆ ಆಗುವುದಿಲ್ಲ’ ಎಂದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ‘ಶಾಸಕ ಪ್ರೀತಂಗೌಡ ಅವರು ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುದೆಲ್ಲಾ ಸುಳ್ಳು. ನಾವೆಲ್ಲರೂ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಯಾವುದೇ ಜಿಲ್ಲೆ ಇರಲಿ ಸ್ಥಳೀಯ ಶಾಸಕರ ಜತೆಗೆ ಚರ್ಚಿಸಿಯೇ ಕೆಲಸ ಮಾಡಬೇಕಾಗುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಭೆಯಲ್ಲಿ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT