ಭಾನುವಾರ, ಆಗಸ್ಟ್ 14, 2022
23 °C
‘ನಾನು ತಪ್ಪು ಮಾಡಿದ್ದರೆ ನೇಣು ಹಾಕಿಕೊಳ್ಳಲು ಸಿದ್ಧ’

‘ರಾಕ್ಷಸ ಪ್ರವೃತ್ತಿ’ಯವರೂ ಇದ್ದಾರೆಂದು ಯಾರನ್ನೂ ಉದ್ದೇಶಿಸಿ ಹೇಳಿಲ್ಲ: ವಸತಿ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು‌‌: ‘ನಾನು ತಪ್ಪು ಮಾಡಿದರೆ, ಯಾರ ಬಗ್ಗೆಯಾದರೂ ಅಪಚಾರ ಮಾಡಿದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ತಮ್ಮ ಕಚೇರಿಯಲ್ಲಿ ಭಾನುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನದಲ್ಲಿ ಇದೇ 11ರಂದು ಸಭೆ ನಡೆಸಿದ ಸಂದರ್ಭದಲ್ಲಿ ಕೆಲವು ಪಿಡಿಒಗಳ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಕಾರ್ಯವೈಖರಿ ಖಂಡಿಸಿ ಮಾತನಾಡಿದ್ದೇನೆ. ರಾಕ್ಷಸ ಪ್ರವೃತ್ತಿಯವರೂ ಇದ್ದಾರೆ ಎಂದು ಹೇಳಿದ್ದೇನೆಯೇ ಹೊರತು ಯಾರನ್ನೂ ಉದ್ದೇಶಿಸಿ ಮಾತನಾಡಿಲ್ಲ. ತಪ್ಪು ಮಾಡಿದವರಿಗೆ ಮಾತ್ರ ಹೇಳಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಅಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕರಾದ ಎಚ್.ಡಿ. ರೇವಣ್ಣ, ಎ.ಟಿ‌. ರಾಮಸ್ವಾಮಿ, ಶಿವಲಿಂಗೇಗೌಡರು ಪಿಡಿಒಗಳ ಕಾರ್ಯವೈಖರಿ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ನಾನು ಆ ಪದ ಬಳಸಿದ್ದೇನೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದರು.

‘ನಾನು ವಸತಿ ಸಚಿವನಾಗಿ 1 ವರ್ಷ 1 ತಿಂಗಳು ಕಳೆಯಿತು. ಗೊಂದಲದ ಗೂಡಾಗಿದ್ದ ಇಲಾಖೆಯ ಚಟುವಟಿಕೆಯನ್ನು ಪರಿಶೀಲಿಸಿ, ತಾರ್ಕಿಕ ಅಂತ್ಯ ತಂದಿದ್ದೇನೆ’ ಎಂದರು.

‘ಮನೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಪಿಡಿಒಗಳು ನೀಡಿರುವ ಪಟ್ಟಿಗಳನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು‌ ಕೊಡಿಸಲಾಗುವುದು. 10 ವರ್ಷದಿಂದ ಇಲಾಖೆಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಲಾಗುತ್ತಿದೆ’ ಎಂದೂ ಹೇಳಿದರು.

‘1.20 ಲಕ್ಷ ಮನೆಗಳು ಬಡವರಿಗೆ, ಅರ್ಹರಿಗೆ ಸೇರಬೇಕು. ಪಿಡಿಒಗಳಲ್ಲಿ ಬಹುತೇಕ ರಾಕ್ಷಸ ಪ್ರವೃತ್ತಿಯವರೂ ಇದ್ದಾರೆ. ಈ ಕಾರಣದಿಂದ ಶಾಸರಿಗೆ ಪತ್ರ ಬರೆದು, ಅರ್ಹರ ಪಟ್ಟಿ ಕೊಡಿ ಎಂದು ಮನವಿ ಮಾಡಿದ್ದೇನೆ. ಕೆಲವು ಪಿಡಿಒಗಳು ಕೆಲಸ ಮಾಡುತ್ತಿಲ್ಲ. ಅಂಥವರ ವಿರುದ್ಧ ನಾನು ಮಾತನಾಡುತ್ತೇನೆ. ಒಳ್ಳೆಯ ಪಿಡಿಒಗಳೂ ಇದ್ದಾರೆ’ ಎಂದರು.

‘ನಾನು ಸಚಿವನಾದ ಬಳಿಕ ಇಲಾಖೆಗೆ ₹ 1,200 ಕೋಟಿ ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ಫಲಾನುಭವಿಗಳಿಗೆ ಹೋಗುತ್ತದೆ. ಆದರೆ, ಪಟ್ಟಿ ಮಾಡಿರುವುದರಲ್ಲಿ ಅನೇಕ ಅನರ್ಹರು ಇದ್ದಾರೆ. ಇದುವರೆಗೂ ಕೂಡಾ ಎಷ್ಟು ಅನರ್ಹರಿಗೆ ಮನೆಗಳು ಸಿಕ್ಕಿವೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪು ಮಾಡಿದ ಪಿಡಿಒಗಳ ಮೇಲೆ ಎಫ್‌ಐಆರ್‌ ಮಾಡಿದ್ದೇವೆ. ಇನ್ನು ಮುಂದೆ ಕಾನೂನು ಚೌಕಟ್ಟಿನಲ್ಲಿ ಮುಂದುವರೆಯುತ್ತೇನೆ’ ಎಂದರು.

‘ಚಿತ್ರದುರ್ಗದ ಕಣಜಹಳ್ಳಿಯಲ್ಲಿ 390 ಜನರಲ್ಲಿ 180 ಅನರ್ಹರಿಗೆ ಮನೆಗಳು ಸಿಕ್ಕಿದೆ. ಗದಗದಲ್ಲಿ 14 ಸಾವಿರ ಜನರಲ್ಲಿ 7 ಸಾವಿರಕ್ಕೂ ಹೆಚ್ಚು ಅನರ್ಹರಿದ್ದಾರೆ’ ಎಂದೂ ಅವರು ಹೇಳಿದರು.

‘ಶಾಸಕರು ಬಡವರಿಗಾಗಿ ಸಲಹೆಯನ್ನು ಸ್ವೀಕರಿಸಬೇಕು. ಅವರು ಹೇಳಿದಂತೆ ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಬೇಕು. ಇಲ್ಲದೇ ಇದ್ದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ’ ಎಂದೂ ಸೋಮಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು