ಶನಿವಾರ, ಅಕ್ಟೋಬರ್ 1, 2022
23 °C

ಅಧಿಕಾರಿಗಳ ಕಾರು ಖರೀದಿ ಮಿತಿ ಹೆಚ್ಚಳ; ₹14 ಲಕ್ಷದಿಂದ ₹22 ಲಕ್ಷಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಸೇರಿ ವಿವಿಧ ಹಂತಗಳ ಅಧಿಕಾರಿಗಳ ಹೊಸ ಕಾರುಗಳ ಖರೀದಿಗೆ ಇದ್ದ ಆರ್ಥಿಕ ಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

‘ಕಳೆದ ಎರಡು ವರ್ಷಗಳಲ್ಲಿ ಕಾರುಗಳ ಬೆಲೆ ಏರಿಕೆ ಆಗಿರುವುದರಿಂದ ಈ ದರವನ್ನು ಪರಿಷ್ಕರಿಸಲಾಗಿದೆ. ಹಳೆಯ ದರಕ್ಕೆ ಈಗ ಕಾರು ಸಿಗುವುದು ಕಷ್ಟ’ ಎಂದು ಹಣಕಾಸು ಇಲಾಖೆ ಸಮಜಾಯಿಷಿ ನೀಡಿದೆ. ಸಚಿವರು ಮತ್ತು ಸಂಸದರು ಕಾರು ಖರೀದಿಸುವ ಆರ್ಥಿಕ ಮಿತಿಯನ್ನು ₹22 ಲಕ್ಷದಿಂದ ₹23 ಲಕ್ಷಕ್ಕೆ (ಎಕ್ಸ್‌ ಷೋ ರೂಂ ದರ) ಏರಿಸಿ ಫೆಬ್ರುವರಿಯಲ್ಲಿ ಆದೇಶ ಹೊರಡಿಸಲಾಗಿತ್ತು.

ಆರ್ಥಿಕ ಮಿತಿ ಎಷ್ಟು:  ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು (ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಾಗಿದ್ದಲ್ಲಿ) ವಾಹನಖರೀದಿಸುವ ಆರ್ಥಿಕ ಮಿತಿ ₹14 ಲಕ್ಷದಿಂದ ₹20 ಲಕ್ಷಕ್ಕೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು, ಎಸ್ಪಿಗಳು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ₹9 ಲಕ್ಷದಿಂದ ₹18 ಲಕ್ಷಕ್ಕೆ, ಜಿಲ್ಲಾ ಹಂತದ ಇತರ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಡಿವೈಎಸ್‌ಪಿಗಳಿಗೆ ₹6.50 ಲಕ್ಷದಿಂದ ₹12.50 ಲಕ್ಷಕ್ಕೆ, ತಹಸೀಲ್ದಾರರು ಮತ್ತು  ಇತರ ಅರ್ಹ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ₹9 ಲಕ್ಷ ಆರ್ಥಿಕ ಮಿತಿ ನಿಗದಿ ಮಾಡಲಾಗಿದೆ (ಎಕ್ಸ್‌ ಷೋ ರೂಂ ದರ, ಜಿಎಸ್‌ಟಿ ಸೇರಿ) ಎಂದು ಸರ್ಕಾರದ ಆದೇಶ ವಿವರಿಸಿದೆ.

ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಇಂಧನ ಮಿತವ್ಯಯ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಹೊಂದಿರುವ ವಾಹನಗಳನ್ನು ಖರೀದಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೊಸ ಕಾರು ಖರೀದಿಸುವಾಗ ಪರಿಷ್ಕೃತ ದರ ಅನ್ವಯವಾಗಲಿದೆ. ಈಗ ಬಳಸುತ್ತಿರುವ ವಾಹನ ‘ಬಳಕೆಗೆ ಯೋಗ್ಯ’ವಲ್ಲ ಎಂದು ಆರ್‌ಟಿಒಗಳು ಪ್ರಮಾಣ ಪತ್ರ ನೀಡಿದಾಗ ಮಾತ್ರ ಹೊಸ ವಾಹನಗಳನ್ನು ಖರೀದಿಸಲು ಸಾಧ್ಯ. ಕೆಲವು ವಾಹನಗಳು 5 ಲಕ್ಷ ಕಿ.ಮೀ ಓಡಿದ್ದರೂ ಸುಸ್ಥಿತಿಯಲ್ಲಿ ಇರುತ್ತವೆ. ಆಗ ಬದಲಿಸಲು ಸಾಧ್ಯವಿಲ್ಲ. ಇನ್ನು ಕೆಲವು ವಾಹನಗಳು ಎಂಜಿನ್‌ ಸೇರಿ ವಿವಿಧ ಸಮಸ್ಯೆಗಳಿಂದ ಬಳಕೆಗೆ ಯೋಗ್ಯವಲ್ಲದಿದ್ದರೆ, ಅದಕ್ಕೆ ಕಡ್ಡಾಯವಾಗಿ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಆರ್ಥಿಕ ಇಲಾಖೆಯ ಅನುಮತಿಯೂ ಬೇಕಾಗುತ್ತದೆ’ ಎಂದು ಸಾರಿಗೆ ಇಲಾಖೆ ಮೂಲಗಳು ಹೇಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು