ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ: ಸಿಎಂ ಬೊಮ್ಮಾಯಿ

Last Updated 23 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕವೊಂದೇ ಮಿಗತೆ ಬಜೆಟ್‌ ಮಂಡಿಸಿದ್ದು, ಈ ಬಾರಿ ರಾಜ್ಯದ ಬಜೆಟ್‌ ಗಾತ್ರ ಶೇ 16 ರಷ್ಟು ಹೆಚ್ಚಳವಾಗಿದೆ. ವಿತ್ತೀಯ ಪ್ರಗತಿಯ ವೇಗ ‘ಟಾಪ್‌ ಗೇರ್‌’ನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಜೆಟ್‌ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಗುರುವಾರ ಉತ್ತರ ನೀಡಿದ ಅವರು, ‘ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಎಲ್ಲ ಕಡೆಗಳಲ್ಲೂ ಕೊರತೆ ಬಜೆಟ್‌ ಮಂಡಿಸಿದ್ದಾರೆ. ಕರ್ನಾಟಕ ಮಾತ್ರ ಮಿಗತೆ ಬಜೆಟ್ ಮಂಡಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಆರ್ಥಿಕತೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದರು.

2022–23 ರಲ್ಲಿ ₹14,699 ಕೋಟಿ ವಿತ್ತೀಯ ಕೊರತೆ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಜನವರಿವರೆಗೆ ₹5,996 ಕೋಟಿ ಕಡಿಮೆಗೊಳಿಸಲಾಗಿದೆ. 2023–24 ರ ಆರ್ಥಿಕ ವರ್ಷದಲ್ಲಿ ಆದಾಯ ಹೆಚ್ಚಳವನ್ನು ಸಾಧಿಸುವ ಸಾಧ್ಯತೆ ಇದೆ. ಕರ್ನಾಟಕ ಆರ್ಥಿಕ ನಿರ್ವಹಣೆಯಲ್ಲಿ ಕ್ರಮಬದ್ಧತೆಯನ್ನು ಸಾಧಿಸಿದೆ. ಕೋವಿಡ್‌ ನಂತರದ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಆದಾಯ ಹೆಚ್ಚಳವಾಗುತ್ತಿರುವುದು, ರಾಜ್ಯದ ಅಂತರ್ಗತ ಆರ್ಥಿಕ ಶಕ್ತಿ, ಜನರ ಪರಿಶ್ರಮವೇ ಕಾರಣ ಎಂದು ಬೊಮ್ಮಾಯಿ ಹೇಳಿದರು.

ಕೇಂದ್ರದ ತೆರಿಗೆಯಲ್ಲಿ ರಾಜ್ಯದ ತೆರಿಗೆ ಪಾಲು ₹37,252 ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ (ಕಳೆದ ಸಾಲಿಗಿಂತ ಶೇ 25 ರಷ್ಟು ಹೆಚ್ಚಿನ ಗುರಿ). ಕೇಂದ್ರ ಸರ್ಕಾರದಿಂದ ಡಿಬಿಟಿ ಸೇರಿದಂತೆ ರಾಜ್ಯಕ್ಕೆ ಅನುದಾನ ಹೆಚ್ಚಾಗಿದೆ. 2023–24 ರಲ್ಲಿ ಕರ್ನಾಟಕ ರಾಜ್ಯ ₹402 ಕೋಟಿ ಆದಾಯ ಹೆಚ್ಚಳವನ್ನು ಸಾಧಿಸಿರುವುದು, ರಾಜ್ಯ ಆರ್ಥಿಕ ನಿರ್ವಹಣೆಯ ಪ್ರತಿಬಿಂಬವಾಗಿದೆ ಎಂದರು.

‘ರಾಜ್ಯದ 65 ವರ್ಷಗಳ ಅವಧಿಯಲ್ಲಿ ₹1.30 ಲಕ್ಷ ಕೋಟಿ ಸಾಲ ಪಡೆದಿರಬಹುದು. ಆದರೆ, ಸಿದ್ದರಾಮಯ್ಯ ತಮ್ಮ 5 ವರ್ಷಗಳ ಅವಧಿಯಲ್ಲಿ ₹1.30 ಲಕ್ಷ ಕೋಟಿ ಸಾಲ ತೆಗೆದುಕೊಂಡರು. ಅವರ ಅವಧಿಯಲ್ಲಿ ಸಾಲ ಪಡೆಯಬಹುದಾದ ಗರಿಷ್ಠ ಮಿತಿಯಲ್ಲಿ ಶೇ 82.3 ರಷ್ಟು ತೆಗೆದುಕೊಂಡರೆ, ನಮ್ಮ ಸರ್ಕಾರ ಕೇವಲ ಶೇ 71 ರಷ್ಟು ಅವಕಾಶವನ್ನು ಬಳಸಿಕೊಂಡಿದೆ’ ಎಂದು
ಹೇಳಿದರು.

‘2020–21 ರಲ್ಲಿ ಕೇಂದ್ರ ಸರ್ಕಾರದಿಂದ ಶೇ 5 ರಷ್ಟರವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಿದರೂ ನಮ್ಮ ಸರ್ಕಾರ ಕೇವಲ ಶೇ 3 ನ್ನೂ ದಾಟಿಲ್ಲ. ಆದ್ದರಿಂದ, ನಮ್ಮ ಅವಧಿಯಲ್ಲಿ ಬಹಳ ಸಾಲ ಮಾಡಲಾಗಿದೆ ಎನ್ನುವ ಸಿದ್ದರಾಮಯ್ಯ ಅವರ ಮಾತು ಸತ್ಯಕ್ಕೆ ದೂರ. ಸಾಲವನ್ನು ತೀರಿಸುವ ಕ್ಷಮತೆ ನಮ್ಮ ಸರ್ಕಾರಕ್ಕಿದೆ’ ಎಂದು ಬೊಮ್ಮಾಯಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT