ಮಂಗಳವಾರ, ಮಾರ್ಚ್ 21, 2023
20 °C

500 ಲೀಟರ್‌ ಡೀಸೆಲ್‌ಗೆ ಮೀನುಗಾರರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿತ್ಯ 500 ಲೀಟರ್‌ ತೆರಿಗೆ ರಿಯಾಯಿತಿಯಲ್ಲಿ ಡೀಸೆಲ್‌ ನೀಡಬೇಕು. ಮುಂದಿನ ಬಜೆಟ್‌ನಲ್ಲಿ ಮೀನುಗಾರರ ಅಭಿವೃದ್ಧಿಗೆ ₹5,000 ಕೋಟಿ ಮೀಸಲಿಡಬೇಕು ಎಂದು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಒತ್ತಾಯಿಸಿದೆ.

‘ಮತ್ಸ್ಯಕ್ಷಾಮ, ಚಂಡಮಾರುತದಂತಹ ಪ್ರಕೃತಿ ವಿಕೋಪ, ಡೀಸೆಲ್‌ ಮತ್ತು ಮೀನುಗಾರಿಕೆ ಸಲಕರಣೆಗಳ ಬೆಲೆ ಏರಿಕೆಯಿಂದ ಮೀನುಗಾರಿಕೆ ಅಧಃಪತವಾಗಿದೆ. ರಾಜ್ಯದ ನಾಡದೋಣಿ ಮೀನುಗಾರರಿಗೆ ತಿಂಗಳಿಗೆ 500 ಲೀಟರ್‌ ಸೀಮೆಎಣ್ಣೆಯನ್ನು ಸರಬರಾಜು ಮಾಡಬೇಕು. ಎಲ್ಲ ಬಂದರುಗಳಲ್ಲಿ ಇವರಿಗೆ ಅನುಕೂಲವಾಗುವ ಪ್ರತ್ಯೇಕ ‘ಧಕ್ಕೆ’ಯನ್ನು ನಿರ್ಮಿಸಬೇಕು’ ಎಂದು ಸಮಿತಿ ಅಧ್ಯಕ್ಷ ಜಯ.ಸಿ. ಕೋಟ್ಯಾನ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಅನೇಕ ವರ್ಷಗಳಿಂದ ಬಂದರುಗಳಲ್ಲಿ ಡ್ರೆಡ್ಜಿಂಗ್‌ ಮಾಡದೆ ಹೂಳು ತುಂಬಿಕೊಂಡಿದ್ದು, ಬಂದರುಗಳು ನಿಷ್ಪ್ರಯೋಜಕ ಸ್ಥಿತಿಗೆ ತಲುಪಿವೆ. ಬೋಟ್‌ಗಳನ್ನು ಹೊರತರಲು, ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಬೋಟ್‌ಗಳನ್ನು ಹೊರ ತರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ನೂರಾರು ಮೀನುಗಾರರು ಮರಣ ಹೊಂದಿದ್ದಾರೆ. ಇದು ಮೀನುಗಾರಿಕೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸರ್ಕಾರ ಕೂಡಲೇ ಅಂತಹ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದರು.

‘ಎಲ್ಲಾ ಬಂದರುಗಳ ಜಟ್ಟಿ ವಿಸ್ತರಣೆಯೊಂದಿಗೆ ಮೂಲ ಸೌಕರ್ಯಗಳಾದ ಶುದ್ಧನೀರು, ಸಮರ್ಪಕ ಶೌಚಾಲಯ ವ್ಯವಸ್ಥೆ, ಒಳಚರಂಡಿ, ಭದ್ರತೆ, ಪಾರ್ಕಿಂಗ್ ಮತ್ತು ಉತ್ತಮ ರಸ್ತೆಗಳನ್ನು ನಿರ್ಮಿಸಿ ಸ್ಮಾರ್ಟ್‌ ಬಂದರುಗಳನ್ನಾಗಿ ಪರಿವರ್ತಿಸಬೇಕು. ಜತೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರ ಆರೋಗ್ಯ ಹದಗೆಟ್ಟರೆ, ತುರ್ತು ಚಿಕಿತ್ಸೆ ಅಗತ್ಯಬಿದ್ದರೆ ಸಮುದ್ರದಲ್ಲಿ ‘ಸೀ ಆಂಬ್ಯುಲೆನ್ಸ್’ ನೆರವು ಸಿಗಬೇಕು. ತುರ್ತು ಚಿಕಿತ್ಸಾ ಘಟಕಗಳನ್ನು ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

‘ಮೂಲ ಮೀನುಗಾರರನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಮೀನುಗಾರಿಕೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು. ಕೇಂದ್ರ ಸರ್ಕಾರದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡುತ್ತಿದ್ದರೂ ಇದುವರೆಗೂ ನಮಗೆ ಅದರ ಸೌಲಭ್ಯ ದೊರೆಯುತ್ತಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ನಮ್ಮ ಬೇಡಿಕೆಗಳು ಈಡೀರಿಲ್ಲ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು