ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರಿಗೆ ಜಾತಿವಾದಿ ಹಣೆಪಟ್ಟಿ ಬೇಡ: ಸಚಿವ ಕೆ.ಎಸ್.ಈಶ್ವರಪ್ಪ

Last Updated 7 ಜನವರಿ 2022, 16:29 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಸ್ಥಾನಗಳಲ್ಲಿರುವ ಸಮುದಾಯದ ಅಧಿಕಾರಿಗಳು‘ಕುರುಬರು ಜಾತಿವಾದಿಗಳು’ ಎಂಬ ಹಣೆಪಟ್ಟಿ ಬರದಂತೆ ನ್ಯಾಯಬದ್ಧವಾಗಿ ಸೇವೆ ಸಲ್ಲಿಸ‌ಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಐಎಎಸ್ ಮತ್ತು ಐಪಿಎಸ್‌ ಸೇವೆಗಳಿಗೆ ಪದೋನ್ನತಿ ಹೊಂದಿದ ಸಮುದಾಯದ ಅಧಿಕಾರಿಗಳಿಗೆ ಕನಕಶ್ರೀ ಚಾರಿಟಬಲ್ ಟ್ರಸ್ಟ್‌ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮುದಾಯದ ಅಧಿಕಾರಿಗಳು ತಮ್ಮ ಪ್ರತಿಭೆಯಿಂದ ಉನ್ನತ ಸ್ಥಾನಗಳನ್ನು ತಲುಪಿದ್ದಾರೆ. ಅಧಿಕಾರಿಗಳು ಸಮುದಾಯದ ದೃಷ್ಟಿಯಲ್ಲೇ ಕೆಲಸ ಮಾಡದೆ, ನ್ಯಾಯ ಇರುವವರ ಪರವಾಗಿ ಕೆಲಸ ಮಾಡಬೇಕು. ನ್ಯಾಯಯುತವಾಗಿ ಸೇವೆ ಸಲ್ಲಿಸುವ ಸಮುದಾಯದ ಅಧಿಕಾರಿಗಳಿಗೆ ನಮ್ಮ ಸಹಕಾರ ಮತ್ತು ಬೆಂಬಲ ಇದ್ದೇ ಇರುತ್ತದೆ. ಕುರುಬ ಸಮುದಾಯದ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ’ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ, ‘ಕುರುಬರು ಜನಸಂಖ್ಯೆಯಲ್ಲಿ ಹೆಚ್ಚಿದ್ದೇವೆ. ಆದರೆ, ಅಧಿಕಾರದ ವರ್ಗದಲ್ಲಿರುವವರ ಸಂಖ್ಯೆ ಕಡಿಮೆ. ಸಮುದಾಯದವರು ನೇರವಾಗಿ ಐಎಎಸ್, ಐಪಿಎಸ್‌ ಸ್ಥಾನಗಳನ್ನು ಅಲಂಕರಿಸುವುದು ವಿರಳ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದೇ ಸಮುದಾಯವರು ಉನ್ನತ ಸ್ಥಾನಗಳಲ್ಲಿ ಇರುತ್ತಾರೆ. ಪದೋನ್ನತಿ ಪಟ್ಟಿಗೆ ಬರುವ ಕೆಲ ಸಮುದಾಯದ ಅಧಿಕಾರಿಗಳನ್ನು ಕಾರಣಾಂತ‌ರಗಳಿಂದ ಕೈಬಿಡಲಾಗುತ್ತದೆ. ಇದು, ನಮಗೆಲ್ಲ ಎಚ್ಚರಿಕೆಯ ಗಂಟೆ’ ಎಂದು ಹೇಳಿದರು.

‘ಸಮುದಾಯದ ಅಧಿಕಾರಿಗಳನ್ನು ರಕ್ಷಿಸುವ ಮತ್ತು ಬೆಂಬಲಿಸುವ ಕೆಲಸವನ್ನುಅಧಿಕಾರದಲ್ಲಿರುವ ಸಮುದಾಯದ ನಾಯಕರೇ ಮಾಡಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್, ‘ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಅಧಿಕಾರ ತಲುಪಬೇಕು. ಆದರೆ, ಈಗಿನ ಸರ್ಕಾರಗಳು ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳ ಅಧಿಕಾರವನ್ನೇ ಮೊಟಕುಗೊಳಿಸುತ್ತಿವೆ. ಅಧಿಕಾರ ಕೊಟ್ಟು ಅದನ್ನು ಮತ್ತೆ ಕಸಿದುಕೊಳ್ಳಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಅಭಿನಂದನೆ:ಸಮುದಾಯದದಲ್ಲಿ ಐಎಎಸ್‌ ಮತ್ತು ಐಪಿಎಸ್ ಸೇವೆಗಳಿಗೆ ಪದೋನ್ನತಿ ಪಡೆದಿರುವ ಅಧಿಕಾರಿಗಳಾದ ಕರ್ನಾಟಕ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಶಿವಪ್ರಸಾದ್, ಜಲಮಂಡಳಿ ಮುಖ್ಯ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿ ಎಂ.ಮಹೇಶ್, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಪ್ರಧಾನ ವ್ಯವಸ್ಥಾಪಕ (ಆಡಳಿತ) ಜಿ.ಲಿಂಗಮೂರ್ತಿ, ಕೊಡಗು ಅರಣ್ಯ ಕೋಶದ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ್‌, ಆಂತರಿಕಾ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ತೆಕ್ಕಣ್ಣವರ್, ಕರ್ನಾಟಕ ಲೋಕಾಯುಕ್ತದ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಭೀಮಪ್ಪ ಅದ್ದನ್ನವರ್, ಬೆಂಗಳೂರು ಗುಪ್ತವಾರ್ತೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಹರಿಬಾಬು ಅವರನ್ನು ಕನಕಶ್ರೀ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT