ಭಾನುವಾರ, ಮಾರ್ಚ್ 26, 2023
24 °C

ಬಿಜೆಪಿ ಕಾರ್ಯಕಾರಿಣಿಯಲ್ಲಿ ಉಪ ಚುನಾವಣೆ ಫಲಿತಾಂಶದ ಚರ್ಚೆ ಆಗಿಲ್ಲ: ಆರ್‌. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಐದು ರಾಜ್ಯಗಳ ಚುನಾವಣೆಯ ಕುರಿತು ಚರ್ಚೆ ನಡೆದಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿ ಮೇಲೆ ಐದು ರಾಜ್ಯಗಳ ಗೆಲುವು ಎಂಬುದನ್ನು ಸಭೆಯಲ್ಲಿ ಪ್ರಧಾನಿ ಹೇಳಿದ್ದಾರೆ. ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವರ್ಚುವಲ್‌ ಮೂಲಕ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ‘ಕಾರ್ಯಕಾರಿಣಿಯಲ್ಲಿ ಒಟ್ಟು 338 ಮಂದಿ ಭಾಗವಹಿಸಿದ್ದರು. ರಾಜ್ಯದಿಂದ ಹದಿನೇಳು ಜನರು ಭಾಗವಹಿಸಿದ್ದೇವೆ. ಕೇಂದ್ರ ಸಚಿವರುಗಳು ದೆಹಲಿಯಲ್ಲಿ ಭಾಗವಹಿಸಿದ್ದರು’ ಎಂದರು.

‘ಕೋವಿಡ್‌ ಎರಡನೇ ಡೋಸ್‌ ದೇಶದ ಎಲ್ಲ ಜನರಿಗೂ ತಲುಪಿಸುವಂತೆ ಪ್ರಧಾನಿ ಸೂಚಿಸಿದರು. ಕಾರ್ಯಕರ್ತರ ಸೇವಾ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಐದು ರಾಜ್ಯಗಳ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂದರು.

‘ಕೋವಿಡ್ ಸಂದರ್ಭವನ್ನು ನಿಭಾಯಿಸಿರುವುದು, ಆಮ್ಲಜನಕ ಸಮಸ್ಯೆ ನೀಗಿಸಿರುವುದು, ಕೋವಿಡ್‌ ಲಸಿಕೆ ಪ್ರಗತಿ, ಲಸಿಕೆ ರಫ್ತು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕಾರ್ಯಕಾರಿಣಿಯಲ್ಲಿ ಪ್ರಧಾನಿಗೆ ಅಭಿನಂದನೆ ಸಲ್ಲಿಸಲಾಯಿತು. ದೇಶದ ಆರ್ಥಿಕ ಪರಿಸ್ಥಿತಿ ನಿಭಾಯಿಸಿರುವ ಬಗ್ಗೆಯೂ ಮೆಚ್ಚುಗೆ ಸೂಚಿಸಲಾಯಿತು’ ಎಂದರು.

‘ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದರು. ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಧೋರಣೆಯನ್ನು ಸಭೆಯಲ್ಲಿ  ಖಂಡಿಸಲಾಯಿತು. ಕಾರ್ಯಕಾರಿಣಿಯಲ್ಲಿ ಪುನೀತ್ ರಾಜ್‌ಕುಮಾರ್, ಸಿ.ಎಂ. ಉದಾಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು’ ಎಂದೂ ಅಶೋಕ ವಿವರಿಸಿದರು.

ಅವನತಿಯ ಸ್ಥಿತಿಯಲ್ಲಿ ಕಾಂಗ್ರೆಸ್‌: ‘ಹಾನಗಲ್ ಗೆಲುವನ್ನೇ ದೊಡ್ಡ ಗೆಲುವು ಎಂದು ಕಾಂಗ್ರೆಸ್‌ ಬೀಗುವುದು ಬೇಡ. ಇಡೀ ದೇಶದಲ್ಲಿ ಕಾಂಗ್ರೆಸ್ ಅವನತಿಯ ಸ್ಥಿತಿಯಲ್ಲಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅವರು ಸೋತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅವರದೇ ಪಕ್ಷದ ಶಾಸಕರಿದ್ದರೂ ಯಾಕೆ ಠೇವಣಿ ಕಳೆದುಕೊಂಡರು. ಬೆಳಗಾವಿಯಲ್ಲಿ ಯಾಕೆ ಸೋತರು. ಈ ಬಗ್ಗೆ ಕಾಂಗ್ರೆಸ್‌ನವರು ಮೊದಲು ಸಮಾಲೋಚನೆ ಮಾಡಿಕೊಳ್ಳಲಿ‘ ಎಂದು ಅಶೋಕ ಸಲಹೆ ನೀಡಿದರು.

‘ಹಾನಗಲ್‌ನಲ್ಲಿ ನಾವು ಸುಲಭವಾಗಿ ಗೆಲ್ಲುತ್ತಿರಲಿಲ್ಲ. ಬಹಳ ಕಡಿಮೆ ಅಂತರದಲ್ಲಿಯೇ ನಾವು ಗೆಲ್ಲುತ್ತಿದ್ದೆವು. ಮುಂದೆ ಹಾನಗಲ್‌ ಗೆದ್ದೇ ಗೆಲ್ಲುತ್ತೇವೆ‘ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು