ಗುರುವಾರ , ಅಕ್ಟೋಬರ್ 22, 2020
21 °C

ಪ್ರವಾಸೋದ್ಯಮ ನೀತಿ 10 ಲಕ್ಷ ಉದ್ಯೋಗ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸುವುದು, ಹೂಡಿಕೆದಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಮೂಲಕ ಐದು ವರ್ಷಗಳಲ್ಲಿ ಹತ್ತು ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವ ‘ಪ್ರವಾಸೋದ್ಯಮ ನೀತಿ– 2025’ ಭಾನುವಾರದಿಂದ ಜಾರಿಗೆ ಬಂದಿದೆ.

ವಿಧಾನಸೌಧದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೂತನ ನೀತಿಯ ವಿವರ ಬಿಡುಗಡೆ ಮಾಡಿದರು.

26 ವಿಧಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಹಾಗೂ ರಾಜ್ಯದ ಎಂಟು ಜಿಲ್ಲೆಗಳಲ್ಲಿ 70 ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಈ ನೀತಿ ಹೊಂದಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಜಮೀನು ಒದಗಿಸುವುದು, ಬಂಡವಾಳ ಪ್ರೋತ್ಸಾಹ ಧನ, ವಿವಿಧ ಶುಲ್ಕಗಳ ರಿಯಾಯ್ತಿಗಳನ್ನು ನೀಡುವ ಘೋಷಣೆ ನೀತಿಯಲ್ಲಿದೆ.

ಆಕರ್ಷಣೆ, ಸಂಪರ್ಕ, ಸೌಲಭ್ಯ, ವಾಸ್ತವ್ಯ ಮತ್ತು ಚಟುವಟಿಕೆ ಎಂಬ ಐದು ಅಂಶಗಳ ಆಧಾರದ ಮೇಲೆ ಈ ನೀತಿಯನ್ನು ರೂಪಿಸಲಾಗಿದೆ. ಐದು ವರ್ಷಗಳಲ್ಲಿ ₹ 500 ಕೋಟಿ ಸಹಾಯಧನ ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ₹ 5,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಇದೆ.

ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ‘ಈ ನೀತಿಯಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ ತಾಣಗಳಲ್ಲಿ ಸುರಕ್ಷತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.

ಪ್ರವಾಸಿ ತಾಣಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ₹ 1 ಲಕ್ಷ ನೆರವು, ಪೂರಕ ಮೂಲಸೌಕರ್ಯ ಅಭಿವೃದ್ಧಿಗೆ ವರ್ಷಕ್ಕೆ ₹ 7.5 ಲಕ್ಷ ಅಥವಾ ಐದು ವರ್ಷಗಳಿಗೆ ₹ 25 ಲಕ್ಷ ನೆರವು ಒದಗಿಸುವ ಪ್ರಸ್ತಾವ ನೀತಿಯಲ್ಲಿದೆ. ಪ್ರವಾಸೋದ್ಯಮದಲ್ಲಿನ ಹೂಡಿಕೆದಾರರಿಗೂ ಇದೇ ಮೊತ್ತದ ಪ್ರೋತ್ಸಾಹಧನ ನೀಡುವ ಯೋಜನೆ ಪ್ರಕಟಿಸಲಾಗಿದೆ. ಮಹಿಳೆಯರಿಗೆ ಶೇ 5ರಷ್ಟು ಹೆಚ್ಚುವರಿ ಪ್ರೋತ್ಸಾಹಧನ ದೊರಕಲಿದೆ ಎಂದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಹೂಡಿಕೆದಾರರಿಗೆ ಪ್ರೋತ್ಸಾಹಧನ ಮತ್ತು ರಿಯಾಯ್ತಿಗಳನ್ನು ನೀಡಲು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ ಎಂದು ರವಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು