ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆ ಜಲಾವೃತ: ವಿದ್ಯಾರ್ಥಿಗಳ ಪರದಾಟ

Last Updated 31 ಜುಲೈ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ, ಕೊಡಗು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ್ದು, ತಗ್ಗು ಪ್ರದೇಶ ಬಡಾವಣೆಗಳು ಜಲಾವೃತವಾಗಿವೆ.

ಶನಿವಾರ ರಾತ್ರಿ ಸುರಿದ ಮಳೆಗೆ ತುಮಕೂರು ಮತ್ತು ಕೋಲಾರ ನಗರದಲ್ಲಿ ವಿವಿಧ ಬಡಾವಣೆಗಳು ಜಲಾವೃತವಾಗಿವೆ.

ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಸೋದೇನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಆವರಣ ಜಲಾವೃತಗೊಂಡಿದೆ. ವಿದ್ಯಾರ್ಥಿಗಳು ಊಟ, ತಿಂಡಿಗಾಗಿ ಪರದಾಡುತ್ತಿದ್ದಾರೆ. ಕುಡಿಯುವ ನೀರು ಪೂರೈಕೆ ಟ್ಯಾಂಕ್‌ನಲ್ಲಿ ಮಳೆಯ ನೀರು ಸೇರಿದ್ದು, ನೀರು ಸೇವಿಸದಂತೆ ವಿದ್ಯಾರ್ಥಿ ಗಳಿಗೆ ಸೂಚಿಸಲಾಗಿದೆ. ಶಾಲೆಗೆ ಸದ್ಯ ರಜೆ ಘೋಷಿಸಲಾಗಿದೆ.

ಕೋಲಾರ/ಚಿಕ್ಕಬಳ್ಳಾಪುರ (ವರದಿ): ಶನಿವಾರ ರಾತ್ರಿ ಮತ್ತು ಭಾನುವಾರ ಸುರಿದ ಬಿರುಸಿನ ಮಳೆಯಿಂದ ಎರಡು ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳು ತುಂಬಿದ್ದು, ಜಲಾಶಯಗಳತ್ತ ಹೆಚ್ಚಿನ ನೀರು ಹರಿದು ಬರುತ್ತಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಕಡೆ ರಾತ್ರಿಯಿಡೀ ಮಳೆಯಾಗಿದೆ. ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ 12.7 ಸೆಂ.ಮೀ ಮಳೆ ಸುರಿದಿದ್ದು ಇದು ಜಿಲ್ಲೆಯಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ. ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಿದೆ.

ಗೌರಿಬಿದನೂರು ತಾಲ್ಲೂಕಿನ ಉತ್ತರಪಿನಾಕಿನಿ ನದಿಯಲ್ಲಿ ಹರಿವು ಹೆಚ್ಚಿದ್ದು, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಚೆಕ್‌ಡ್ಯಾಂಗಳು, ಕೆರೆಗಳು ತುಂಬಿವೆ. ಚೇಳೂರು ತಾಲ್ಲೂಕಿನಲ್ಲಿ ಈರುಳ್ಳಿ, ಟೊಮೆಟೊ ಹಾಗೂ ಮುಸುಕಿನ ಜೋಳ ಹಾಳಾಗಿದೆ.

ಕೋಲಾರಮ್ಮನ ಕೆರೆ ಭರ್ತಿ ಯಾಗಿದೆ. ಕೋಲಾರ, ಮಾಲೂರು, ಮುಳಬಾಗಿಲು, ಬಂಗಾರಪೇಟೆ ತಾಲ್ಲೂ ಕಿನ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಕೋಲಾರ ನಗರ ಮತ್ತು ಅಳಗನೂರಿನಲ್ಲಿ ಗರಿಷ್ಠ 4 ಸೆ.ಮೀ. ಮಳೆ ಸುರಿದಿರುವುದು ದಾಖಲಾಗಿದೆ.

ರಾಮನಗರ ಜಿಲ್ಲೆ ಮಂಚನಾಯಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗರಿಷ್ಠ 12.8 ಸೆಂ.ಮೀ. ನಷ್ಟು ಮಳೆ ಸುರಿದಿದೆ. ಚನ್ನಪಟ್ಟಣ ತಾಲ್ಲೂಕಿನ ಮತ್ತಿಕೆರೆಯಲ್ಲಿ 7.5 ಸೆಂ.ಮೀ., ನಾಗವಾರ– ದಶವಾರದಲ್ಲಿ 6.5 ಸೆಂ.ಮೀ., ರಾಮನಗರ ತಾಲ್ಲೂಕಿನ
ಬೈರಮಂಗಲದಲ್ಲಿ 7.3 ಸೆಂ.ಮೀ. ಕೆಂಚನಕುಪ್ಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ 8 ಸೆಂ.ಮಿ. ಸುರಿದಿದೆ.

ನಾಪೋಕ್ಲು (ಕೊಡಗು ಜಿಲ್ಲೆ): ನಾಪೋಕ್ಲು ವ್ಯಾಪ್ತಿಯಲ್ಲಿ ಭಾನುವಾರ ಗುಡುಗು ಸಹಿತ ಮಳೆಯಾಯಿತು. ಸೋಮ ವಾರಪೇಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಹೊನ್ನಮ್ಮನ ಕೆರೆ ಅವಧಿಗೂ ಮುನ್ನ ತುಂಬಿದೆ.

ಬಾಲಕಿ ಸೇರಿ ಮೂವರು ಸಾವು

ತುಮಕೂರು: ಮಳೆ ನೀರು ನಿಂತಿದ್ದ ಮನೆಯಲ್ಲಿ ವಿದ್ಯುತ್ ಪ್ರವಹಿಸಿ ಶನಿವಾರ ರಾತ್ರಿ ಜಯನಗರ ನಿವಾಸಿ ಕೆ.ಸಿ ವೀರಣ್ಣ (75) ಎಂಬುವರು ಮೃತಪಟ್ಟರು.

ಅಲ್ಲದೆ, ಗುಬ್ಬಿ ಪಟ್ಟಣದ ಬೆಲ್ಲದಪೇಟೆಯಲ್ಲಿ ಆನಂದ್ ದೀಕ್ಷಿತ್ ಎಂಬುವರ ಮನೆಯ ಗೋಡೆಯು ಕುಸಿದು ಬಿದ್ದಿದೆ.

ಸಿಡಿಲು ಬಡಿದು ಸಾವು: ಕಲಬುರಗಿ ಜಿಲ್ಲೆಯ ಕಮಲಾ‍ಪುರ ತಾಲ್ಲೂಕು ಮಳಸಾಪುರದಲ್ಲಿ ಭಾನುವಾರ ಸಿಡಿಲು ಬಡಿದು ಶೈಲಜಾ ಶರಣಪ್ಪ ಜಮಾದಾರ (17) ಮೃತಪಟ್ಟರು. ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿಯಾದ ಅವರು, ಕಳೆ ಕೀಳಲು ತಂದೆ ಶರಣಪ್ಪ ಜೊತೆ ಹೊಲಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ ಸಾವು:
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ತೀರ್ಥ ಗ್ರಾಮದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದತೀರ್ಥ ಗ್ರಾಮದ ಶ್ರೀದೇವಿ ನಿಂಗಣ್ಣಾ ಪೂಜಾರಿ (45) ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಜಮೀನಿನಲ್ಲಿ ಕೆಲಸ ಮುಗಿಸಿತೆರಳುವಾಗ ಹಳ್ಳದ ನೀರಿನ ರಭಸ ಲೆಕ್ಕಿಸದೇ ಹಳ್ಳ ದಾಟಲು ಯತ್ನಿಸಿದ್ದು, ಹಳ್ಳದಲ್ಲಿ ಕೊಚ್ಚಿಕೊಂಡು ಹೋದರು. ಭಾನುವಾರ ಬೆಳಿಗ್ಗೆ ಹೆಬಳ್ಳಿ ಗ್ರಾಮದ ಬಳಿ ಶವ ಪತ್ತೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT