ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಸಂಹಿತೆ ಜಾರಿಗೆ ತಯಾರಿ: ಮುಖ್ಯಮಂತ್ರಿ ಬೊಮ್ಮಾಯಿ

ಬಿಜೆಪಿ ಸಭೆಯಲ್ಲಿ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ
Last Updated 25 ನವೆಂಬರ್ 2022, 20:31 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಯಾವ ರೀತಿ ಹಾಗೂ ಹೇಗೆ ಜಾರಿ ಮಾಡಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಇಲ್ಲಿ ಆರಂಭವಾದ ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರ ಮೂರು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಅವರು
ಮಾತನಾಡಿದರು.

‘ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಸಮಾನತೆಯ ಆಶಯವನ್ನು ಕಾರ್ಯರೂಪಕ್ಕೆ ತರಲು ದೀನದಯಾಳ್ ಉಪಾಧ್ಯಾಯ ಅವರ ಕಾಲದಿಂದಲೂ ನಾವು (ಬಿಜೆಪಿ) ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯದ ಬಗ್ಗೆ ಹೇಳುತ್ತಾ ಬಂದಿದ್ದೇವೆ. ಅದರ ಬಗ್ಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಈಗ ಚರ್ಚೆಗಳು ನಡೆಯುತ್ತಿವೆ. ಅದನ್ನು ರಾಜ್ಯದಲ್ಲಿ ಸಕಾಲಕ್ಕೆ ಜಾರಿಗೊಳಿಸಬೇಕು ಎಂಬ ಉದ್ದೇಶವಿದೆ. ಜನರ ಕಲ್ಯಾಣಕ್ಕಾಗಿ ಸಮಾನತೆ ತರುವುದನ್ನು ಪ್ರತಿಪಾದಿಸುವುದು ಮಾತ್ರವಲ್ಲ ಅದನ್ನು ಆಚರಣೆಗೆ ತರಲು ನಾವು ದಿಟ್ಟ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರವಷ್ಟೇ ಹೇಳಿದ್ದರು. ಪ್ರಜಾಸತ್ತಾತ್ಮಕವಾದ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸಿ, ಎಲ್ಲರ ಜೊತೆಗೂ ಚರ್ಚಿಸಿ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದಿದ್ದರು.

ಬಿಜೆಪಿ ಆಳ್ವಿಕೆ ಇರುವ ಹಲವು ರಾಜ್ಯಗಳು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಿವೆ. ಕೆಲವು ರಾಜ್ಯಗಳು ಸಂಹಿತೆ ಜಾರಿಗಾಗಿ ಸಮಿತಿಯನ್ನೂ ರಚಿಸಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಪರಿಶೀಲಿಸಲು ಉತ್ತರಾಖಂಡ ಸರ್ಕಾರವುcಸಮಿತಿಯೊಂದನ್ನು ರಚಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರು ಈ ಸಮಿತಿಯ ಮುಖ್ಯಸ್ಥರಾಗಿದ್ದಾರೆ.ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿ ಗುಜರಾತ್‌ ಸರ್ಕಾರವು ಕೂಡ ಸಮಿತಿ ರಚಿಸಿದೆ.

ಎಲ್ಲರಿಗೂ ಒಂದೇ ಕಾನೂನು

ವಿವಾಹ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮಗಳಿಗೂ ಒಂದೇ ಕಾನೂನು ಅನ್ವಯ ಮಾಡುವುದೇ ಏಕರೂಪ ನಾಗರಿಕ ಸಂಹಿತೆ. ಸಂವಿಧಾನದ ನಾಲ್ಕನೇ ಭಾಗದಲ್ಲಿ ಬರುವ 44ನೇ ವಿಧಿಯಲ್ಲಿ ಇದನ್ನು ವಿವರಿಸಲಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಅನ್ವಯವಾಗುವಂತೆ ಒಂದೇ ಕಾನೂನನ್ನು ರಾಜ್ಯಗಳು ಜಾರಿಗೆ ತರಬೇಕು ಎಂದು ಇದರಲ್ಲಿ ಹೇಳಲಾಗಿದೆ. ಆದರೆ, ಇದು ಕಡ್ಡಾಯವಲ್ಲ. ಏಕೆಂದರೆ 44ನೇ ವಿಧಿಯನ್ನು ‘ರಾಜ್ಯ ನೀತಿ ನಿರ್ದೇಶಕ ತತ್ವ’ಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ರಾಜ್ಯ ನೀತಿ ನಿರ್ದೇಶಕ ತತ್ವಗಳ ಪಾಲನೆ ಕಡ್ಡಾಯವಲ್ಲ ಎಂದು ಸಂವಿಧಾನದ 37ನೇ ವಿಧಿಯಲ್ಲಿ ಹೇಳಲಾಗಿದೆ. ಈಗ ದೇಶದಲ್ಲಿ ಹಿಂದೂ ವಿವಾಹ ಕಾಯ್ದೆ, ಉತ್ತರಾಧಿಕಾರಿ ಕಾಯ್ದೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಕಾಯ್ದೆ ಜಾರಿಯಲ್ಲಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಈ ಎಲ್ಲಾ ಕಾಯ್ದೆಗಳ ಬದಲಿಗೆ ಒಂದೇ ಕಾನೂನು ಎಲ್ಲರಿಗೂ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT