ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ವೇಳೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಏಳು ಮಂದಿ
ಯನ್ನು ಕಡಬ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೊಂಬಾರು ಗ್ರಾಮದ ಕಮರಕಜ್ಜಿಮನೆ ಉಮೇಶ್, ರಾಜೇಶ್ ಕನ್ನಡ, ಜನಾರ್ದನ್ ರೈ, ಕೋಕಿಲ ನಂದ, ತೀರ್ಥಕುಮಾರ್, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತರು.
ಕೊಂಬಾರು ಅರಣ್ಯದಲ್ಲಿ ಗುರುವಾರ ಸೆರೆ ಹಿಡಿದಿದ್ದ ಕಾಡಾನೆಯನ್ನು ವಾಹನದಲ್ಲಿರಿಸಿ, ತಿತಿಮತಿ ಕ್ಯಾಂಪ್‌ಗೆ ಬಿಡಲು ಹೊರಟ ವೇಳೆ ಸ್ಥಳೀಯ ಕೆಲವರು, ಆನೆಯನ್ನು ಕೊಂಡೊಯ್ಯುತ್ತಿದ್ದ ಲಾರಿಯನ್ನು ತಡೆದರು. ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆ
ಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಪಟ್ಟು ಹಿಡಿದರು. ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಗೆ ಗಾಯಗಳಾಗಿವೆ. ಆರೋಪಿಗಳು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ ಎಂದು ಪಂಜ ಉಪವಲಯ ಅರಣ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಲ್ಲು ತೂರಾಟದಲ್ಲಿ ಅರಣ್ಯ ಇಲಾಖೆಯ ಒಬ್ಬರು ಗಾರ್ಡ್ ಮತ್ತು ಡಿಆರ್‌ಎಫ್‌ಒ ಒಬ್ಬರು ಗಾಯಗೊಂಡಿದ್ದರು. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜನವಸತಿ ಪ್ರದೇಶಕ್ಕೆ ಬರುವ ಆನೆಗಳನ್ನು ಸೆರೆ ಹಿಡಿಯುವ ತನಕ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಡಿಸಿಎಫ್ ಡಾ. ದಿನೇಶ್‌ಕುಮಾರ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.