ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಕನ್ನಡಿಗರ ಅಭಿವೃದ್ಧಿಗೆ ವಿಶೇಷ ಯೋಜನೆ: ಸಿ.ಎಂ

₹ 671.28 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ, ಬಸವೇಶ್ವರ ಪುತ್ಥಳಿ ಅನಾವರಣ
Last Updated 2 ಡಿಸೆಂಬರ್ 2022, 18:29 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಗಡಿ ಕನ್ನಡಿಗರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಎರಡು ವಿಶೇಷ ಯೋಜನೆ ಜಾರಿಗೊಳಿಸಿದ್ದು, ಇದೇ ವರ್ಷ ಕಾರ್ಯಗತ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಸಾಲಹಳ್ಳಿಯಲ್ಲಿ ಶುಕ್ರವಾರ ₹ 671.28 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರ, ತಮಿಳುನಾಡು, ಗೋವಾ, ತೆಲಂಗಾಣ ಗಡಿಯಲ್ಲಿರುವ 1,800 ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

‘ಹೊರ ರಾಜ್ಯದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ₹100 ಕೋಟಿ ನೀಡುತ್ತೇನೆ. ಈ ಕೆಲಸ ಕೂಡ ಇದೇ ವರ್ಷ ಆಗಲಿದೆ’ ಎಂದರು.

‘ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿ, ಯಾವುದೇ ರಾಜ್ಯದಲ್ಲಿರಲಿ ಅವರ ರಕ್ಷಣೆ, ಅಭಿವೃದ್ಧಿಗೆ ಬದ್ಧ. ಗೋವಾ, ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಕೇರಳದ ಕಾಸರಗೋಡಿನಲ್ಲಿ ತಲಾ ₹10 ಕೋಟಿಯಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು’ ಎಂದು ಘೋಷಿಸಿದರು.

ಕಾನೂನು ಹೋರಾಟ

‘ಸಾಮಾಜಿಕ ನ್ಯಾಯ ಕೆಲವರ ಭಾಷಣದ ಸರಕಾಗಿದೆ. ಆದರೆ, ನಾನು ಮಾತಾಡದೆಯೇ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ನ್ಯಾಯ ಕೊಡಿಸಿದ್ದೇನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘40 ವರ್ಷಗಳಿಂದ ಪರಿಶಿಷ್ಟರನ್ನು ಮತ ಬ್ಯಾಂಕ್‌ ಮಾಡಿಕೊಂಡವರು, ಮೀಸಲಾತಿ ಹೆಚ್ಚಳ ಟೀಕಿಸುತ್ತಿದ್ದಾರೆ. ಈ ವಿಚಾರವಾಗಿ ಕಾನೂನು ಹೋರಾಟಕ್ಕೂ ಸಿದ್ಧ’ ಎಂದರು.

‘ನಮ್ಮ ಸರ್ಕಾರ ಕುರಿಗಾಹಿಗಳಿಗೆ ₹350 ಕೋಟಿ ಯೋಜನೆ ರೂಪಿಸಿದೆ. ಕುರಿಗಾಹಿ ಸಂಘಗಳ ನೆರವಿಗೆ ₹20 ಸಾವಿರ ನೀಡುತ್ತಿದೆ. ಬಡವರ, ಹಿಂದುಳಿದವರ ಪರ ಕಾರ್ಯಕ್ರಮ ತರದೇ ಸಾಮಾಜಿಕ ನ್ಯಾಯದ ಭಾಷಣ ಮಾಡಿದರೆ ಏನು ಪ್ರಯೋಜನ ?’ ಎಂದು ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟೀಕಿಸಿದರು.

‘ಮಹಾರಾಷ್ಟ್ರ ಸಚಿವರ ನಡೆ ಸರಿಯಲ್ಲ’

ರಾಮದುರ್ಗ: ‘ಈಗಿನ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ಈ ರೀತಿ ಪರಿಸ್ಥಿತಿಯಲ್ಲಿ ಬರಬಾರದು ಎಂಬ ಸಂದೇಶ ಕಳಿಸಿದ್ದೇವೆ. ಅದಾಗಿಯೂ ಬಂದರೆ; ಹಿಂದೆ ಹಲವು ಬಾರಿ ಈ ರೀತಿ ಪ್ರಯತ್ನ ಆದಾಗ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ’ ಎಂದರು.

ಈ ಹಿಂದೆ ಮಹಾರಾಷ್ಟ್ರದ ಸಚಿವರು ಗಡಿ ಜಿಲ್ಲೆಗೆ ಬರುವುದನ್ನು ತಡೆಯಲು ಜಿಲ್ಲಾಡಳಿತ ‘ಪ್ರತಿಬಂಧಕಾಜ್ಞೆ’ ಹೊರಡಿಸಿತ್ತು.

‘ಜತ್ತ ಕನ್ನಡಿಗರ ನೀರಾವರಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ₹2,000 ಕೋಟಿ ಘೋಷಣೆ ಮಾಡಿದ್ದಾರೆ. ಅಲ್ಲಿನ ಕನ್ನಡ ಕುಲಬಾಂಧವರ ಹಲವಾರು ಕಷ್ಟ ಈಗಲಾದರೂ ನೀಗಲಿ' ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

----

ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರಲು ನಾವು ಬಿಡುವುದಿಲ್ಲ. ಅವರೇಕೆ ಇಲ್ಲಿಗೆ ಬರು ತ್ತಾರೆ? ಬೇಕಾದಾಗ ಬಂದು ಹೋಗಲು ಇದೇನು ಅವರ ಮಾವನ ಮನೆಯೇ?

- ಲಕ್ಷ್ಮಣ ಸವದಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT