ಶನಿವಾರ, ಅಕ್ಟೋಬರ್ 1, 2022
20 °C
1944, 1952ರಲ್ಲಿ ಭೇಟಿ: 77 ವರ್ಷಗಳಿಂದ ಅಂಬೇಡ್ಕರ್ ಹಬ್ಬವಾಗಿ ಆಚರಣೆ

ಸ್ವಾತಂತ್ರ್ಯ ಸಂಗ್ರಾಮದ ಆ ದಿನಗಳು: ವಾಡಿಗೆ ಅಂಬೇಡ್ಕರ್ ಭೇಟಿ, ಮಾಸದ ನೆನಪು

ಸಿದ್ದರಾಜ ಎಂ.ಮಲಕಂಡಿ Updated:

ಅಕ್ಷರ ಗಾತ್ರ : | |

Prajavani

ವಾಡಿ: ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ವಾಡಿ ಪಟ್ಟಣಕ್ಕೆ ಎರಡು ಸಲ ಭೇಟಿ ನೀಡಿದ್ದರು.ಈ ನೆನಪು ಎಂದಿಗೂ ಮಾಸದು.

1944ರ ಏಪ್ರಿಲ್‌ 28 ಮತ್ತು 1952ರ ಏಪ್ರಿಲ್‌ 27ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ಅಂಬೇಡ್ಕರ್ ಅವರು ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದರು. ವಿಚಾರಗಳನ್ನು ಹಂಚಿಕೊಂಡಿದ್ದರು.

1944ರಲ್ಲಿ ಹೈದಾರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಪರಿಶಿಷ್ಟ ಜಾತಿಯ ಅಧಿವೇಶನದಲ್ಲಿ ಭಾಗವಹಿಸಲು ಅಂಬೇಡ್ಕರ್ ಅವರು ಮುಂಬೈನಿಂದ ಬಂದು ವಾಡಿಯಲ್ಲಿ ಇಳಿದು, ಹೈದಾರಬಾದ್‌ಗೆ ಪ್ರಯಾಣಿಸಬೇಕಿತ್ತು. ಬ್ರಿಟಿಷ್ ಸರ್ಕಾರದ ರೈಲಿನಲ್ಲಿ ಮುಂಬೈನಿಂದ ಬಂದು, ವಾಡಿಯಿಂದ ನಿಜಾಮ್ ಸರ್ಕಾರ ರೈಲಿನಲ್ಲಿ (ಎನ್‌ಎಸ್) ಹೈದರಾಬಾದ್‌ಗೆ ತೆರಳಬೇಕಿತ್ತು.

ವಾಡಿ ರೈಲು ನಿಲ್ದಾಣದಲ್ಲಿ ಅಂಬೇಡ್ಕರ್ ಅವರು ಇಳಿದಿದ್ದನ್ನು ಕಂಡು ಅಲ್ಲಿನ ಚಹಾ ಮಾರಾಟಗಾರ ದಿಲ್ದಾರ್ ಹುಸೇನ್ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ನಿಲ್ದಾಣದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ದಲಿತ ಸಮುದಾಯದ ಮುಖಂಡರು ಸೇರಿ ಅಂಬೇಡ್ಕರ್‌ ಅವರಿಗೆ ಹೂಮಾಲೆ ಹಾಕಿ ಸನ್ಮಾನಿಸಿದರು. ಆಗ ಅವರು ಜನರನ್ನು ಉದ್ದೇಶಿಸಿ ಒಂದು ಗಂಟೆ ಮಾತನಾಡಿದ್ದರು.

‘ತಳ ಸಮುದಾಯದ ಜನರನ್ನು ಶಿಕ್ಷಣದಿಂದ ದೂರವಿಡಲಾಗಿದೆ. ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿದರೆ, ಅದುವೇ ನೀವು ನನಗೆ ನೀಡುವ ಗೌರವ’ ಎಂದು ಅಂಬೇಡ್ಕರ್ ಹೇಳಿದ್ದರು. ಅಂದಿನಿಂದ ದೇವರ ಹೆಸರಲ್ಲಿ ಖಾಂಡ ಮಾಡುವ ಪದ್ಧತಿಗೆ ವಿದಾಯ ಹೇಳಿ, ಜನರು ಪ್ರತಿ ವರ್ಷ ಅಂಬೇಡ್ಕರ್ ಹಬ್ಬ ಆಚರಿಸಲು ಶುರು ಮಾಡಿದರು.

1952ರ ಏಪ್ರಿಲ್ 27ರಂದು ತಮಿಳುನಾಡಿಗೆ ತೆರಳುವಾಗ ಎರಡು ಗಂಟೆ ಅಂಬೇಡ್ಕರ್ ಅವರು ಸ್ಥಳೀಯರೊಂದಿಗೆ ಸಮಯ ಕಳೆದಿದ್ದರು. ರೈಲು ನಿಲ್ದಾಣದ ಬಳಿ ನಿಜಾಮ ಸರ್ಕಾರ ಹಾಗೂ ಬ್ರಿಟಿಷ್ ಸರ್ಕಾರದ ನಾಣ್ಯ ವಿನಿಮಯವಾಗುವ ಕಚೇರಿ ಬಳಿ ಸ್ಥಳೀಯರ ಜೊತೆ ಕೂತು ಚಿತ್ರ ಕ್ಲಿಕ್ಕಿಸಿಕೊಂಡಿದ್ದರು.

‘ಅಂಬೇಡ್ಕರ್ ಅವರು ಕೂತ ಸ್ಥಳವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿಲಾಗಿದೆ. ಅವರು ಕೂತ ಭಂಗಿಯ ಪ್ರತಿಮೆ ಅನಾವರಣ ಮಾಡಲಾಗಿದೆ. ಅಂಬೇಡ್ಕರ್ ಸ್ಮಾರಕ ಭವನ ನಿರ್ಮಿಸಲಾಗಿದೆ. ಅಂಬೇಡ್ಕರ್ ಅವರ ಸ್ಮರಣೆಯಲ್ಲಿ ಇಡೀ ಆವರಣವನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಯುವ ಮುಖಂಡ ರವಿಕುಮಾರ ಕೊಳಕೂರು ತಿಳಿಸಿದರು.

‘ಅಖಿಲ ಭಾರತ ಎಸ್‌ಸಿ ಫೆಡರೇಷನ್ ಸದಸ್ಯರಾಗಿದ್ದ ನಮ್ಮ ತಂದೆ ಅಮೃತರಾವ್ ಕೋಮಟೆ ಅವರು ಅಂಬೇಡ್ಕರ್ ಅವರ ಮಾತನ್ನು ಆಲಿಸಿದ್ದರು. ಅವರನ್ನು ಕಣ್ಣಾರೆ ಕಂಡಿದ್ದನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು’ ಎಂದು ಅಮೃತರಾವ್ ಕೋಮಟೆ ಅವರ ಪುತ್ರ ಟೋಪಣ್ಣ ಕೋಮಟೆ ತಿಳಿಸಿದರು.

*
ಅಂಬೇಡ್ಕರ್ ಅವರ ಜತೆಯಲ್ಲಿ ನಾಗಪುರದಲ್ಲಿ ಬೌದ್ಧ ದೀಕ್ಷೆ ತೆಗೆದುಕೊಂಡ ವಾಡಿಯ ಇಬ್ಬರು ವ್ಯಕ್ತಿಗಳಲ್ಲಿ ನಮ್ಮ ತಂದೆ ಅಮೃತರಾವ ಕೋಮಟೆ ಒಬ್ಬರಾಗಿದ್ದರು
-ಟೋಪಣ್ಣ ಕೋಮಟೆ, ವಾಡಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು