ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಮಕ್ಕಳಿಗೆ ನೆರಳಾಗಿ...

Last Updated 16 ಮೇ 2016, 19:30 IST
ಅಕ್ಷರ ಗಾತ್ರ

ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕು ಎನ್ನುವ ಮಾತು ನಿನ್ನೆ ಮೊನ್ನೆಯದಲ್ಲ. ಅದಕ್ಕೆ ಪೂರಕವಾಗಿ ಸರ್ಕಾರ ಹಲವು ಕಾರ್ಯಕ್ರಮ ಕೈಗೊಳ್ಳುತ್ತಿವೆಯಾದರೂ ಗ್ರಾಮೀಣ ಭಾಗದ ವಿಶೇಷ ಅಗತ್ಯ ವಿದ್ಯಾರ್ಥಿಗಳಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ದೊರೆಯುತ್ತಿಲ್ಲ. ಇಂಥ ಸಮಸ್ಯೆಯನ್ನು ನೀಗಿಸಲು ಕಟಿಬದ್ಧವಾಗಿ ನಿಂತಿದೆ ಚಾಮರಾಜನಗರದ ‘ಮೊಬಿಲಿಟಿ ಇಂಡಿಯಾ’ ಸ್ವಯಂಸೇವಾ ಸಂಸ್ಥೆ -ರವಿ ಎಸ್.

ಅಂಗವಿಕಲ ಹಾಗೂ ಬುದ್ಧಿಮಾಂದ್ಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಖಾಸಗಿ ಸಂಘ ಸಂಸ್ಥೆಗಳು ಶಾಲೆ ಆರಂಭಿಸಿ ಅವರ ಲಾಲನೆ ಪಾಲನೆ ಜೊತೆಗೆ ಶಿಕ್ಷಣ ನೀಡುತ್ತಿರುವುದು ಸದ್ಯಕ್ಕೆ ನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದೆ.

ಆದರೆ ಹಲವಾರು ಗ್ರಾಮಗಳಲ್ಲಿ ಇಂಥ ಮಕ್ಕಳಿಗೆ ಶಿಕ್ಷಣ ಇಂದಿಗೂ ತೀರಾ ಕನಿಷ್ಠ ಮಟ್ಟದಲ್ಲಿಯೇ ಇದೆ. ಈ ಸಮಸ್ಯೆಗೀಗ ಉತ್ತರವಾಗಿ ಬಂದಿದೆ ಚಾಮರಾಜನಗರದ ‘ಮೊಬಿಲಿಟಿ ಇಂಡಿಯಾ’ ಎಂಬ ಸ್ವಯಂಸೇವಾ ಸಂಸ್ಥೆ.

ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಬೇಕೆಂಬ ಆಲೋಚನೆಯೊಂದಿಗೆ ಸಮುದಾಯ ಆಧರಿತ ಅಭಿವೃದ್ಧಿ ಕಾರ್ಯಕ್ರಮವನ್ನು 2007ರಲ್ಲಿ ಚಾಮರಾಜನಗರದಲ್ಲಿ ಆರಂಭಿಸಿದ್ದ ‘ಮೊಬಿಲಿಟಿ ಇಂಡಿಯಾ’ ನಂತರ ಈ ಭಾಗದಲ್ಲಿ ಕಂಡುಬಂದ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ವಿದ್ಯಾರ್ಥಿಗಳ ಶಿಕ್ಷಣದ ಸಮನ್ವಯತೆಗಾಗಿ ಕೆಲಸ ಮಾಡಲು ಆರಂಭಿಸಿ ಸಾಕಷ್ಟು ಕಾರ್ಯೋನ್ಮುಖವಾಗಿದೆ.

ಆರಂಭದಲ್ಲಿ ಸಂಸ್ಥೆಯು ಚಾಮರಾಜನಗರ ಮತ್ತು ಹರವೆ ಹೋಬಳಿ ವ್ಯಾಪ್ತಿಗಳ ಗ್ರಾಮಗಳನ್ನು ಕೇಂದ್ರೀಕರಿಸಿ ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿತು. ಆರರಿಂದ ಹದಿನಾಲ್ಕು ವರ್ಷಗಳವರೆಗಿನ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ‘ಶಿಕ್ಷಣ ಮತ್ತು ಜೀವನಾಧಾರ ಕಾರ್ಯಕ್ರಮ’ ಅಡಿಯಲ್ಲಿ ಸಂಸ್ಥೆ ಈ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾರ್ಥಿಗಳಂತೆ ಸಾಮಾನ್ಯ ಶಿಕ್ಷಣದಲ್ಲಿ ಸಮನ್ವಯತೆ ಸಾಧಿಸಲು ಕಾರ್ಯಪ್ರವೃತ್ತವಾಯಿತು.

‘ಮನೆಯಲ್ಲಿಯೇ ಇಂಥ ಮಕ್ಕಳ ಆರೈಕೆಯೇ ಕಷ್ಟವಾಗಿರುವಾಗ ಶಾಲೆಗೆ ಕಳುಹಿಸಿ ಶಿಕ್ಷಣ ದೊರಕಿಸಿ ಕೊಡುವುದು ಸಾಧ್ಯವೇ ಇಲ್ಲ ಎಂಬ ಪೋಷಕರ ಆತಂಕವನ್ನು ದೂರ ಮಾಡುವುದು ಆರಂಭದಲ್ಲಿ ಸಂಸ್ಥೆಗೆ ಸುಲಭಸಾಧ್ಯವಾಗಿರಲಿಲ್ಲ.

ಇದರ ಜೊತೆಗೆ ‘ಇಂಥ ಮಕ್ಕಳು ಶಾಲೆಗೆ ಬಂದು ಹೋಗುವುದೇ ಕಷ್ಟ. ಹೀಗಿರುವಾಗ ಕುಳಿತು ಪಾಠ ಕೇಳುವುದು ಇನ್ನೂ ಕಷ್ಟ. ಅವರನ್ನು ಶಾಲೆಗೆ ಕರೆತಂದು ಕಲಿಸಲು ಆಗುವುದೇ ಇಲ್ಲ’ ಎಂಬ ಶಿಕ್ಷಕರ ನಿಲುವು ಬೇರೆ.

ಹೀಗಾಗಿ ಆರಂಭದಲ್ಲಿ ಆಯಾ ಗ್ರಾಮಗಳಲ್ಲಿಯೇ ಶಾಲೆಯ ನಂತರದ ಸಮಯದಲ್ಲಿ ಇಂತಹ ವಿದ್ಯಾರ್ಥಿಗಳ ಕಲಿಕೆಗೆ ಆದ್ಯತೆ ನೀಡಲು ಮುಂದಾದ ಸಂಸ್ಥೆ ಇಂದು ಎಲ್ಲರ ಮನ ಗೆದ್ದಿದೆ.

‘ಮಕ್ಕಳು ಸರಳವಾಗಿ ಕಲಿಯಲು ಸಹಕಾರಿಯಾಗುವಂತೆ ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ಅವರದ್ದೇ ಭಾಷೆಯಲ್ಲಿ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಲು ಆರಂಭಿಸಿದಾಗ ಪೋಷಕರ ಮನಸ್ಥಿತಿ ಬದಲಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಒಪ್ಪಿದರು.

ಆದರೆ ಇದು ಒಂದೇ ಸಲ ಆಗಲಿಲ್ಲ. ಪೋಷಕರಲ್ಲಿ ಇಂತಹ ಸ್ಥಿತಿ ನಿರ್ಮಾಣ ಮಾಡಲು ಎರಡು ವರ್ಷಗಳೇ ಬೇಕಾದವು’ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕ ಆನಂದ.

ಶಿಕ್ಷಕರಲ್ಲಿ ಮೂಡದ ಒಮ್ಮತ: ವಿಶೇಷ ಅಗತ್ಯವಿರುವ ಮಕ್ಕಳ ಪಟ್ಟಿಯಲ್ಲಿ ಅಂಧ, ಕಿವುಡು, ಮೂಗ ಮತ್ತು ಬುದ್ಧಿಮಾಂದ್ಯ ಮಕ್ಕಳು ಸೇರುತ್ತಾರೆ. ಈ ಎಲ್ಲ ಮಕ್ಕಳನ್ನು ಕಳುಹಿಸಲು ಪೋಷಕರನ್ನೇನೋ ಒಪ್ಪಿಸಲಾಯಿತು. ಆದರೆ ವಿವಿಧ ಅಂಗವೈಕಲ್ಯ ವಿದ್ಯಾರ್ಥಿಗಳಿಗೆ ಒಂದೇ ತರಗತಿಯಲ್ಲಿ ಕೂರಿಸಿ ಕಲಿಸುವುದು ಹೇಗೆ ಎಂಬ ಪ್ರಶ್ನೆ ಸಂಸ್ಥೆಯನ್ನು ತೀವ್ರವಾಗಿ ಕಾಡಿತ್ತು.

ಇದರ ಜೊತೆಗೆ ಸಾಮಾನ್ಯ ಪಠ್ಯಕ್ರಮವನ್ನು ಅರ್ಥವಾಗುವಂತೆ ಬೋಧಿಸುವುದು ಹೇಗೆ ಎಂಬ ಪ್ರಶ್ನೆ ಇನ್ನೊಂದೆಡೆ. ಇದಕ್ಕೆ ಕಾರಣ ಎಂದರೆ ಈ ಸಮಸ್ಯೆಗಳ ಜೊತೆಯಲ್ಲಿಯೇ  ಎಲ್ಲಾ ವಿದ್ಯಾರ್ಥಿಗಳಿಗೆ ಒಟ್ಟಿಗೇ ಶಿಕ್ಷಣ ನೀಡಲು ಕೆಲವು ಶಿಕ್ಷಕರು ತಯಾರಾಗಲಿಲ್ಲ. ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿಕೊಂಡರೂ ಬೋಧಿಸಲು ಶಿಕ್ಷಕರು ಸಿದ್ಧರಿರಲಿಲ್ಲ.

ಇದಕ್ಕೂ ಸಂಸ್ಥೆಯಿಂದ ಪರಿಹಾರ ಕಂಡುಕೊಳ್ಳಲಾಯಿತು. ಬಿ.ಎಡ್‌ ಮತ್ತು ಎಂ.ಎ. ಪದವಿ ಪೂರೈಸಿದ ಪದವೀಧರರನ್ನು ಆಯ್ಕೆ ಮಾಡಿ ಇಂಥ ಮಕ್ಕಳಿಗೆ ಬೋಧನೆ ಮಾಡಲು ಬೇಕಾದ ಕೌಶಲಗಳನ್ನು ಕಲಿಸಲಾಯಿತು. ಇದಕ್ಕಾಗಿ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಯಿತು.

ಈ ತರಬೇತಿ ನಂತರ ಬೋಧನೆ ಕುರಿತು ಶಿಕ್ಷಕರಲ್ಲಿದ್ದ ಸಂದೇಹ ಪರಿಹಾರವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅವರು ಒಪ್ಪಿಕೊಂಡಿದ್ದಾರೆ. ಇದೀಗ ಪ್ರತೀ ತಿಂಗಳೂ ಸಂಸ್ಥೆಯ ಶಿಕ್ಷಕರು ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ.

‘ವಿಜ್ಞಾನ ವಿಷಯ ಬೋಧನೆ ಮಾಡುವಾಗ ಯಾವ ಅಂಶವನ್ನು ಬೋಧನೆ ಮಾಡಲಾಗುತ್ತದೆಯೋ ಆ ಅಂಶಕ್ಕೆ ಸಂಬಂಧಿಸಿದಂತೆ ಪಾಠೋಪಕರಣಗಳನ್ನು ಬಳಸಿಯೇ ಕಲಿಸಲಾಗುತ್ತಿದೆ.

ಉದಾಹರಣೆಗೆ, ವಿಜ್ಞಾನದಲ್ಲಿ ಗಾಳಿಯ ಒತ್ತಡದ ಕುರಿತು ಕಿವಿ ಕೇಳದ ವಿದ್ಯಾರ್ಥಿಗೆ ಕಾಗದದಿಂದ ವಿವಿಧ ಗಾತ್ರದ ಫ್ಯಾನ್‌ಗಳನ್ನು ಮಾಡಿ ಮೇಲಿಂದ ಹಾರಿಸಿದಲ್ಲಿ ಅವುಗಳು ನೆಲಕ್ಕೆ ಬೇರೆ ಬೇರೆ ಸಮಯದಲ್ಲಿ ಬೀಳುವುದನ್ನು ಆಧರಿಸಿ ಗಾಳಿಯ ಒತ್ತಡದ ಕುರಿತು ಮತ್ತು ಗಾಳಿಯ ಗುಣಗಳ ಕುರಿತು ಬೋಧನೆ ಮಾಡಬಹುದು.

ಅದೇ ವಿಷಯವನ್ನು ಅಂಧ ವಿದ್ಯಾರ್ಥಿಗೆ ಯಂತ್ರಗಳನ್ನು ಬಳಸಿ ನೇರ ಗಾಳಿಯ ಸ್ಪರ್ಶದಿಂದಲೇ ಬೋಧಿಸಿ ಅರ್ಥೈಸಲಾಗುತ್ತದೆ’ ಎನ್ನುತ್ತಾರೆ ಸಂಸ್ಥೆಯ ವಿಜ್ಞಾನ ವಿಷಯ ತರಬೇತಿ ಸಂಪನ್ಮೂಲ ವ್ಯಕ್ತಿ ಶಿವಕುಮಾರ್‌.

ಸದ್ಯ ಇಲ್ಲಿನ ವಿದ್ಯಾರ್ಥಿಗಳು ಎಲ್ಲಾ ವಿದ್ಯಾರ್ಥಿಗಳಂತೆ ಶಾಲೆಗಳಿಗೆ ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲೆಂದು ಸಮುದಾಯ ಶಿಕ್ಷಣ ಕೇಂದ್ರಗಳನ್ನು ಆರಂಭಿಸಲಾಗಿದೆ.

ಈ ಕೇಂದ್ರದಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಅವುಗಳ ಮೂಲಕ ಮೂರು ಹೋಬಳಿಗಳಲ್ಲಿ ಈ ರೀತಿಯ 470  ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ.

ಇಲ್ಲಿ ಆ ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ವ್ಯಾಯಾಮವನ್ನು ಮಾಡಿಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಕಲಿಕೆ ಮತ್ತು ಜೀವನ ಶೈಲಿಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು ಸಂಸ್ಥೆಯ ಈ ಕಾರ್ಯಕ್ರಮದಡಿಯಲ್ಲಿ ಕಲಿತ ಹದಿನೈದು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ಆರಂಭದಲ್ಲಿ ಸಂಸ್ಥೆಯ ಕಾರ್ಯಕ್ರಮದಡಿಯಲ್ಲಿ ಕಲಿತ ವಿದ್ಯಾರ್ಥಿಗಳೇ ಇಲ್ಲಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

‘ಇಂಥ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಿಕೊಂಡರೆ ಫಲಿತಾಂಶ ಕಡಿಮೆಯಾಗಿ ಶಾಲೆಯ ಪ್ರತಿಷ್ಠೆಗೆ ಧಕ್ಕೆಉಂಟಾಗುತ್ತದೆ ಎಂಬ ಮನೋಭಾವ, ಧೋರಣೆಯನ್ನು ಶಿಕ್ಷಣ ಸಂಸ್ಥೆಗಳು ಬಿಡಬೇಕು. ಹಾಗೆ ಮಾಡಿದರೆ ಅದು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂಬುದು ನೆನಪಿರಬೇಕು.

ಸರ್ಕಾರ ಮತ್ತು ಇಲಾಖೆಗಳು ಕೂಡ ಈ ವಿದ್ಯಾರ್ಥಿಗಳಿಗಾಗಿ ಮೀಸಲಿರುವ ಶೇಕಡಾ 3ರಷ್ಟು ಅನುದಾನವನ್ನು ಸರಿಯಾಗಿ ಬಳಕೆ ಮಾಡಿ ಉತ್ತಮ ಶಿಕ್ಷಣ ನೀಡಿ ಸಮನ್ವಯತೆ ಸಾಧಿಸಬಹುದು. ಈ ಕೆಲಸ ಜರೂರಾಗಿ ಆಗಬೇಕಾಗಿದೆ’ ಎನ್ನುವುದು ಆನಂದ ಅವರ ಅಭಿಪ್ರಾಯ.

‘ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ನಾವು ಹೇಗೆ ಬೆರೆಯುತ್ತೇವೆ ಎಂಬುದರ ಮೇಲೆ ಅವರ ಕಲಿಕೆಯಲ್ಲಿ ಬದಲಾವಣೆ ತರಲು ಸಾಧ್ಯ. ಅಲ್ಲದೆ ಅವರ ಕಲಿಕಾ ಸಾಮರ್ಥ್ಯವನ್ನು ಗುರುತಿಸಿಕೊಂಡು ಬೋಧನೆ ಮಾಡಿದಲ್ಲಿ ಕಲಿಸುವುದು ಸುಲಭ’ ಎನ್ನುತ್ತಾರೆ ಮೂಡ್ಲಮೋಳೆ ಸಮುದಾಯ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೊಡ್ಡರಾಯಪೇಟೆಯ ಸುವರ್ಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT