ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಬರನ ಮಣಿಮಂಚ ದರ್ಶನ

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿದೆ ಐನೂರು ವರ್ಷಗಳಷ್ಟು ಹಳೆಯದಾಗಿರುವ ಒಂದು ಅಪರೂಪದ ಮಣಿಮಂಚ. ನೋಡಲು ಸಾಮಾನ್ಯ ಮಂಚದಂತೆ ಕಂಡರೂ ಇದು ವಿಶೇಷತೆಯನ್ನು ಹೊಂದಿದೆ. ಇದನ್ನು ಮುಸ್ಲಿಂ ಚಕ್ರವರ್ತಿಯ ದ್ಯೋತಕವಾಗಿ ಹಿಂದೂ ಧರ್ಮೀಯರು ಪೂಜಿಸುತ್ತಿರುವುದೇ ಇದರ ವಿಶೇಷ.

ಅಷ್ಟೇ ಅಲ್ಲ, ಈ ಮಂಚ ಎಷ್ಟು ಪೂಜನೀಯ ಎಂದರೆ ಹಾಸಿಗೆ ಮತ್ತು ಮಂಚವನ್ನು ಬಳಸಲು  ಕೊಟ್ಟೂರೇಶ್ವರರು ಮಾತ್ರ ಅರ್ಹರೆಂಬ ನಂಬಿಕೆ. ಆದ್ದರಿಂದ ಕೊಟ್ಟೂರೇಶ್ವರ ದೇವರನ್ನು ಮನೆ ದೇವರೆಂದು ಪೂಜಿಸುವ ಮನೆತನದವರಾರೂ ತಮ್ಮ ಮನೆಗಳಲ್ಲಿ ಇಂದಿಗೂ ಮಲಗಲು ಮಂಚ ಬಳಸುವುದಿಲ್ಲ, ಹಾಸಿಗೆ ಮೇಲೆ ಮಲಗುವುದಿಲ್ಲ!

ಈ ಮಂಚ ಏಳು ಅಡಿ ಉದ್ದ, ಐದು ಮುಕ್ಕಾಲು ಅಡಿ ಅಗಲವಿದೆ. ಇದರ ನಾಲ್ಕು ಕಾಲುಗಳು ಎರಡೂವರೆ ಅಡಿ ಎತ್ತರವಿದ್ದರೆ, ಒಂದೊಂದು ಬುಗುಟಿಯ ವ್ಯಾಸ ಒಂದೂವರೆ ಅಡಿಯಷ್ಟಿದೆ. ಈ ಮಂಚದ ಮೇಲಿರುವ ಹಾಸಿಗೆಯನ್ನು ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ. ಇದೇ 14ರಂದು ನಡೆಯಲಿರುವ ಕೊಟ್ಟೂರು ಮಹಾರಥೋತ್ಸವದ ವೇಳೆ ಇದರ ದರ್ಶನ ಭಾಗ್ಯ ಜನಸ್ತೋಮಕ್ಕೆ ದೊರಕಲಿದೆ.

ಮಂಚದ ಹಿನ್ನೆಲೆ
ಈಗ ಗಚ್ಚಿನ ಮಠದಲ್ಲಿ  ವಿರಾಜಮಾನವಾಗಿರುವ ಮಣಿಮಂಚದ ಕಥಾನಕ ಕುತೂಹಲಕರವಾದದ್ದು. ದೆಹಲಿ ಆಳುತ್ತಿದ್ದ ಅಕ್ಬರ  ಚಕ್ರವರ್ತಿಗೆ ಸಂತಾನಯೋಗವಿರಲಿಲ್ಲ. ಅದೇ ಚಿಂತೆಯಲ್ಲಿದ್ದ ರಾಣಿಯ ಕನಸಿನಲ್ಲಿ ಕೊಟ್ಟೂರೇಶ್ವರರು ಮಗುವಾಗಿ ಕಾಣಿಸಿಕೊಂಡರು. ಇದಾದ ಸ್ವಲ್ಪ ದಿನದಲ್ಲಿಯೇ ಧರ್ಮಪ್ರಚಾರಕ್ಕಾಗಿ ದೆಹಲಿಗೆ ಹೋದ ಕೊಟ್ಟೂರೇಶ್ವರರು ಅಲ್ಲಿನ ಸರ್ಪಗಾವಲನ್ನು ಮೀರಿ ಅರಮನೆ ಪ್ರವೇಶಿಸಿ ಹುಚ್ಚನಂತೆ ವರ್ತಿಸತೊಡಗಿದರು.

ಅದರಿಂದ ಸಿಟ್ಟಿಗೆದ್ದ ಅಕ್ಬರ ತನ್ನ ಖಡ್ಗವನ್ನು ಬೀಸಲು ಮುಂದಾದ. ತಕ್ಷಣ ಮಗುವಾಗಿ ಕಾಣಿಸಿಕೊಂಡ ಕೊಟ್ಟೂರೇಶ್ವರರು ಅಂತಃಪುರದಲ್ಲಿ ರಾಣಿಯು ಕುಳಿತ ಮಂಚದ ಮೇಲೆಯೇ ಮಗುವಾಗಿ ಆಕೆಯೊಡನೆ ಆಟ ಆಡತೊಡಗಿದರು.

ಮಗುವಿನ ಸೌಂದರ್ಯಕ್ಕೆ ಮನಸೋತ ಅಕ್ಬರನಿಗೆ ನಿಜ ತಿಳಿದು ಕೊಟ್ಟೂರೇಶ್ವರರ ಕ್ಷಮೆ ಕೋರಿದ. ಕೊಟ್ಟೂರೇಶ್ವರ ಆಗ ಅಕ್ಬರನಿಗೆ ಮಕ್ಕಳಾಗುವಂತೆ ಹರಸಿದರು. ಹಾಗೆಯೇ, ದೆಹಲಿಯಿಂದ ವಾಪಸು ಹೊರಡುವಾಗ ಅಕ್ಬರ ತಮ್ಮ ಮೇಲೆ ಜಳಪಿಸಬಂದ ರತ್ನ ಖಚಿತ ಖಡ್ಗವನ್ನೂ ರಾಣಿಯ ಮಣಿ ಮಂಚವನ್ನೂ ಒಪ್ಪಿಸುವಂತೆ ಹೇಳಿದರು.

ಅದರಂತೆ ಕೊಟ್ಟೂರೇಶ್ವರರ ವರದಿಂದ ಮಕ್ಕಳ ಭಾಗ್ಯ ಪಡೆದ ಅಕ್ಬರ, ಖಡ್ಗ ಮತ್ತು ಮಣಿ ಮಂಚವನ್ನು ಕೊಡುಗೆಯಾಗಿ  ನೀಡಿದ. ರತ್ನ ಖಚಿತ ಖಡ್ಗವು ಈಗಲೂ ಹಿರೇಮಠದ ಪ್ರತಿ ಉತ್ಸವದಲ್ಲೂ ಸ್ವಾಮಿಯ ಉತ್ಸವ ಮೂರ್ತಿಯ ಜೊತೆಗೆ ಕೊಂಡೊಯ್ಯಲಾಗುತ್ತಿದೆ. ಮಣಿಮಂಚವನ್ನು ಗಚ್ಚಿನ ಮಠದಲ್ಲಿನ ನೆಲಮಾಳಿಗೆಯಲ್ಲಿರಿಸಿ ಅಲ್ಲಿಯೇ ಕೊಟ್ಟೂರೇಶ್ವರರು ಜೀವಂತ ಯೋಗ ಸಮಾಧಿಯಾದರು ಎಂಬುದಾಗಿ ಇಲ್ಲಿನ ಧರ್ಮಕರ್ತರಾದ ಜಿ.ಎಂ. ಪಂಚಾಕ್ಷರಯ್ಯ ತಿಳಿಸುತ್ತಾರೆ.

ಸಾಗುವಾನಿ ಮರದಲ್ಲಿ ಅದೇ ಮಾದರಿಯಲ್ಲಿ ತಯಾರಿಸಲಾದ ಇನ್ನೊಂದು ಮಂಚವನ್ನು ಈಗ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ. ಜೀವಂತ ಯೋಗ ಸಮಾಧಿಯಾದ ಗಚ್ಚಿನ ಮಠದಲ್ಲಿ ದರ್ಶನಕ್ಕಿರುವ ಮಂಚದ ಮೇಲೆ ಕೊಟ್ಟೂರೇಶ್ವರರು ದಿನ ರಾತ್ರಿಯ ಅಲ್ಲಿ ಪವಡಿಸುತ್ತಾರೆ ಎಂಬ ಭಾವನೆ ಭಕ್ತಜನರಲ್ಲಿದೆ. ಹೀಗೆ ಮುಸ್ಲಿಂ ಚಕ್ರವರ್ತಿಯೊಬ್ಬ ನೀಡಿದ ಮಂಚವು ಹಿಂದೂ ಗಳಿಗೆ ಪೂಜನೀಯ ಭಾವ ಬೆಳೆಸುತ್ತಿರುವ ಕೊಟ್ಟೂರು ಕ್ಷೇತ್ರವು ಇಂದಿಗೂ ಧರ್ಮಸಮನ್ವಯತೆಗೆ ಸಾಕ್ಷಿಯಾಗಿದೆ.

ಶಿಖಾಪುರ ಕೊಟ್ಟೂರು ಆದದ್ದು
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಮೂಲ ಹೆಸರು ಶಿಖಾಪುರ. ಇಲ್ಲಿನ ಗ್ರಾಮದೇವತೆಯಾದ ಕೊಟ್ಟವ್ವನಿಂದ ಕೊಟ್ಟೂರು ಎಂದಾಯಿತು. ಬಸವ ಪರಂಪರೆಗೆ ಸೇರಿದ16ನೇ ಶತಮಾನದ ಶಿವಶರಣರ ಪೈಕಿ ಅಗ್ರಮಾನ್ಯರಾದ ಶ್ರೀ ಗುರು ಕೊಟ್ಟೂರೇಶ್ವರರ ಕಾರ್ಯಕ್ಷೇತ್ರವೇ ಕೊಟ್ಟೂರು.

ವೀರಶೈವ ಧರ್ಮ ಪ್ರಚಾರ ಮಾಡುತ್ತ  ತಮಿಳುನಾಡಿನಿಂದ ಕೊಟ್ಟೂರಿಗೆ ಬಂದ  ಕೊಟ್ಟೂರೇಶ್ವರರು ತಮ್ಮ ಪ್ರಭಾವಳಿಯಿಂದಾಗಿ  ನಡೆದಾಡುವ ದೇವರು ಎಂದೇ ಪ್ರಸಿದ್ಧಿ.

ಕೊಟ್ಟೂರಿನಲ್ಲಿ ನೆಲೆನಿಂತ ಶ್ರೀಗುರು ಕೊಟ್ಟೂರೇಶ್ವರರ ಲೀಲಾ ತಾಣಗಳಾದ ನಾಲ್ಕು ಮಠಗಳಲ್ಲಿ ಗಚ್ಚಿನ ಮಠವೂ ಒಂದು. ತಮ್ಮ ಬದುಕಿನ ಕೈಂಕರ್ಯಗಳನ್ನು ಪೂರೈಸಿದ ಕೊಟ್ಟೂರೇಶ್ವರರು ಮಾಘ ಮಾಸದ ಬಹುಳ ಶುದ್ಧ ಮೂಲ ನಕ್ಷತ್ರದಲ್ಲಿ ಜೀವಂತವಾಗಿ ಸಮಾಧಿಯಾದರು. ಹಾಗೆ ಜೀವಂತ ಯೋಗ ಸಮಾಧಿಯಾದ ಸ್ಥಳವೇ ಗಚ್ಚಿನ ಮಠ. ಬೇಡಿ ಬಂದವರಿಗೆಲ್ಲ ವರವ ಕೊಟ್ಟು ಕಾಪಾಡಿದ  ಶ್ರೀ ಕೊಟ್ಟೂರೇಶ್ವರರು ಈ ಶ್ರದ್ಧಾ ಕೇಂದ್ರದ ಅಧಿದೇವತೆ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT