ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪೆಚಿಪ್ಪು, ಶಂಖಗಳ ಕಲಾಹಂದರ

ಅಕ್ಷರ ಗಾತ್ರ

ಯಾವುದೇ ಕಲೆ ಒಲಿಯಲು ನಿರಂತರ ಪ್ರಯತ್ನ ಅಗತ್ಯ. ತಮ್ಮ ಕಲೆಯನ್ನು ಜನರು ಮೆಚ್ಚುವಂತೆ ಅಭಿವ್ಯಕ್ತಿಸುವುದು ಒಂದು ಕೌಶಲ. ಇಂತಹ ಕೌಶಲ ಮೈಸೂರಿನ ರಾಧಾ ಮಲ್ಲಪ್ಪ ಅವರಲ್ಲಿ ಬಾಲ್ಯದಿಂದ ಅನುರಕ್ತಗೊಂಡಿದೆ.

ವೈವಿಧ್ಯಮಯ ಕಲಾ ಪ್ರಕಾರಗಳಲ್ಲಿ ಸಿದ್ಧಹಸ್ತರಾಗಿರುವ ರಾಧಾ ಸುಮಾರು 36 ವರ್ಷಗಳಿಂದ ಕಲಾರಾಧನೆಯಲ್ಲಿ ತೊಡಗಿದ್ದಾರೆ. ತಮ್ಮ ಮನೆಯ ಎರಡು ಅಂತಸ್ತುಗಳನ್ನೇ ‘ಕಲಾಶ್ರೀ ಭಂಡಾರ’ ಎಂಬ ಹೆಸರಿನ ಕಲಾ ಸಂಗ್ರಹಾಲಯವನ್ನಾಗಿ ರೂಪಿಸಿದ್ದಾರೆ. ಕರಕುಶಲ ಕಲೆ, ಚಿತ್ರಕಲೆ, ಮಾದರಿಗಳ ನಿರ್ಮಾಣ, ಕಸೂತಿ, ಕವನ ರಚನೆ, ಹಾಡುಗಾರಿಕೆ, ಆಯುರ್ವೇದ ಚಿಕಿತ್ಸೆಯ ಪರಿಜ್ಞಾನ... ಹೀಗೆ ಇವರದ್ದು ಬಹುಮುಖ ಪ್ರತಿಭೆ.

ರಾಧಾ ಕಲಿತಿದ್ದು ಎಸ್ಸೆಸ್ಸೆಲ್ಸಿ. ಮೂಲತಃ ಇವರು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯವರು. ಪ್ರಸ್ತುತ ಮೈಸೂರಿನ ಬನ್ನಿಮಂಟಪ ಬಡಾವಣೆಯ ಹನುಮಂತನಗರದ ಕೆಎಸ್ಆರ್‌ಟಿಸಿ ಕಾಲೊನಿಯಲ್ಲಿರುವ ‘ಕಲಾಶ್ರೀ’ ನಿವಾಸದಲ್ಲಿ ನೆಲೆಸಿದ್ದಾರೆ. ರಾಧಾ ಕಲೆಗೆ ಸಂಬಂಧಿಸಿ ಯಾವುದೇ ವಿಶೇಷ ತರಬೇತಿ ಅಥವಾ ಪದವಿ ಪಡೆದವರಲ್ಲ. ಆದರೆ, ಸ್ವಪ್ರಯತ್ನ ಮತ್ತು ಸೃಜನಶೀಲತೆಯಿಂದ ಇವರು ಕಲಾಕೃತಿಗಳನ್ನು ರೂಪಿಸುವಲ್ಲಿ ತೋರಿದ ಶ್ರದ್ಧೆ, ಏಕಾಗ್ರತೆ, ಬದ್ಧತೆ, ವ್ಯಯಿಸಿರುವ ಸಮಯ, ಹಣ ಕಂಡರೆ ಇವರೊಬ್ಬ ‘ಕಲಾತಪಸ್ವಿ’ ಎನ್ನಲು ಅಡ್ಡಿಯಿಲ್ಲ.

ರಾಧಾ ನಿರ್ಮಾಣದ ಕಪ್ಪೆಚಿಪ್ಪು ಹಾಗೂ ಶಂಖಗಳ ತಾಜ್‌ಮಹಲ್ (10.5 ಅಡಿ), ಶಿವ ದೇವಾಲಯ (10.75 ಅಡಿ), ಗಜಲಕ್ಷ್ಮೀ, ಸಿದ್ಧಿ ವಿನಾಯಕ, ವಿಷ್ಣು– ಮಹಾಲಕ್ಷ್ಮೀ, ದಶಾವತಾರ, ಪೆಂಗ್ವಿನ್ಸ್, ಸರಸ್ವತಿ, ಎಡೆಯೂರ ಸಿದ್ಧಲಿಂಗೇಶ್ವರ, ರಾವಣನ ಆಸ್ಥಾನದಲ್ಲಿ ಹನುಮ, ಕಾಳಿಂಗ ಮರ್ದನ, ಆದರ್ಶ ದಂಪತಿ, ದೀಪದ ಮಲ್ಲಿ, ದೀಪಸ್ತಂಭಗಳು, ಮತ್ಸ್ಯಾಗಾರ, ಬೋಧಿ ವೃಕ್ಷದಡಿಯ ಬುದ್ಧ, ಸೇಂಟ್ ಫಿಲೋಮಿನಾ ಚರ್ಚ್, ಹೂಕುಂಡಗಳು, ಆಲಂಕಾರಿಕ ಸಾಧನಗಳು ಎಲ್ಲವೂ ಅದ್ವಿತೀಯವಾಗಿವೆ. ಇವುಗಳಲ್ಲಿ ಕೆಲ ಕಲಾಕೃತಿಗಳ ನಿರ್ಮಾಣಕ್ಕೆ ರಾಧಾ ಸರಾಸರಿ ಐದರಿಂದ ಎಂಟು ವರ್ಷಗಳವರೆಗೆ ಶ್ರಮಿಸಿದ್ದಾರೆ. ಕಪ್ಪೆಚಿಪ್ಪು– ಶಂಖಗಳನ್ನು ರಾಮೇಶ್ವರ, ಕನ್ಯಾಕುಮಾರಿ, ಚೆನ್ನೈ, ಮಂಗಳೂರು, ಉಳ್ಳಾಲ, ಮಲ್ಪೆ, ಅಂಡಮಾನ್ ಅಲ್ಲದೆ ಆಸ್ಟ್ರೇಲಿಯಾ, ಜಪಾನ್, ಮಲೇಷಿಯಾ, ಶ್ರೀಲಂಕಾ ಮುಂತಾದ ವಿದೇಶಗಳಿಂದ ತರಿಸಿಕೊಂಡಿದ್ದಾರೆ. ಅಪರೂಪದ ಒಂದು ಕಪ್ಪೆಚಿಪ್ಪು ಅಥವಾ ಶಂಖಕ್ಕೆ ₹ 15 ಸಾವಿರದವರೆಗೆ ವ್ಯಯಿಸಿದ್ದಾರೆ.

ಬಹುವಿಧ ಕಲಾಕೃತಿಗಳು
‘ಕಲಾಶ್ರೀ ಭಂಡಾರ’ದಲ್ಲಿ ರಾಧಾ ಮಲ್ಲಪ್ಪ ತಾವೇ ತಯಾರಿಸಿ ಪ್ರದರ್ಶನಕ್ಕಿಟ್ಟಿರುವ ಕುಟುಂಬ ವೃಕ್ಷ, ತೈಲವರ್ಣ ಚಿತ್ರಗಳು, ತಂಜಾವೂರು, ಮೈಸೂರು, ಸೆರಾಮಿಕ್, ಭಿತ್ತಿಚಿತ್ರ, ಅಪ್ಲಿಕ್ ವರ್ಕ್, ಟೀಕ್ ವನೀರ್ ವರ್ಕ್, ಹಾರ್ಡ್ ಬೋರ್ಡ್ ವರ್ಕ್, ಪಾಟ್ ಪೇಂಟಿಂಗ್, ಅರೇಬಿಕ್, ಬಾಟಿಕ್, ಬಾಟಲ್ ಮೋಡ್, ಮರ್ಮೋಡ್, ಇಪಾಕ್ಸಿ, ಡೆಕೋಪಾಜಿ, ಸೋಲಾವುಡ್, ಸ್ಯಾಂಡ್‌ ಆರ್ಟ್, ಕ್ರಿಸ್ಟಲ್, ಇನ್ ಲೇ ಸ್ಟೋನ್ ಆರ್ಟ್, ಮೆಟಲ್ ಆರ್ಟ್, ಮೆಟಲ್ ಎಂಬೋಜಿಂಗ್, ಮೆಟಲ್ ಎನ್‌ಗ್ರೇವಿಂಗ್, ವಾಟರ್‌ಪೇಂಟ್, ಮಿರರ್ ಆರ್ಟ್, ಬೆಂಡಿಂಗ್, ಪ್ಯಾಚ್ ವರ್ಕ್, ಗ್ಲಾಸ್ ವರ್ಕ್, ಫಾಯಿಲ್ ವರ್ಕ್, ನಿಬ್ ಪೇಂಟಿಂಗ್, ಎಂ. ಸೀಲ್, ಉಬ್ಬು ಚಿತ್ರಣ ಶೈಲಿಯ ಕಲಾಕೃತಿಗಳು, ಕಾಡು ಬೀಜಗಳಿಂದ ನಿರ್ಮಿಸಿದ ಹೂ ವೃಕ್ಷ, ನಿರುಪಯುಕ್ತ ಕೂದಲು, ಭತ್ತ, ಮೊಳೆ ಮತ್ತು ದಾರಗಳನ್ನು ಬಳಸಿರುವ ಕಲಾಕೃತಿಗಳು ಗಮನ ಸೆಳೆಯುತ್ತವೆ.


ಗೋಣಿಚೀಲ, ಬೆಳ್ಳುಳ್ಳಿ ಸಿಪ್ಪೆ, ಈರುಳ್ಳಿ ಸಿಪ್ಪೆ, ಮಣ್ಣು, ರಾಜಸ್ತಾನಿ ಮಣ್ಣು, ರೇಷ್ಮೆಗೂಡು, ಅರಳಿ ಎಲೆ, ಸಂಪಿಗೆ ಎಲೆ, ಮರದ ಸಿಪ್ಪೆ, ಕಡ್ಲೆಕಾಯಿ ಸಿಪ್ಪೆ, ಏಲಕ್ಕಿ ಸಿಪ್ಪೆ, ಪಿಸ್ತಾ ಸಿಪ್ಪೆ, ಬಾದಾಮಿ ಸಿಪ್ಪೆ, ಅಡಿಕೆ ಸಿಪ್ಪೆ, ವಾಲ್‌ನಟ್ ಸಿಪ್ಪೆ, ಹಸುವಿನ ಕೊಂಬಿನ ಸಿಪ್ಪೆ, ಮುಸುಕಿನ ಜೋಳದ ಸಿಪ್ಪೆ, ಹತ್ತಿ, ಫಿಶ್ ವೈರ್, ಸಿಗರೇಟ್ ಪೇಪರ್‌ (ಶೈನಿಂಗ್‌), ಹುಲ್ಲು, ಕಾಗದ, ಪ್ಲಾಸ್ಟಿಕ್ ವೈರ್, ಮುಳ್ಳು, ಗಾಜು, ಪ್ಲಾಸ್ಟಿಕ್ ಪೇಪರ್, ವೆಲ್ವೆಟ್ ಬಟ್ಟೆ, ಟಿಷ್ಯು ಪೇಪರ್, ಕ್ರೇಪ್ ಪೇಪರ್, ಸ್ಟಿಫ್ ಬಟ್ಟೆ, ಸ್ಯಾಟಿನ್ ಬಟ್ಟೆ, ಫರ್ ಬಟ್ಟೆ, ಆರ್ಗೆಂಡಿ ಬಟ್ಟೆ, ನೆಟ್ಟೆಡ್ ಬಟ್ಟೆ, ಸ್ವೆಡ್ ಬಟ್ಟೆ, ಚೈನಾ ಸಿಲ್ಕ್ ಬಟ್ಟೆ, ಸಿಲ್ಕ್, ಮೇಣ, ಹರಳು ಬೀಜ, ಕುಂದನ್ ಹರಳು, ಪಕ್ಷಿಗಳ ಪುಕ್ಕ, ಶಂಖ, ಕಪ್ಪೆಚಿಪ್ಪುಗಳನ್ನು ಬಳಸಿ ತಯಾರಿಸಿದ ಚಿತ್ತಾಕರ್ಷಕ ಹೂಗಳು ಮಾತ್ರವಲ್ಲದೆ, ಪೆನ್‌ಶೇಡ್, ಬಾಟಿಕ್, ಫಾಯಿಲ್, ಸ್ಪ್ರೇ, ಜಲವರ್ಣ, ಫ್ಯಾಬ್ರಿಕ್ ಪೇಂಟಿಂಗ್ ಮಾದರಿಯ, ದಾರ, ಈರುಳ್ಳಿ ಅಚ್ಚು, ದಾರದ ಅಚ್ಚು, ಬಣ್ಣದ ಪೆನ್ಸಿಲ್, ಉಗುರು ಅಚ್ಚು ಬಳಸಿ ರೂಪಿಸಿರುವ ಶುಭಾಶಯ ಪತ್ರಗಳು ಆಕರ್ಷಕವಾಗಿವೆ.

ದಾರ, ಕಪ್ಪೆಚಿಪ್ಪು, ತೆಂಗಿನ ಚಿಪ್ಪು, ಮುತ್ತಿನ ಮಣಿ, ಗ್ಲೂಕೋಸ್ ಬಾಟಲಿ, ಕನ್ನಡಿಯ ಚೆಂಡುಗಳನ್ನು ಬಳಸಿ ನಿರ್ಮಿಸಿರುವ ದೀಪಾಕೃತಿಗಳು ಮತ್ತು ಭಿತ್ತಿಚಿತ್ರಗಳು, ಸಿರಾಮಿಕ್‌ ಶೈಲಿ, ಜಪಾನಿ ಮಣ್ಣು, ಎಂ–ಸೀಲ್, ಬೆಂಕಿಕಡ್ಡಿ, ಗಾಜು, ಬ್ರೆಡ್, ಪೊರಕೆಕಡ್ಡಿ, ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಿ ತಯಾರಿಸಿರುವ ಫೋಟೊ ಫ್ರೇಮ್‌ಗಳು ಸುಂದರವಾಗಿವೆ.

ಕಸದಿಂದ ರಸ
ಮಣಿ, ನಿರುಪಯುಕ್ತ ಗಾಜು, ಬಳೆ ಚೂರು, ವೆಲ್ವೆಟ್ ಬಟ್ಟೆ ಬಳಸಿ ತಯಾರಿಸಿರುವ ತೋರಣಗಳು, ಹಲವು ಬಗೆಯ ಸರಗಳು, ಹಕ್ಕಿಗಳ ಪುಕ್ಕ, ಅಡಿಕೆ ಎಲೆ, ಹಾರ್ಡ್‌ಬೋರ್ಡ್‌ನಿಂದ ನಿರ್ಮಿಸಿರುವ ಕಲಾಕೃತಿಗಳು, ದಾರದ ತೊಟ್ಟಿಲು, ಡೋಲಿಗಳು, ಟೇಪಿನ ಚಿಟ್ಟೆಗಳು, ಬೆಂಕಿ ಕಡ್ಡಿಯ ಪೆನ್‌ಸ್ಟ್ಯಾಂಡ್, ಫರ್‌ ಬೊಂಬೆಗಳು, ಕಟ್ಟಿಗೆ ಕಲಾಕೃತಿಗಳು, ಕಲ್ಲಿನ ಹರಳುಗಳ ಮರ, ಹುಣಸೆ ಬೀಜದ ಜೇನುಗೂಡು, ಐಸ್‌ಕ್ರೀಂ ಕಡ್ಡಿಯ ಚರ್ಚ್, ತೆಂಗಿನ ಚಿಪ್ಪಿನಿಂದಾದ ಕೋತಿಗಳು, ತೆಂಗಿನ ಕರಟದ ಹೂದಾನಿ, ವೆಲ್ವೆಟ್ ಬಟ್ಟೆಯ ಮನೆ, ರೇಷ್ಮೆ ಗೂಡಿನಿಂದ ರೂಪ ತಳೆದ ಹಕ್ಕಿಗಳು, ಪೊರಕೆ ಕಡ್ಡಿಯ ಹಡಗು ವೈರ್ ಗೊಂಬೆಗಳು, ಕಸೂತಿ ಕೆಲಸಗಳು... ಇತ್ಯಾದಿ ಕಸದಿಂದ ರಸ ತೆಗೆಯುವ ರಾಧಾ ಅವರ ಕೈಚಳಕ್ಕೆ ಸಾಕ್ಷಿಯಾಗಿವೆ.

ಪ್ರದರ್ಶನಕ್ಕೊಂದು ನೆಲೆ ಬೇಕಿದೆ
ರಾಧಾ ಮಲ್ಲಪ್ಪ ಅವರಲ್ಲಿ ಕಲೆಯ ಬಗ್ಗೆ ತಿಳಿದುಕೊಳ್ಳುವ ಹಂಬಲ  ಸಾಕಷ್ಟಿದೆ. ವಿಶ್ವದ ಅದ್ಭುತಗಳನ್ನು ಕಪ್ಪೆಚಿಪ್ಪು, ಶಂಖಗಳಲ್ಲಿ ನಿರ್ಮಿಸಬೇಕೆಂಬ ಕನಸನ್ನು ಅವರು ಕಟ್ಟಿಕೊಂಡಿದ್ದಾರೆ. ಆದರೆ, ನಿರ್ಮಾಣ ಹಾಗೂ ಪ್ರದರ್ಶನಕ್ಕೆ ಬೇಕಿರುವ ಸ್ಥಳದ ಕೊರತೆ ಹಾಗೂ ಹಣಕಾಸು ಸಮಸ್ಯೆಯೊಂದಿಗೆ ಅನಾರೋಗ್ಯ ಅವರನ್ನು ಕಾಡುತ್ತಿದೆ. ಈಗಾಗಲೇ ಅವರ ಮನೆ ಕಲಾಕೃತಿಗಳಿಂದ ತುಂಬಿ ತುಳುಕುತ್ತಿದೆ. ಸ್ಥಳಾವಕಾಶದ ಕೊರತೆಯಿಂದ ಈಗಾಗಲೇ ನಿರ್ಮಾಣಗೊಂಡಿರುವ ಫಿಲೋಮಿನಾ ಚರ್ಚ್ ಮಾದರಿ ಹಾಗೂ ಗಜಲಕ್ಷ್ಮೀ ಮೂರ್ತಿಗಳನ್ನು ಅವರು ಜೋಡಿಸಿಲ್ಲ. ಫಿಲೋಮಿನಾ ಚರ್ಚ್ ಮಾದರಿಯ ಬಿಡಿ ಭಾಗಗಳನ್ನು ಜೋಡಿಸಿ ಪ್ರತಿಷ್ಠಾಪಿಸಿದರೆ 15 ಅಡಿ ಎತ್ತರ, 20X20 ಚದರ ಅಡಿ ವಿಸ್ತೀರ್ಣ ಜಾಗ ಬೇಕಾಗುತ್ತದೆ. ತಮ್ಮ ಕಲೆಗೆ ಒಂದು ಶಾಶ್ವತ ನೆಲೆ ಒದಗಿಸುವಂತೆ ಅವರು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಕನಿಷ್ಠ ಪಕ್ಷ ಸರ್ಕಾರಿ ಬೆಲೆಯಲ್ಲಿ ನಿವೇಶನ ನೀಡುವಂತೆ ಕೋರಿದ್ದಾರೆ. ಆದರೆ, ಆವರ ಮನವಿ ಇಲ್ಲಿಯವರೆಗೆ ಈಡೇರಿಲ್ಲ.

‘ಪ್ಲೈವುಡ್ ಉದ್ಯಮಿಯಾಗಿರುವ ಪತಿ ಮಲ್ಲಪ್ಪ, ತಾಯಿ ಸುಶೀಲಮ್ಮ ನನ್ನ ಕಲಾಸಕ್ತಿ ಹಾಗೂ ಸಾಧನೆಯನ್ನು ನಿರಂತರವಾಗಿ ಬೆಂಬಲಿಸಿದ್ದಾರೆ. ಕಲಾಕೃತಿಗಳ ನಿರ್ಮಾಣಕ್ಕೆ ಇಲ್ಲಿಯವರೆಗೆ ಅಂದಾಜು ₹ 80 ಲಕ್ಷ ವೆಚ್ಚವಾಗಿದೆ. ಕಲಾಕೃತಿಗಳೇ ನನ್ನ  ಜೀವಾಳ. ಅವುಗಳ ಆರಾಧನೆಯಲ್ಲೇ ಖುಷಿ ಕಂಡುಕೊಳ್ಳುತ್ತೇನೆ’ ಎನ್ನುತ್ತಾರೆ ರಾಧಾ.

ರಾಧಾ ಮಲ್ಲಪ್ಪ ಅವರಿಗೆ ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ, ಶಿಲ್ಪಾಚಾರ್ಯ, ನೆಹರೂ ಯುವಕೇಂದ್ರ ಮತ್ತು ಕ್ರೀಡಾ ಇಲಾಖೆಯ ಶ್ರೇಷ್ಠ ಯುವತಿ, ಜಿಲ್ಲಾಮಟ್ಟದ ರಾಜ್ಯೋತ್ಸವ, ಆರ್ಯಭಟ ಅಂತರರಾಷ್ಟ್ರೀಯ, ಸಾಧನೆಯ ಶಿಖರದತ್ತ ಮಹಿಳೆ–  ದಸರಾ ವಿಶೇಷ, ರೋಟರಿ ರಾಜ್ಯೋತ್ಸವ, ವಿಶ್ವೇಶ್ವರಯ್ಯ, ಅಮೋಘವರ್ಷ ನೃಪತುಂಗ, ಭಾರತ ಜ್ಯೋತಿರಾಷ್ಟ್ರ, ಕಾಯಕ ರತ್ನ, ಹೊಯ್ಸಳ, ಕಲಾ ಸರಸ್ವತಿ, ಜನಪರ ಶಿಲ್ಪಿ, ಬಸವೇಶ್ವರ ಸದ್ಭಾವನೆ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಮಾಹಿತಿಗೆ ಸಂಪರ್ಕಿಸಿ: 96320 80909.

***

ದಾಖಲೆಗೆ ಅರ್ಹ ಸಂಗ್ರಹ
ರಾಧಾ ಮಲ್ಲಪ್ಪ ಅವರು ಕಪ್ಪೆಚಿಪ್ಪು, ಶಂಖಗಳನ್ನು ಬಳಸಿ 5 ವರ್ಷಗಳ ಅವಧಿಯಲ್ಲಿ ನಿರ್ಮಿಸಿರುವ 11 ಅಡಿ ಎತ್ತರದ ಗಣಪತಿ ವಿಗ್ರಹ ಬೇರೇನೂ ಆಧಾರವಿಲ್ಲದೇ ಟೊಳ್ಳಾಗಿ ನಿರ್ಮಾಣಗೊಂಡಿದೆ. ಶಂಖ, ಕಪ್ಪೆಚಿಪ್ಪುಗಳನ್ನು ಜೋಡಿಸಲು ಅರಾಲ್ಡೇಟ್ ಫೆವಿಕಾಲ್ ಬಳಸಲಾಗಿದೆ. ಇಂಥ ವಿಗ್ರಹ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ ಎಂದು ಸಾಬೀತಾಗಿದ್ದು, ಇದು ದಾಖಲಾರ್ಹ ಕಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT