ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಮುಂದು ಕಾಯಕ ಬಂಧು

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೆರೆಯಂಗಳಗಳಲ್ಲಿ ಹೂಳು ತೆಗೆಯುವುದು, ಗೋಕ­ಟ್ಟೆಗಳಲ್ಲಿ ನೀರು ಇಂಗಿಸುವುದು, ಗೋಮಾಳಗಳಲ್ಲಿ ಸಸಿ ನೆಡುವುದು, ಕೆರೆ ಒತ್ತುವರಿ ಬಿಡಿಸಿ ಮತ್ತೆ ಕೆರೆ ಒತ್ತುವರಿಯಾಗದಂತೆ ಎಚ್ಚರವಹಿಸುವುದು, ಬದ­ಲಾಗುವ ಕಾನೂನು ಕಟ್ಟಳೆಗಳ ಬಗ್ಗೆ ಗ್ರಾಮದ ಜನರಿಗೆ ತಿಳಿವಳಿಕೆ ನೀಡುವುದು, ಅರ್ಹರಿಗೆ ವೃದ್ಧಾಪ್ಯ ವೇತನ ಕೊಡಿಸುವುದು, ರೈತರಿಗೆ ಕೃಷಿ ಅನುಕೂಲಗಳನ್ನು ಒದಗಿಸಿಕೊಡುವುದು, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಡುವುದು...

ಅಬ್ಬಾ! ಇವರು ಮಾಡುವ ಕಾರ್ಯ ಒಂದಲ್ಲ, ಎರಡಲ್ಲ. ಈ ಎಲ್ಲಾ ಕೆಲಸಗಳಿಗೆ ಪ್ರತಿಫಲವಾಗಿ ಇವರನ್ನು ‘ಕಾಯಕ ಬಂಧು’ಗಳೆಂದೇ ಕರೆಯುತ್ತಾರೆ ಇಲ್ಲಿನವರು. ಇದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ತೊಳಪಲ್ಲಿ ಗ್ರಾಮದ ವೆಂಕಟೇಶ್, ಶಿಡ್ಲಘಟ್ಟ ತಾಲ್ಲೂಕಿನ ಈ-ತಿಮ್ಮಸಂದ್ರ ಗ್ರಾಮದ ದೇವರಾಜ್, ಶ್ರೀರಾಂಪುರದ ಚಂದ್ರು... ಹೀಗೆ ಕೆಲವು ಯುವಕರ ಗುಂಪಿನ ಕಥೆ. ಸ್ವಯಂ ಪ್ರೇರಣೆಯಿಂದ ಗ್ರಾಮದ ಅಸಹಾಯಕ ಕುಟುಂಬಗಳಿಗೆ ದಾರಿ ದೀಪವಾಗಿದ್ದಾರೆ ಇವರು.

ತಮ್ಮಲ್ಲಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡುತ್ತ ಬದುಕು ಸಾಗಿಸುತ್ತಿರುವ ಈ ಯುವಕರು, ಗ್ರಾಮಗಳಲ್ಲಿ ಅವಸಾನದ ಅಂಚಿನಲ್ಲಿರುವ ಗೋಮಾಳಗಳು, ಕೆರೆಗಳು, ಗೋಕುಂಟೆಗಳನ್ನು ಉಳಿಸಿ, ಇಂಗುಗುಂಡಿಗಳನ್ನು ನಿರ್ಮಿಸುತ್ತ ನೀರಿನ ಮಹತ್ವವನ್ನು ಪ್ರತಿಯೊಬ್ಬರ ಮನಮುಟ್ಟಿಸುವಲ್ಲಿ ಶ್ರಮಿಸುತ್ತಿದ್ದಾರೆ. ‘ನಮ್ಮೂರಿನ ಅಭಿವೃದ್ಧಿ ನಮ್ಮ ಕೈಯಲ್ಲಿದೆ’ ಎಂಬ ಪರಿಕಲ್ಪನೆಯಿಂದ ಹುಟ್ಟಿಕೊಂಡ ಕಾಯಕ ಬಂಧುಗಳು ಇತರರಿಗೆ ಮಾದರಿಯಾಗಿದ್ದಾರೆ.  ಇವರನ್ನು ನೋಡಿ ಪ್ರೇರೇಪಿತರಾದ ಇತರ ಯುವಕರು ಇವರ ಜೊತೆಗೂಡುತ್ತಿದ್ದಾರೆ.

ಕೆರೆ ಉಳಿಸಿದರು
ಈ- ತಿಮ್ಮಸಂದ್ರ ಗ್ರಾಮ ಪಂಚಾಯ್ತಿಯ ಬೈರಗಾನಹಳ್ಳಿ ಗ್ರಾಮದ ನಂಬಿಕೊಂಡು ಮೀನುಗಾರರು, ಅಚ್ಚುಕಟ್ಟುದಾರರು, ರೈತರು, ಬುಟ್ಟಿ ಹೆಣೆಯುವವರು, ಕುಂಬಾರಿಕೆ ಮಾಡುವವರು ಸೇರಿದಂತೆ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಕೆರೆಯಿಂದಲೇ ಇವರ ಬದುಕು ನಡೆಯಬೇಕಿತ್ತು. ಆದರೆ ಕೆರೆಯು ದಿನದಿಂದ ದಿನಕ್ಕೆ ಒತ್ತುವರಿಯಾಗುತ್ತ ಅವಸಾನದ ಅಂಚಿಗೆ ಸರಿಯಿತು.

ಹೀಗಿದ್ದರೂ ಅದರ ಉಸಾಬರಿ ಬೇಡ ಎಂದು ಸುಮ್ಮನಾದವರೇ ಎಲ್ಲರೂ. ಕೆರೆಯ ತೂಬು, ಕೋಡಿ, ಏರಿಗಳು ಶಿಥಿಲಗೊಂಡವು. ಪೋಷಕ ಕಾಲುವೆ, ಕೆರೆ ಅಂಗಳಗಳಲ್ಲಿ ಹೂಳು ತುಂಬಿಕೊಂಡಿತು. ಕೆರೆ ಸಂಪೂರ್ಣವಾಗಿ ಅವಗಣನೆಗೆ ಒಳಗಾಯಿತು. ಕೆರೆಯನ್ನು ನಂಬಿಕೊಂಡಿದ್ದ ಜನರು ಕಂಗಾಲಾದರು. ಆದರೂ ಕೆಲಸಕ್ಕೆ ಮಾತ್ರ ಯಾರೊಬ್ಬರೂ ಮುಂದಾಗಲಿಲ್ಲ. ‘ಸರ್ಕಾರವೇ ಮಾಡಲಿ’ ಎಂದು ಕಾದು ಕುಳಿತರು.
ಸರ್ಕಾರ ಇವರ ಮನವಿಗೆ ಸ್ಪಂದಿಸಲಿಲ್ಲ. ಈ ಸಮಯದಲ್ಲಿ ಕಾಯಕ ಬಂಧುಗಳು ಗ್ರಾಮಸ್ಥ­ರೆಲ್ಲರನ್ನು ಸಂಘಟಿಸಿ ಕೆರೆ ಕೆಲಸಕ್ಕೆ ಕರೆದೊ­ಯ್ದರು. ಕೆರೆಯ 3 ಎಕರೆ ಒತ್ತುವರಿಯನ್ನು ತೆರವು­ಗೊಳಿ­ಸಿದರು.

ಉದ್ಯೋಗ ಖಾತ್ರಿ ಯೋಜ­ನೆಯ ಸಹಾಯ ಪಡೆದು ಪೋಷಕ ಕಾಲುವೆ, ಕೆರೆ ಅಂಗಳಗಳಲ್ಲಿ ಹೂಳು ತೆಗೆದು ಕೆರೆಯ ಉಳಿವಿಗೆ ಮುಂದಾದರು. ಇವರ ಪರಿಶ್ರಮ ಕಂಡ ಗ್ರಾಮಸ್ಥರೂ ಸ್ವಯಂ ಪ್ರೇರಿತ­ರಾಗಿ ಇವರಿಗೆ ಕೈಜೋಡಿಸಿದರು. ಈಗ ಗ್ರಾಮದಲ್ಲಿರುವ ಇತರೆ ಕೆರೆಗಳಲ್ಲೂ ಸ್ಥಳೀಯ­ರಿಂದಲೇ ಶ್ರಮದಾನ ನಡೆಯುತ್ತಿದೆ. ಈ-ತಿಮ್ಮಸಂದ್ರ ಗ್ರಾಮದಲ್ಲಿದ್ದ ಗೋಕುಂಟೆಗಳು, ಗೋಮಾಳಗಳೂ ಅಭಿವೃದ್ಧಿಗೊಳ್ಳುತ್ತಿವೆ.

ಈ ಗ್ರಾಮದಂತೆ ತೊಳ­ಪಲ್ಲಿ, ಶ್ರೀರಾಂಪುರ ಗ್ರಾಮಗಳ­ಲ್ಲಿಯೂ ನೀರನ್ನು ಇಂಗಿಸಿ, ಇತ­ಮಿತ­ವಾಗಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಲಾಗಿದೆ. ಈ ಎಲ್ಲ ಕೆಲಸಗಳಿಗೂ ಪ್ರೇರಣೆ ಕಾಯಕ ಬಂಧುಗಳು. ಸಮುದಾಯದ ಸಹ­ಭಾಗಿತ್ವವಿದ್ದರೆ  ಏನನ್ನಾದರು ಸಾಧಿ­ಸ­ಬಹುದು ಎಂಬುದಕ್ಕೆ ಸಾಕ್ಷಿ­ಯಾಗಿವೆ ಈ ಗ್ರಾಮಗಳು.

ನಮ್ಮೂರ ಮಕ್ಕಳು 
ತೊಳಪಲ್ಲಿ ಗ್ರಾಮದ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನದ ಅರಿವೇ ಇರಲಿಲ್ಲ. ಇದರ ಅರಿವು ಮೂಡಿ­ಸಿದವರೂ ಇದೇ ಕಾಯಕ ಬಂಧುಗಳು. ವೃದ್ಧಾಪ್ಯ ವೇತನಕ್ಕೆ ಅಗತ್ಯ ಇರುವ ಪ್ರಕ್ರಿಯೆಗಳನ್ನು ಪೂರೈಸಿ ಹಲವು ಮಂದಿಗೆ ಅವು ದೊರೆಯುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಶಾಲಾಮಕ್ಕಳಿಗೆ ಜಾತಿ ಮತ್ತು ಆದಾಯ

ಪ್ರಮಾಣ ಪತ್ರಗಳನ್ನು ಮಾಡಿಸಿಕೊಡುವುದು, ವಿಧವೆಯರಿಗೆ ವಿಧವಾ ವೇತನ ಕೊಡಿಸುವುದು, ಅಂಗವಿಕಲರಿಗೆ ಸಹಾಯ ಮಾಡುವುದು, ನಿರುದ್ಯೋಗಿ ಯುವಕರಿಗೆ ಮೀನುಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ಕಾರ್ಯವೂ ಇವರಿಂದ ನಡೆದಿದೆ, ನಡೆಯುತ್ತಿದೆ. ಇದರಿಂದ ನೂರಾರು ನಿರುದ್ಯೋಗಿ ಯುವಕರು ಮೀನುಗಾರಿಕೆ, ಹೈನುಗಾರಿಕೆ ಮಾಡುತ್ತ ಸ್ವಯಂ ಉದ್ಯೋಗಿಗಳಾಗಿದ್ದಾರೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ಒದಗಿಸಿ ಕೊಡುತ್ತ ಮನೆಗೆ ಮಕ್ಕಳಾಗುವುದರ ಜೊತೆಗೆ ಊರಿಗೆ ಮಕ್ಕಳಾಗಿದ್ದಾರೆ.

ಎಫ್.ಇ.ಎಸ್. ಬೆನ್ನೆಲುಬು 
ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಎಂಬ ಸಂಸ್ಥೆಯು ಕಾಯಕ ಬಂಧುಗಳ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದೆ. ಗ್ರಾಮಗಳಲ್ಲಿ ಕಾಯಕ ಬಂಧುಗಳು ಹಮ್ಮಿಕೊಳ್ಳುವ ವಿವಿಧ ರೀತಿಯ ಅರಿವು ಕಾರ್ಯಕ್ರಮಗಳಿಗೆ ಇತರೆ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ವೆಂಕಟೇಶ್- ಅವರ ಸಂಪರ್ಕಕ್ಕೆ 8971810884.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT