ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿಗೊಂದು ಹಬ್ಬ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಮಳೆ ಆಶ್ರಿತ ಕೃಷಿಯನ್ನೇ ಬದುಕಿಗೆ ಆಸರೆಯಾಗಿಸಿಕೊಂಡು ಬದುಕು ಸವೆಸುತ್ತಿರುವ ಉತ್ತರ ಕರ್ನಾಟಕದ ಕೃಷಿಕ ಸಮೂಹ ಕೃಷಿ ವರ್ಷಾರಂಭದಿಂದ ಕೊನೆಯವರೆಗೂ ಬರುವ ಐದು ಬಗೆಯ ಮಣ್ಣಿನ ಪೂಜೆಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬಂದಿದೆ. ಅವುಗಳ ಪೈಕಿ ಇದೇ 27ರಂದು ನಡೆಯಲಿರುವ ಮಣ್ಣೆತ್ತಿನ ಅಮವಾಸ್ಯೆಯೂ ಒಂದು.

ನೆರೆ ಇರಲಿ, ಬರವಿರಲಿ ಮಣ್ಣಿನ ಪೂಜೆಗಳನ್ನು ಇಲ್ಲಿನ ಕೃಷಿಕರು ತಾತ್ಸಾರ ಭಾವನೆಯಿಂದ ನೋಡುವುದಿಲ್ಲ. ಪ್ರದೇಶವಾರು ಈ ಮಣ್ಣಿನ ಪೂಜೆಗಳು ವಿಭಿನ್ನವಾದರೂ ಆಚರಣೆಯ ಸಾರ ಒಂದೇ. ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಸಂಪತ್ತನ್ನು ಹೆರುವ ಜೀವಶಕ್ತಿ. ಮಣ್ಣು ಹೊನ್ನುಗಳೆರಡೂ ಆತನ ಪಾಲಿಗೆ ಅಭೇದ ವಸ್ತುಗಳು.

ಬಹುತೇಕ ಅಸಮರ್ಪಕ ಮಳೆ ಹಂಚಿಕೆಯಿಂದಲೇ ನರಳುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಹಬ್ಬದ ಆಚರಣೆ ವಿಧಿ–ವಿಧಾನಗಳಲ್ಲಿ ಬೇರೆ–ಬೇರೆಯಾಗಿದ್ದರೂ ಆಚರಣೆಯ ಉದ್ದೇಶ ಒಂದೇ ಆಗಿದೆ. ಉತ್ತರ ಕರ್ನಾಟಕದಲ್ಲಿ ಮೂರು ವರ್ಷಗಳಿಂದ ತಾಂಡವವಾಡಿದ್ದ ಭೀಕರ ಬರದ ಮಧ್ಯೆಯೂ ಇಲ್ಲಿನ ಕೃಷಿಕರು ಮಣ್ಣಿನ ಪೂಜೆಗಳನ್ನು ಸಡಗರದಿಂದಲೇ ಆಚರಿಸಿದ್ದರು.

ಪ್ರಸಕ್ತ ವರ್ಷವೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮುನಿಸಿಕೊಂಡಿದೆ. ಬಹುತೇಕ ಮುಂಗಾರು ‘ಬರ’ ಎಂದೇ ಬಿಂಬಿತಗೊಂಡಿದೆ. ಅದರ ಹೊರತಾಗಿಯೂ ಮಣ್ಣೆತ್ತಿನ ಅಮವಾಸ್ಯೆಯನ್ನು ಮೂಲ ನಂಬಿಕೆಗಳೊಂದಿಗೆ ಆಚರಿಸಲು ಉತ್ಸುಕರಾಗಿದ್ದಾರೆ. ಪಂಚಾಂಗಗಳಲ್ಲೆಲ್ಲ ಈ ಹಬ್ಬವನ್ನು ‘ಮೃತ್ತಿಕಾ ವೃಷಭ ಪೂಜಾ’ ಎಂದು ಕರೆಯಲಾಗಿದೆ.

ಜೇಷ್ಠ ವದ್ಯ (ಬಹುಳ) ಅಮವಾಸ್ಯೆಯ ದಿನದಂದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ವೈಭವಪೂರ್ಣವಾಗಿ ಆಚರಿಸಲಾಗುವ ಈ ಹಬ್ಬವನ್ನು ಸಕಲ ಜೀವರಾಶಿಗೆ ಅನ್ನ ಹಾಕುವ ಭೂಮಿ ತಾಯಿಗೂ ಮಣ್ಣಿನೊಡನೆ ಬೆರೆತು ಮಣ್ಣಾಗಿ ದುಡಿಯುವ ಬಸವಣ್ಣನಿಗೂ ತಮ್ಮ ಕೃತಜ್ಞತೆಯನ್ನು ಸೂಚಿಸಲು ಒಕ್ಕಲು ಮಕ್ಕಳು ಆ ದಿವಸ ಮಣ್ಣಿನಿಂದ ತಯಾರಿಸಿದ ಬಸವಣ್ಣಗಳ ಪೂಜೆಯನ್ನು ನೆರವೇರಿಸುತ್ತಾರೆ.

ಆಚರಣೆ ಹೀಗೆ...
ಹಬ್ಬದ ದಿನ ಮುಂಜಾನೆ ಊರ ಮುಂದಿನ ಹೊಲ ಇಲ್ಲವೇ ಹಳ್ಳದಿಂದ ಜಿಗುಟಾದ ಕರಿಯ ಮಣ್ಣು ತಂದು ಎರಡು ಎತ್ತು  ತಯಾರಿಸುತ್ತಾರೆ. ಕೆಲವು ಜಿಲ್ಲೆಗಳಲ್ಲಿ ಕುಂಬಾರರು ತಯಾರಿಸಿದ ಮಣ್ಣೆತ್ತುಗಳನ್ನು ಹಣ ಇಲ್ಲವೆ, ಅಕ್ಕಿ, ಜೋಳ, ಗೋಧಿಗಳನ್ನು ನೀಡಿ ಮನೆಗೆ ತರುತ್ತಾರೆ. ಕಲಾಪೂರ್ಣವಾಗಿ ಸಿದ್ಧಗೊಳಿಸಿದ ಆ ಎತ್ತುಗಳನ್ನು ನಡುಮನೆಯಲ್ಲಿ ಹಸಿಮನೆಯ ಮೇಲಾಗಲಿ, ಎಲೆಯ ಮಂಟಪದಲ್ಲಾಗಲಿ ಅಥವಾ ದೇವರ ಜಗುಲಿಯ ಮೇಲಾಗಲಿ ಇರಿಸಿ ವಿಧಿವತ್ತಾಗಿ ಪೂಜೆ ಮಾಡುತ್ತಾರೆ.

ಸಡಗರದಿಂದ ಪೂಜೆಗೊಳ್ಳುವ ಈ ಬಸವಣ್ಣನಿಗೆ ಕೆರಿಗಡಬಿನ ಎಡೆ ಕಡ್ಡಾಯ. ಭಕ್ತರು ಕಾಯಿಪಲ್ಲೆ, ಅನ್ನ, ಹಪ್ಪಳ, ಸಂಡಿಗೆ ಮುಂತಾದ ತಿಂಡಿ ತಿನಿಸುಗಳನ್ನು ಸಿದ್ಧಗೊಳಿಸಿ  ಎಡೆತೋರಿಸುವರು. ಪೂಜೆ ಮುಗಿದ ಮೇಲೆ ರೈತರು ತಮ್ಮ ಮಡದಿ ಮಕ್ಕಳ ಸಮೇತವಾಗಿ ಊಟ ಮಾಡುವರು. ರಾತ್ರಿ ಪ್ರತಿಯೊಬ್ಬರ ಮನೆಯಲ್ಲಿಯೂ ಮಣ್ಣಿನ ಬಸವಣ್ಣಗಳನ್ನು ಎದುರುಗೊಳ್ಳುವ ಕಾರ್ಯಕ್ರಮ ನಡೆಯುತ್ತದೆ.

ಅಕ್ಕ ಪಕ್ಕದ ಮನೆಯ ಓರಗೆಯ, ವಿಶೇಷವಾಗಿ ವಿವಾಹಿತ ಗೆಳತಿಯರೆಲ್ಲ ಕೂಡಿಕೊಂಡು ಆರತಿ ತೆಗೆದುಕೊಂಡು ಬೇರೆ–ಬೇರೆ ಮನೆಗಳಿಗೆ ಹೋಗಿ ಬಸವಣ್ಣನನ್ನು ಎದುರುಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆ ಸಮಯದಲ್ಲಿ ಬಸವಣ್ಣನ ಶಕ್ತಿ, ಸಾಮರ್ಥ್ಯ ಹಾಗೂ ಮಹಿಮೆ ಕುರಿತಾದ ಹಾಡುಗಳನ್ನು ಹೇಳಿ ಆರತಿ ಮಾಡಿ ಪನಿವಾರ (ಪ್ರಸಾದ) ತೆಗೆದುಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಬೆಳವಲದ ಕೆಲವು ಊರುಗಳಲ್ಲಿ ಆಯಾ ಊರಿನ ಹಿರಿಯ ಮಠದಲ್ಲಿ ಮಣ್ಣಿನ ಬಸವಣ್ಣನನ್ನು ಇರಿಸುವ ಪದ್ಧತಿಯುಂಟು.

ಮಣ್ಣೆತ್ತುಗಳ ವಿಸರ್ಜನೆ ವಿಧಾನ
ಪೂಜೆಗೊಂಡ ಮಣ್ಣಿನ ಎಲ್ಲ ಬಸವಣ್ಣಗಳನ್ನು ಒಟ್ಟುಗೂಡಿಸಿಕೊಂಡು ಶ್ರಾವಣ ಪಂಚಮಿಯ ಮಾರನೆಯದಿನ (ಕೆರೆಟ್ಟುವ ಅಂಬಲಿಯ ದಿನ) ಶೇಂಗಾ, ಜೋಳ ಅಥವಾ ಮೆಣಸಿನಗಿಡ ಮುಂತಾದ ಬೆಳೆಯಿರುವ ತಮ್ಮ ತಮ್ಮ ಹೊಲಗಳಿಗೆ ಒಯ್ದು ಅಲ್ಲಿಯ ಬನ್ನಿಯ ಗಿಡ, ಆರಿಯ ಗಿಡ ಅಥವಾ ಇನ್ನಾವುದೋ ಗಿಡವಾದರೂ ಸರಿ ಅದರ ಅಡಿಯಲ್ಲಿ ಪೂರ್ವಾಭಿಮುಖವಾಗಿ ಇರಿಸಿ, ಹಂಗನೂಲು ಕೋಡಬತ್ತಿಗಳನ್ನು ತೊಡಿಸಿ ಪೂಜೆ ಮಾಡುವರು.

ಆಮೇಲೆ ಮನೆಯಿಂದ ತಮ್ಮೊಡನೆ ಒಯ್ದ ಪರಡಿ ಪಾಯಸ, ಉಂಡಿ, ಬಡೆ, ಉಸುಳಿ ಅಳ್ಳು ಅನ್ನ ಕಾಯಿಪಲ್ಲೆ ಮುಂತಾದ ವಸ್ತುಗಳನ್ನು ಎಡೆಮಾಡಿ ಅದನ್ನು ಬೆಳೆತುಂಬಿದ ಹೊಲದ ತುಂಬೆಲ್ಲಾ ಅಡ್ಡಾಡಿ ಚರಗ ಚೆಲ್ಲುವರು. ಹೊಲದೊಳಗಿನ ಬೆಳೆ ಹುಲುಸಾಗಿ ಬೆಳೆಯಲೆಂದೇ ಈ ಚರಗ ಚೆಲ್ಲುವುದರ ಮೂಲ ಉದ್ದೇಶ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ.

ಕೆಲ ಜಿಲ್ಲೆಗಳಲ್ಲಿ ಮಣ್ಣೆತ್ತುಗಳ ವಿಸರ್ಜನೆ ವಿಧಾನವೂ ಭಿನ್ನವಾಗಿದೆ. ಮನೆಯಲ್ಲಿ ಬಸವಣ್ಣನನ್ನು ಪೂಜೆ ಮಾಡಿದ ಬಳಿಕ ಸಣ್ಣ–ಪುಟ್ಟ ಮಕ್ಕಳು ಕೊರಳಿಗೆ ಎತ್ತಿನ ಗೆಜ್ಜೆ ಸರ ಹಾಕಿಕೊಂಡು ಕೈಯಲ್ಲಿ ಬುಟ್ಟಿ ಹಿಡಿದುಕೊಂಡು ಮನೆ–ಮನೆಗೆ ತೆರಳಿ ‘ಕರಿ ಜೋಳ ನೀಡಿ’ ಎನ್ನುವ ಮೂಲಕ ಜೋಳ, ಪುಡಿಗಾಸುಗಳನ್ನು ಸಂಗ್ರಹಿಸುತ್ತಾರೆ.

ಬೆಳಿಗ್ಗೆಯಿಂದ ಸಂಜೆವರೆಗೂ ಸಂಚರಿಸಿ ಸಂಗ್ರಹಿಸಿ ಜೋಳವನ್ನು ದಿನಸಿ ಅಂಗಡಿಯಲ್ಲಿ ಮಾರಾಟ ಮಾಡಿ, ಓರಗೆಯ ಗೆಳೆಯರೊಂದಿಗೆ ಊರ ಮುಂದಿನ ಬಾವಿ, ಕೆರೆ, ಹಳ್ಳಗಳಿಗೆ ತೆರಳಿ ಮಣ್ಣೆತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜಿಸುತ್ತಾರೆ. ಬಳಿಕ ಮಂಡಕ್ಕಿ (ಚುರುಮರಿ)ಯನ್ನು ಪ್ರಸಾದ ರೂಪದಲ್ಲಿ ಹಂಚಿಕೊಂಡು ತಿನ್ನುವ ಮೂಲಕ ಮಣ್ಣೆತ್ತಿನ ಹಬ್ಬಕ್ಕೆ ಸಂಭ್ರಮದ ತೆರೆ ಎಳೆಯುವ ಪದ್ಧತಿಯೂ ರೂಢಿಯಲ್ಲಿದೆ. 

ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಚಲಿತವಾಗಿರುವ ಈ ಮಣ್ಣೆತ್ತಿನ ಪೂಜೆಯು ಕರ್ನಾಟಕೇತರ ಪ್ರಾಂತ್ಯಗಳಾದ ಆಂಧ್ರ, ಮಹಾರಾಷ್ಟ್ರಗಳಲ್ಲಿಯೂ ರೂಢಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT