ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ನಲ್ಲಿ ಮೂಡಿದ ಕನಕ ಚರಿತೆ

ಅಕ್ಷರ ಗಾತ್ರ

ದಾಸಸಾಹಿತ್ಯದಲ್ಲಿ ಅಗ್ರಗಣ್ಯರೆಸಿರುವ ಕನಕದಾಸರು ಕರ್ನಾಟಕದ ಸಂಗೀತ ಪಿತಾಮಹ. ಇವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮಾಡಿದ ಪ್ರಾಮಾಣಿಕ ಪ್ರಯತ್ನಗಳು ಅವೆಷ್ಟೋ. ಅಸಮಾನತೆಯ ವಿರುದ್ಧವಾಗಿ ದನಿ ಎತ್ತಿ ಸಮಾನತೆಯ ತತ್ವವನ್ನು ಸಾರಿ ಭಕ್ತಿಯ ಮೂಲಕ ಏನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನುಭಾವ ಇವರು.

ಇವರ ರೋಚಕ ಜೀವನ ಚರಿತ್ರೆಯನ್ನು ಬಿಂಬಿಸುವ ಉದ್ಯಾನವೊಂದು ಅವರ ಕರ್ಮಭೂಮಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ನಿರ್ಮಾಣವಾಗಿದೆ.
ಇಲ್ಲಿ ಕನಕದಾಸರ ಸಿಮೆಂಟಿನ ಕಲಾಕೃತಿಗಳ ಮೂಲಕ ಅವರ ಗತಕಾಲದ ಜೀವನದ ಸಾರವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಕನಕರು ಜೀವನದ ಉದ್ದಕ್ಕೂ ಮಾಡಿದ ಪವಾಡಗಳು ಶಿಲ್ಪಗಳ ಮೂಲಕ ಇಲ್ಲಿ ಅನಾವರಣವಾಗಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ರಾಜ್ಯ ಮಟ್ಟದ ಸಿಮೆಂಟ್ ಕಲಾಕೃತಿಗಳ ಶಿಬಿರದ ಮೂಲಕ ಇದನ್ನು ದೇಶದಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾರ್ಪಡಿಸುವ ಯೋಜನೆ ಸಾಕಾರಗೊಂಡಿದೆ.

ಶಿಲ್ಪಕಲಾ ಅಕಾಡೆಮಿಯ ಸಂಚಾಲಕ ಸದಸ್ಯ ವೈ.ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ 15 ಹಿರಿಯ ಹಾಗೂ 15 ಸಹಾಯಕ ಶಿಲ್ಪಿಗಳು ಸಿಮೆಂಟ್‌ ಮೂಲಕ 46 ಕನಕರ ಮೂರ್ತಿಗಳಿಗೆ ಜೀವತುಂಬಿದ್ದಾರೆ. ನೈಸರ್ಗಿಕವಾಗಿ ಸಿಗುವ ಕಲ್ಲನ್ನು ಬಳಸಿ ಕನಕರ ಜನನ, ಬಾಲ್ಯಾವಸ್ಥೆ, ವಿದ್ಯಾಭ್ಯಾಸ, ಗುರುಶಿಷ್ಯರ ಸಂಬಂಧದ ಚಿತ್ರಣಗಳನ್ನು ಕೆತ್ತಲಾಗಿದೆ. ಕನಕನಾಯಕ ಯುದ್ಧದಲ್ಲಿ ಗೆದ್ದು ಬಂದ ಸನ್ನಿವೇಶ, ಕೊಪ್ಪರಿಗೆ ಹೊನ್ನು ಸಿಕ್ಕಾಗ ಕನಕನಾಯಕನಾಗಿದ್ದು, ಕನಕ ಮತ್ತು ವ್ಯಾಸರಾಯರ ಸಂಭಾಷಣೆಯ ದೃಶ್ಯ, ಕನಕನ ಭಕ್ತಿಗೆ ಕೃಷ್ಣನು ಪ್ರತ್ಯಕ್ಷವಾದುದ್ದು (ಕನಕನ ಕಿಂಡಿ), ಆನೆಯ ಶರಣಾಗತಿ ಎಲ್ಲವೂ ಇಲ್ಲಿ ಮೈದಳೆದಿವೆ. 

‘ಇಂತಹ ಶಿಲ್ಪಕಲಾಕೃತಿಗಳ ರಚನೆಯಿಂದ ಕನಕರ ಸಂಪೂರ್ಣ ಚರಿತೆಯನ್ನು ಅರಿಯಬಹುದು. ಜೊತೆಗೆ ಯುವ ಕಲಾವಿದರನ್ನು ಪ್ರೋತ್ಸಾಹಿಸಬಹುದು.  ನಾವು ಮಾಡಿದ ಕೆಲಸ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದರೆ ಅದೇ ನಮಗೆ ಸ್ಪೂರ್ತಿ’ ಎನ್ನುತ್ತಾರೆ ವೈ.ಕುಮಾರ್.

ಹಾವೇರಿಯಿಂದ ಬ್ಯಾಡಗಿಗೆ ಬಂದರೆ ಕಾಗಿನೆಲೆಗೆ ಹೋಗಲು ಬಸ್ ಸೌಲಭ್ಯವಿದೆ. ಕಾಗಿನೆಲೆಯಿಂದ 2.5 ಕಿ.ಮೀಟರ್‌ ಅಂತರದಲ್ಲಿ ಕನಕ ಪರಿಸರ ಸ್ನೇಹಿ ಉದ್ಯಾನವನವಿದ್ದು, ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT