ವಿದಾಯ ಗೀತೆ

ಗುರುವಾರ , ಏಪ್ರಿಲ್ 25, 2019
26 °C

ವಿದಾಯ ಗೀತೆ

Published:
Updated:
Prajavani

ಕಾಣೆಯಾದಳು ರಮಾ, ನನ್ನ ತಂಗಿ

ಆಚೀಚೆ ಪತಿ- ಪುತ್ರ ಇದ್ದಂತೆಯೇ

ಕಣ್ಣೆದುರೇ ಕಣ್ತಪ್ಪಿ ಕಾಣದಂತೆ

ಹಿಡಿದ ಕೈ ಹಿಡಿದೇ ಇದ್ದಂತೆಯೇ

ಕಣ್ಮುಚ್ಚಿ ತೆರೆವುದರಲಿ ದೇಹ ದಾಟಿದಳು

ಮಾಯವಾದಳು ಲೋಕಮಾಯೆಯಾಚೆ 1

 

ತೆಳ್ಳಗೆ ಬೆಳ್ಳಗೆ ನಮ್ಮನೆಯ ಚೆಲುವೆ

ನಮ್ಮೆಲ್ಲರಿಗೂ ಹೆಚ್ಚು ಮೆಚ್ಚಿನವಳು

ಒಳಗೊಳಗೇ ಕವಿಯವಳು, ಕಲಾವಿದೆಯೂ

ದಿಟ್ಟ ದೃಢ ನಿರ್ಣಯದ, ಬಿಡದ ಹಟದವಳು 2

 

ಕಂಡದ್ದು ಕಂಡಂತೆ ನುಡಿವವಳು ನಮ್ಮ ರಮಾ

ಮುಗುದತನದಲ್ಲಿ ರೇಗಿಸುವಳು, ನಗಿಸುವಳು

ಹಿಂದೊಂದು ಮುಂದೊಂದು ಇಲ್ಲದವಳವಳು

ಸ್ವಲ್ಪ ಮಿಲಿಟರಿ ಸ್ತ್ರಿಕ್ಟು ಚಲಾಯಿಸುವವಳು 3

 

ಹಗ್ಗು ಹುಣ್ಣಿಮೆಯಂದು ಹುಟ್ಟಿದವಳಂತೆ

ಹತ್ತು ತಿಂಗಳಿಗೇ ಹೆಜ್ದೆ ಹಾಕಿದವಳಂತೆ

ಅಮ್ಮಂದಿರಲಿ ಮಕ್ಕಳ ಕುರಿತು ಎಷ್ಟೆಲ್ಲ ಕತೆ!

ಕೇಳುತ್ತ ನಾವು ಬೆಳೆದೆವು 4

 

ಜೊತೆಯಾಗಿ ಆಡಿದೆವು, ಬಿದ್ದೆವು ಎದ್ದೆವು

ಒಂದೂ ಜಗಳಾಡದೆಯೆ ಹೆತ್ತವರ ಹೆಸರಲ್ಲಿ

ಕೈ ಕೈ ಹಿಡಿದು ಬಂದೆವಿಲ್ಲಿಯವರೆಗೂ

ಒಡಹುಟ್ಟಿದ ಸವಿಯ ಕರೆಕರೆದು ಹಂಚಿದೆವು

ಮುಗಿಯದಕ್ಷಯ ಪಾತ್ರೆ ನಮ್ಮ ಸಂಚಿ 5

 

ಮುಡಿ ತುಂಬ ಹಿಗ್ಗನ್ನೇ ಮುಡಿದ ಲಕ್ಷಣವಂತೆ,

ಹೊಂಗನಸುಗಳ ಕುದುರೆ ಕಾಸ್ತಾರಿಣಿ

ಪ್ರೀತಿ ಹಸಿವಿನ ಹುಡುಗಿ, ಎಷ್ಟು ಮಾತಿನ ಹುಡುಗಿ,

ಎಷ್ಟು ಕರೆಯುವ ಹುಡುಗಿ, ಖುಷಿ ಖುಷಿಯ ಹುಡುಗಿ

ನಲಿಯುವಷ್ಟೇ ಮಸ್ತು ನೋಯುವವಳೂ

-ಎಲ್ಲಿಗೂ ಒಬ್ಬಳೇ ಹೋಗದವಳು

ಹೋದಳೆಲ್ಲಿಗೆ, ಹೇಗೆ, ಸದ್ದಿಲ್ಲದೆ?

ಬಿರುಸು ಗಾಳಿಗೆ ಮಣಿದ ದೀಪದಂತೆ! 6

 

ರಮಾ ರಮಣೀಯತಾ ಸುಜನಹಿತಾ- ಹಾಡಿದರೆ

ಎಪ್ಪತ್ತರಲ್ಲಿಯೂ ಕಿಲಕಿಲನೆ ನಗೆತಾರೆ

ಬೇಸರದಿ ಗದರುವಳು, ಬೆಂಗಳೂರಿಗೆ ಬಂದೂ - ಬಾರದಿದ್ದರೆ

ಬರಬೇಕು ಉಣಬೇಕು ಉಳಿಯಬೇಕೆಂಬವಳು

ಬಂದಷ್ಟೂ ಇನ್ನೂ ಬರಬೇಕು ಎನ್ನುವಳು

ಅಚ್ಚುಕಟ್ಟಿನ ತುಂಬು ಸಂಸಾರದವಳು

ಕೊಟ್ಟಷ್ಟೂ ತಣಿಯದ ಕೊಡುಗೈಯ ಧೀರೆ 7

 

ಬೆಳದಿಂಗಳಂಥವಳು, ಕರಟಿದಳು ಮುದುಡಿದಳು

ಬಳಲಿದಳು ಕನಲಿದಳು ಅಸ್ವಾಸ್ಥ್ಯದಲ್ಲಿ

ನೊಂದಳು ಬೆಂದಳು ಬಾಡಿದಳು, ಕರಗಿದಳು

ತನ್ನನೇ ಮರೆತು ಆ ಜೀವಂತಿಕೆ,

ಕಡೆಗೂ ಹೊರಟಳು ದಿವಕೆ, ಭೇಷಜನ ಗೃಹಕೆ 8

 

ದಡದಲ್ಲಿ ನಿಂತು ನಾ ನೋಡುತಿದ್ದಂತೆ

ಒಯ್ದೆ ಬಿಟ್ಟಿತು ನಾವೆ ಅವಳನ್ನು ಆಯ್ದು,

ಸರದಿ ಮುರಿದಳು ರಮಾ, ನನ್ನ ತಂಗಿ

ಹೇಳದೆಯೇ ಹೋದಳು ಒಂದು ಮಾತೂ

ಹೇಳದೆಯೆ ನಾವೂ ಬೀಳ್ಕೊಟ್ಟೆವು

ಅವಳಿಲ್ಲವೆಂದರೆ ನಂಬುವುದೆಂತು? 9

 

ಇನ್ನವಳ ಫೋನು ಕಿಂಕಿಣಿಸುವುದಿಲ್ಲ

ಮಾತಿಗಾಗಿಯೇ ಮಾತು ನಿತ್ಯಮಲ್ಲಿಗೆ ದಂಡೆಯಿಲ್ಲ

ಆದರೇನು ಕಿವಿಯಲ್ಲಿ ಟಂಕಿಸಿದೆ ಅವಳ ಧ್ವನಿ

ನಾವಿರುವವರೆಗೂ ಅದಕೆ ಅಳಿವಿಲ್ಲ 10

 

ಎಲ್ಲಿ ಹೋದೆಯೆ ರಮಾ, ಎಲ್ಲಿರುವೆ, ಹೇಗಿರುವೆ

ಹೋದೆ ಹೇಗೆ, ನಮ್ಮನೆಲ್ಲ ಬಿಟ್ಟು

ಎಲ್ಲರೂ ಎಲ್ಲೆಂದು ಮೌನ ಕರೆಯುತ್ತ

ನಿಂತಿರುವೆಯಾ ಅರ್ಧದಾರಿಯಲ್ಲಿ?

ನಿಟ್ಟುಸಿರು ತಬ್ಬಿಬ್ಬು ಗಾಬರಿಯಲ್ಲಿ? 11

 

ಎಲ್ಲರೂ ಬಂಧಿತರು ಅವರವರ ಭವದಲ್ಲಿ

ಭವ ಹರಿದು ಹೋಪಾಗ ಒಂಟಿ ಒಬ್ಬಂಟಿ

ಯಾರಿದ್ದರೂ ಯಾರಿಲ್ಲ ಎಷ್ಟಿದ್ದರೂ ಏನಿಲ್ಲ

ದಾರಿಯೇ ತಿಳಿಯದ ದಾರಿಯಲ್ಲಿ

ಎಲ್ಲಿಗೆಂದೇ ಅರಿಯದೆ ಹೊರಡುವೆವು ಪಯಣ 12

 

ಸೇರುವೆವೆ ನಾವಿನ್ನು, ಎಲ್ಲೊ ಯಾವುದೋ ಜನ್ಮ?

ಸೇರುವೆವು ಕಣೇ, ನಿಸ್ಸಂಶಯ.

ಮುಗಿಯುವಂಥದೇ ನಮ್ಮ ಜನ್ಮಾಂತರದ ಋಣ?

ಸೇರಿ, ಇನ್ನುಳಿದ ನಗೆಮಾತು ಮುಂದರಿಸೋಣ

ನೀನೀಗ ಹೋಗಿರು, ಅಕೋ, ಕರೆಯುತಿರುವಳು ಅಮ್ಮ!

 

ಸದ್ಯಕಷ್ಟೇ ಇರಲಿ ಈ ವಿದಾಯಗಾನ

ಶುಭಾಸ್ತೇ ಸಂತು ಪಂಥಾನಃ.

ಶುಭವಿರಲಿ ಸದಾ - ಮಗುವೆ, ತಂಗಿಯೆ, ಸಖಿಯೇ,

ನಿನ್ನ ಪಂಥಾನ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !