ಬುಧವಾರ, ನವೆಂಬರ್ 20, 2019
22 °C

ಮಿಸ್‌ ಇಂಡಿಯಾದಲ್ಲಿ ಕೀರ್ತಿ

Published:
Updated:
Prajavani

‘ಮಹಾನಟಿ’ ಖ್ಯಾತಿಯ ನಟಿ ಕೀರ್ತಿ ಸುರೇಶ್‌ ಅಭಿನಯದ ಮುಂದಿನ ಚಿತ್ರ ‘ಮಿಸ್‌ ಇಂಡಿಯಾ’. ಮಹಿಳಾ ಕೇಂದ್ರಿತ ಕಥಾವಸ್ತು ಹೊಂದಿದ ಈ ಚಿತ್ರದ ಮುಖ್ಯಪಾತ್ರದಲ್ಲೇ ಕೀರ್ತಿ ನಟಿಸುತ್ತಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ಭಿನ್ನ ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನರೇಂದ್ರನಾಥ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ.

ಈ ಚಿತ್ರದ ಟೀಸರ್‌ ಅನ್ನು ಕೀರ್ತಿ ಸುರೇಶ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೀಸರ್‌ನ ಆರಂಭದ ದೃಶ್ಯದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಂತರದಲ್ಲಿ ಆಧುನಿಕ ಉಡುಪಿನಲ್ಲಿಯೂ ಕಣ್ಸೆಳೆಯುತ್ತಾರೆ. ಮಾನವ ಕಳ್ಳ ಸಾಗಾಟ ಕೇಂದ್ರಿತ ಕತೆಯ ಚಿತ್ರದಲ್ಲಿ ಅವರು ಕಷ್ಟದಲ್ಲಿರುವ ಮಹಿಳೆಯರನ್ನು ಕಾಪಾಡುವ ಪಾತ್ರ ನಿರ್ವಹಿಸಿದ್ದಾರೆ. 

ಜಗಪತಿ ಬಾಬು, ನವೀನ್‌ ಚಂದ್ರ, ರಾಜೇಂದ್ರ ಪ್ರಸಾದ್‌, ನರೇಶ್‌, ಭಾನುಶ್ರೀ ಮೆಹ್ರಾ, ಸುಮಂತ್‌ ಎಸ್‌. ಪೂಜಿತಾ ಮೊದಲಾದವರು ತಾರಾಗಣದಲ್ಲಿದ್ದಾರೆ.

ಮಹಾನಟಿ ಬಳಿಕ ಎರಡು ವರ್ಷಗಳ ನಂತರ ಈ ಮಹಿಳಾ ಕೇಂದ್ರಿತ ಚಿತ್ರದಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಮಹಾನಟಿ ಚಿತ್ರ ಭಾರಿ ಯಶಸ್ಸು ಕಂಡಿತ್ತು. ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಕೀರ್ತಿ ಪಡೆದಿದ್ದರು. 

ಕೀರ್ತಿ,ಮೋಹನ್‌ಲಾಲ್‌ ನಾಯಕನಾಗಿರುವ ಮಲಯಾಳಂ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಮುಂದಿನ ವರ್ಷ ಬಿಡುಗಡೆಯಾಗಲಿದೆ. ಕೀರ್ತಿ ಬಾಲಿವುಡ್‌ಗೂ ಕಾಲಿಡುತ್ತಿದ್ದಾರೆ. ಅಜಯ್‌ ದೇವಗನ್‌ ಅವರ ‘ಮೈದಾನ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಮಿತ್‌ ಶರ್ಮಾ ಈ ಚಿತ್ರದ ನಿರ್ದೇಶಕ.

ಪ್ರತಿಕ್ರಿಯಿಸಿ (+)