ಸೋಮವಾರ, ಸೆಪ್ಟೆಂಬರ್ 16, 2019
26 °C

ಕೆಂಚಾಪುರದ ವೈದ್ಯ ಲಂಡನ್‌ ಕೌನ್ಸಿಲರ್‌

Published:
Updated:
Prajavani

ಚಿತ್ರದುರ್ಗ: ಕೆಂಚಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಬೆಳೆದು ಇಂಗ್ಲೆಂಡ್‌ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕುಮಾರ ನಾಯ್ಕ್‌, ಲಂಡನ್‌ ಕೌನ್ಸಿಲರ್‌ ಆಗಿ ಆಯ್ಕೆಯಾಗಿದ್ದಾರೆ. ಅತ್ಯುನ್ನತ ಹುದ್ದೆಗೆ ಏರಿದ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಸಂತಸ ಉಕ್ಕುತ್ತಿದೆ.

ಲಂಡನ್‌ನ ಸ್ವಿಂಡನ್‌ ಹೆಡನ್‌ ವಿಕ್‌ ಕ್ಷೇತ್ರದಿಂದ ಕನ್ಸರ್ವೇಟಿವ್‌ ಪಾರ್ಟಿಯಿಂದ ಇವರು ಆಯ್ಕೆಯಾಗಿದ್ದಾರೆ. ರಾಜಕೀಯ ಕ್ಷೇತ್ರದ ಮಹಾತ್ವಾಕಾಂಕ್ಷಿ ಹುದ್ದೆಗೆ ಏರಿದ್ದನ್ನು ಗ್ರಾಮಸ್ಥರು ಕಣ್ಣರಳಿಸಿ ನೋಡುತ್ತಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಕೆಂಚಾಪುರ, ಡಾ.ಕುಮಾರ ನಾಯ್ಕ್‌ ಅವರ ಸ್ವಗ್ರಾಮ. ಕೆಎಸ್‌ಆರ್‌ಟಿಸಿ ಉದ್ಯೋಗಿ ತಿಪ್ಪೇಸ್ವಾಮಿ ನಾಯ್ಕ್‌ ಹಾಗೂ ಶಾಂತಾಬಾಯಿ ದಂಪತಿಯ ಹಿರಿಯ ಪುತ್ರ. ಸಹೋದರ ಭಾನುಪ್ರಕಾಶ್‌, ಕವಿತಾ ಹಾಗೂ ಸವಿತಾ ಎಂಬ ಇಬ್ಬರು ಸಹೋ
ದರಿಯರ ತುಂಬು ಕುಟುಂಬ ಇವರದು.

ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆ ಹಾಗೂ ಪ್ರೌಢ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್‌ ಹೈಸ್ಕೂಲಿನಲ್ಲಿ ಪೂರೈಸಿದ್ದಾರೆ. ಮೈಸೂರಿನ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿ–ಆರ್‌ಐ) ವೈದ್ಯಕೀಯ ಪದವಿ ಪಡೆದಿದ್ದಾರೆ. ಕೇರಳದ ಕಾರ್ಪೊರೇಟ್‌ ಕಂಪನಿಯೊಂದರಲ್ಲಿ ವೈದ್ಯರಾಗಿದ್ದ ಇವರು ವೈದ್ಯಕೀಯ ಪದವೀಧರೆ ಡಾ.ಕವಿತಾ ಎಂಬುವರನ್ನು ವಿವಾಹವಾಗಿದ್ದಾರೆ. ಸ್ನೇಹಿತರ ನೆರವಿನಿಂದ 2002ರಲ್ಲಿ ಲಂಡನ್‌ಗೆ ತೆರಳಿ ಎಂಎಸ್ ಪದವಿ ಪಡೆದಿದ್ದಾರೆ.

‘ಸ್ವಗ್ರಾಮದ ಬಗೆಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಕುಮಾರ, ಆಗಾಗ ಹಳ್ಳಿಗೆ ಭೇಟಿ ನೀಡುತ್ತಾರೆ. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಸರ್ಕಾರಿ ಶಾಲೆಗೆ ಕಂಪ್ಯೂಟರ್‌ ಒದಗಿಸಿದ್ದಾರೆ. ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪಿಸಿ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿದ್ದಾರೆ’ ಎನ್ನುತ್ತಾರೆ ಸೋದರಮಾವ ದೇವೇಂದ್ರ ನಾಯ್ಕ್‌.

ಬಹುಮುಖ ಪ್ರತಿಭೆ ಕುಮಾರ, ಅತ್ಯುತ್ತಮ ಹಾಡುಗಾರ. ಇವರ ಕಂಠದಲ್ಲಿ ಹಲವು ಹಾಡುಗಳು ಸುಶ್ರಾವ್ಯವಾಗಿ ಹೊರಹೊಮ್ಮುತ್ತವೆ. ಸಂಗೀತ ಹಾಗೂ ಸಿನಿಮಾ ಇವರ ಅಚ್ಚುಮೆಚ್ಚಿನ ಹವ್ಯಾಸಗಳು ಎಂದು ನೆನಪಿಸಿಕೊಳ್ಳುತ್ತಾರೆ ಹತ್ತಿರದ ಒಡನಾಡಿ ಗೋವಿಂದರಾಜು.

ಸಂತ ಸೇವಾಲಾಲ್‌ ಬಗ್ಗೆ ರೂಪಿಸಿದ ಲಂಬಾಣಿ ಭಾಷೆಯ ಕ್ಯಾಸೆಟ್‌ಗೆ ಕುಮಾರ ಧ್ವನಿಯಾಗಿದ್ದಾರೆ. ಭಾವತುಂಬಿ ಹಾಡಿದ ಇವರ ಭಕ್ತಿಗೀತೆಗಳು ಹೃನ್ಮನ ತಣಿಸುತ್ತಿವೆ. ಈಚೆಗೆ ತೆರೆಕಂಡ ‘ಲಂಡನ್‌ನಲ್ಲಿ ಲಂಬೋದರ’ ಎಂಬ ಸಿನಿಮಾಗೆ ಇವರು ನಿರ್ಮಾಪಕರಾಗಿದ್ದರು.

Post Comments (+)