ಬುಧವಾರ, ಅಕ್ಟೋಬರ್ 23, 2019
24 °C
ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ವಾಹನ ಸವಾರರ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ

ಕೆ.ಜಿ. ನಗರ: ಪಾರ್ಕಿಂಗ್ ತಾಣವಾದ ಹದಗೆಟ್ಟ ರಸ್ತೆ

Published:
Updated:

ಬೆಂಗಳೂರು: ಅಗೆದು ಹಾಗೆಯೇ ಬಿಟ್ಟಿರುವ ರಸ್ತೆಯುದ್ದಕ್ಕೂ ವಾಹನಗಳ ಪಾರ್ಕಿಂಗ್‌, ಹೆಜ್ಜೆ ಹೆಜ್ಜೆಗೂ ಗುಂಡಿಗಳ ದರ್ಶನ, ರಸ್ತೆಯ ನಡುವೆಯೇ ‌ಕಸದ ರಾಶಿ, ಮಾರ್ಗ ಮಧ್ಯದಲ್ಲಿಯೇ ತಳ್ಳುಗಾಡಿಯಲ್ಲಿ ವ್ಯಾಪಾರ...

ಇದು ಬೆಂಗಳೂರು ದಕ್ಷಿಣದ ಕೆಂಪೇಗೌಡ ನಗರದ ಶಾರದಾದೇವಿ ರಸ್ತೆಯಲ್ಲಿ ಕಂಡು ಬರುವ ದೃಶ್ಯ. ಕೆ.ಜಿ. ನಗರ ಮುಖ್ಯ ರಸ್ತೆ ಹಾಗೂ ದೊಡ್ಡ ಬಸವನಗುಡಿ ರಸ್ತೆಗೆ ಸಂಪರ್ಕ ಒದಗಿಸುವ ಈ ರಸ್ತೆಯಲ್ಲಿ ವಾಹನ ಸವಾರರಿಗೆ ಸಂಚರಿಸುವುದು ಸವಾಲಾಗಿದೆ. ಶನೇಶ್ವರ ದೇವಾಲಯಕ್ಕೆ ಹೋಗಬೇಕಾದವರು ಸಹ ಇದೇ ರಸ್ತೆಯಲ್ಲಿ ಸಾಗಬೇಕಾಗಿದೆ. ಆದರೆ, ನೀರು ಹಾಗೂ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಸಂಬಂಧ ಅಗೆದಿರುವ ರಸ್ತೆಯನ್ನು ಹಾಗೇ ಬಿಡಲಾಗಿದೆ. ಇದರಿಂದಾಗಿ ಶನೇಶ್ವರ ದೇವಾಲಯದ ಪ್ರವೇಶ ದ್ವಾರದವರೆಗಿನ ದ್ವಿಮುಖ ಸಂಚಾರ ರಸ್ತೆಯಲ್ಲಿ ವಾಹನಗಳು ಏಕಮುಖವಾಗಿ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ದೊಡ್ಡ ವಾಹನಗಳು ಎದುರಾದರೆ ವಾಹನ ದಟ್ಟಣೆ ನಿಶ್ಚಿತ.

ಅಗೆದಿರುವ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು, ರಸ್ತೆಯುದ್ದಕ್ಕೂ ವಾಹನಗಳನ್ನು ನಿಲುಗಡೆ ಮಾಡಿದ್ದಾರೆ. ರಸ್ತೆಯ ಪ್ರಾರಂಭದಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರವನ್ನೂ ಮಾಡಲಾಗುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಸಹ ರಸ್ತೆಯಲ್ಲಿ ಸಾಗಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ, ಕೆ.ಜಿ. ರಸ್ತೆಯ ಮೂಲಕ ಶನೇಶ್ವರ ದೇವಾಲಯಕ್ಕೆ ಬರುವ ರಸ್ತೆ ಕೂಡಾ ಹಾಳಾಗಿದ್ದು, ಮಳೆ ಬಂದರೆ ವಾಹನ ಸವಾರರು ಕಸರತ್ತು ಮಾಡಬೇಕಾಗಿದೆ. ಈ ನಡುವೆ ಕಟ್ಟಡ ನಿರ್ಮಾಣ ಕಾಮಗಾರಿಗಳೂ ಅಲ್ಲಲ್ಲಿ ನಡೆಯುತ್ತಿದ್ದು, ಮರಳು, ಜಲ್ಲಿಯನ್ನು ರಸ್ತೆ ಮೇಲೆಯೇ ರಾಶಿ ಹಾಕಲಾಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ವಾಹನ ಸವಾರರು ಎಲ್ಲೆಂದರೆಲ್ಲಿ ವಾಹನವನ್ನು ಪಾರ್ಕಿಂಗ್‌ ಮಾಡುತ್ತಿದ್ದಾರೆ. 

2 ವರ್ಷಗಳಿಂದ ಸಮಸ್ಯೆ: ‘ರಸ್ತೆಯನ್ನು ಅಗೆದು ಎರಡು ವರ್ಷಗಳಾದವು. ಈವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪದೇ ಪದೇ ಅಗೆಯಲಾಗುತ್ತಿದ್ದು, ಯಾರು ಕೂಡಾ ಈ ಬಗ್ಗೆ ಗಮನಹರಿಸುತ್ತಿಲ್ಲ. ರಸ್ತೆಯ ಒಂದು ಕಡೆ ಸಂಚಾರವನ್ನೇ ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಅಕ್ಕ ಪಕ್ಕದ ನಿವಾಸಿಗಳು ಕಸ ಹಾಕುವ ಸ್ಥಳವನ್ನಾಗಿಸಿಕೊಂಡಿದ್ದಾರೆ. ದುರ್ವಾಸನೆಗೆ ಅಂಗಡಿಗಳಲ್ಲಿ ಕುಳಿತುಕೊಳ್ಳುವುದು ಕೂಡಾ ಕಷ್ಟ’ ಎಂದು ವ್ಯಾಪಾರಿ ಫಣೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಸ್ತೆ ವಿಭಜಕದಲ್ಲಿ ಸ್ಥಳೀಯರೆಲ್ಲ ಸೇರಿ ಗಿಡಗಳನ್ನು ನೆಟ್ಟು, ನಿರ್ವಹಣೆ ಮಾಡುತ್ತಿದ್ದೆವು. ಆದರೆ, ಇದೀಗ ರಸ್ತೆ ಸಮಸ್ಯೆಯಿಂದ  ಗಿಡಗಳ ನಿರ್ವಹಣೆಯನ್ನು ಕೈ ಬಿಟ್ಟಿದ್ದೇವೆ. ಇದರಿಂದಾಗಿ ರಸ್ತೆಯುದ್ದಕ್ಕೂ ಇದ್ದ ಹಸಿರು ಮಾಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇವಾಲಯದ ಪ್ರವೇಶದ್ವಾರದಲ್ಲೇ ಕಸದ ರಾಶಿ’
‘ಶನೇಶ್ವರ ದೇವಾಲಯದ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಕಸ ಹಾಕದಂತೆ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ಆದರೆ, ಅದರ ಕೆಳಗಡೆಯೇ ಕಸವನ್ನು ಹಾಕುತ್ತಿದ್ದಾರೆ. ಇದರಿಂದ ಬೀದಿನಾಯಿಗಳೂ ಇಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿವೆ. ರಸ್ತೆ ಸರಿ ಇದ್ದಲ್ಲಿ ಈ ರೀತಿ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ’ ಎಂದು ಕೆ.ಜಿ. ನಗರದ ನಿವಾಸಿ ಚಂದ್ರು ತಿಳಿಸಿದರು.

‘ರಸ್ತೆ ಮಧ್ಯದಲ್ಲಿ ಪಾರ್ಕಿಂಗ್‌ ಮಾಡಿದ ವಾಹನಗಳನ್ನು ಒಂದೆರಡು ಬಾರಿ ಟೋಯಿಂಗ್ ಮಾಡಲಾಯಿತು. ಬಳಿಕ
ಟ್ರಾಫಿಕ್‌ ಪೊಲೀಸರು ಕೂಡಾ ಈ ಕಡೆ ಮುಖ ಮಾಡಿಲ್ಲ. ಇದರಿಂದ ರಸ್ತೆ ಪೂರ್ಣಾವಧಿ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

*
ವಸತಿ ಸಮುಚ್ಚಯ ಸೇರಿದಂತೆ ವಿವಿಧ ಕಟ್ಟಡಗಳು ನಿರ್ಮಾಣ ಆಗುತ್ತಿರುವುದರಿಂದ ಆಗಾಗ ಅಗೆಯಲಾಗುತ್ತಿದೆ. ಇದರಿಂದ ರಸ್ತೆ ಸಮಸ್ಯೆಗೆ ಕೊನೆ ಇಲ್ಲ ಎಂಬಂತಾಗಿದೆ.
-ಶೇಖರ್, ಕೆ.ಜಿ. ನಗರ ನಿವಾಸಿ

*
ರಸ್ತೆ ಹಾಳಾಗಿರುವುದರಿಂದ ದೇವಾಲಯಕ್ಕೆ ಬರುವ ಭಕ್ತರು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ಉತ್ತಮ ರಸ್ತೆಯನ್ನು ಕಾಮಗಾರಿ ಹೆಸರಿನಲ್ಲಿ ಅಗೆದು ಹಾಕಲಾಗಿದೆ. 
-ವೆಂಕಟಪ್ಪ, ದೇವಾಲಯದ ಸಿಬ್ಬಂದಿ

*
ವಸತಿ ಸಮುಚ್ಚಯಕ್ಕೆ ನೀರು ಹಾಗೂ ಒಳಚರಂಡಿ ಕೊಳವೆ ಅಳವಡಿಸಲು ರಸ್ತೆಗಳನ್ನು ಅಗೆಯಲಾಗಿದೆ. ರಸ್ತೆ ನಿರ್ಮಾಣ ಮಾಡಿಕೊಡಲು ಸೂಚಿಸಲಾಗಿದೆ.
-ಎಚ್‌.ಎನ್. ರಮೇಶ್ ಪಾಲಿಕೆ ಸದಸ್ಯ, ಸುಂಕೇನಹಳ್ಳಿ ವಾರ್ಡ್‌

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)