ಕೋರಮಂಗಲದ ನಿವಾಸಿಗಳಿಗೆ ನೆರೆಯೇ ಹೊರೆ

ಮಂಗಳವಾರ, ಜೂನ್ 18, 2019
23 °C
ವೇಗ ಪಡೆದಿಲ್ಲ ಪರಿಹಾರ ಕಾಮಗಾರಿ * ಚರಂಡಿಗೆ ಕಸ ಎಸೆಯುವುದರಿಂದ ಹೆಚ್ಚುತ್ತಿರುವ ಸಮಸ್ಯೆ

ಕೋರಮಂಗಲದ ನಿವಾಸಿಗಳಿಗೆ ನೆರೆಯೇ ಹೊರೆ

Published:
Updated:
Prajavani

ಬೆಂಗಳೂರು: ನಗರದಲ್ಲಿ ಜೋರು ಮಳೆ ಬಂತೆಂದರೆ ಇಲ್ಲಿ ಭೂಮಿಗೆ ಇಂಗುವ ನೀರಿನ ಪ್ರಮಾಣಕ್ಕಿಂತ ಮನೆಗಳಿಗೆ ನುಗ್ಗುವ ನೀರಿನ ಪ್ರಮಾಣವೇ ಹೆಚ್ಚು.

ಕೋರಮಂಗಲ ಹಾಗೂ ಎಚ್‌ಎಸ್‌ಆರ್‌ ಬಡಾವಣೆ ಮತ್ತು ಆಸುಪಾಸಿನ ನಿವಾಸಿಗಳು ಪ್ರತಿವರ್ಷವೂ ಮಳೆಗಾಲದಲ್ಲಿ ಎದುರಿಸುತ್ತಿರುವ ಪರಿಸ್ಥಿತಿ ಇದು. ಕಳೆದ ಮೂರು ಮಳೆಗಾಲಗಳಲ್ಲಿ ಅನುಭವಿಸಿದ ಸಂಕಟಗಳನ್ನು ಇಲ್ಲಿನ ಜನ ಇನ್ನೂ ಮರೆತಿಲ್ಲ.

‘ರಸ್ತೆ ಮೇಲೆ 3 ಅಡಿಗಳಷ್ಟು ಎತ್ತರದವರೆಗೆ ನಿಂತಿದ್ದ ನೀರು, ಮನೆ ಒಳಗೂ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಮನೆ ಹೊರಗೂ ಬರುವಂತಿಲ್ಲ, ಒಳಗೂ ಇರುವಂತಿಲ್ಲ ಎನ್ನುವ ಇಕ್ಕಟ್ಟಿನ ಪರಿಸ್ಥಿತಿ. ಅಗ್ನಿಶಾಮಕ ದಳದ ಸಿಬ್ಬಂದಿಯೇ ನಮ್ಮ ಸಹಾಯಕ್ಕೆ ಬಂದರೂ ಮನೆಯೊಳಗಿನ ನೀರು ಹೊರ ಹಾಕಲು ಎರಡು ದಿನಗಳು ಬೇಕಾದವು’ ಎಂದು ನೆನಪಿಸಿಕೊಳ್ಳುತ್ತಾರೆ ವೆಂಕಟಾಪುರ ನಿವಾಸಿ ಎನ್‌. ರಾಜು.

‘ಮಳೆ ಬಂದಾಗ ಎಸ್‌.ಟಿ. ಬೆಡ್‌ ಬಡಾವಣೆಯ ವರ್ತುಲ ರಸ್ತೆ ಬಳಿಯ ನಿವಾಸಿಗಳು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಇಲ್ಲಿ ರಾಜಕಾಲುವೆ ಹೆಚ್ಚು ಅಗಲ ಇರಲಿಲ್ಲ. ಕಳೆದ ವರ್ಷ ಮಳೆ ಬಂದಾಗ ಕಾಲುವೆಯಲ್ಲಿ ನೀರು ಉಕ್ಕಿ ಹರಿದು, ರಸ್ತೆಯನ್ನು
ನುಂಗಿತ್ತು. ಇಲ್ಲೊಂದು ರಸ್ತೆ ಇತ್ತು ಎಂಬುದೇ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿತ್ತು.

ಹಾಗಾಗಿ, ಈ ಬಾರಿ ರಾಜಕಾಲುವೆಯ ಅಗಲವನ್ನು ಹೆಚ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ರಸ್ತೆಯನ್ನು ಅಗೆಯಲಾಗಿದೆ. ಎರಡು ತಿಂಗಳ ಹಿಂದೆ ಆರಂಭವಾದ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೀವೇ ನೋಡಿ, ಮಳೆಗಾಲ ಶುರು ವಾಗುವ ಹೊತ್ತಿಗೆ ಕಾಮಗಾರಿ ಪ್ರಾರಂಭಿಸಿದ್ದಾರೆ. ರಸ್ತೆಯನ್ನು ಕಾಲುವೆಯ ಮಟ್ಟಕ್ಕೆ ಎತ್ತರಿಸುವ ಉದ್ದೇಶದಿಂದ ಉದ್ದನೆಯ ಕಬ್ಬಿಣದ ಕಂಬಿಗಳನ್ನು ಜೋಡಿಸಿದ್ದಾರೆ.  ಈಗೇನಾದರೂ ಮಳೆ ಬಂದರೆ, ಕೊಳಚೆ ನೀರು ಮತ್ತೆ ರಸ್ತೆ ಮೇಲೇ ಬರುತ್ತದೆ. ಇದನ್ನು ತಡೆಯಲು ಅಡ್ಡಲಾಗಿ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ.

ಕೊಳಕು ನೀರು ಕುಡಿಯುವ ನೀರಿಗೆ ಸೇರುತ್ತದೆ. ಈಗಲೇ ನಮಗೆ ಭಯ ಶುರುವಾಗಿದೆ’ ಎಂದು ಎಸ್‌.ಟಿ. ಬೆಡ್‌ ಬಡಾವಣೆಯ ಶಾಂತಾಬಾಯಿ ಕಾಮಗಾರಿ ನಡೆಯುವ ಸ್ಥಳವನ್ನು ತೋರಿಸಿದರು.

ಚರಂಡಿಗೆ ಕಸ: ‘ಈ ಪ್ರದೇಶದ ಮುಖ್ಯ ಸಮಸ್ಯೆ, ಕಸವನ್ನು ಚರಂಡಿಗೆ ಹಾಕುವುದು. ದೊಡ್ಡ ದೊಡ್ಡ ಪ್ಲ್ಯಾಸ್ಟಿಕ್‌ ಕವರ್‌ಗಳಲ್ಲಿ ಕಸ ತುಂಬಿಕೊಂಡು ವಾಹನಗಳಲ್ಲಿ ಬರುವ ಕೆಲವರು ಅದನ್ನು ಚರಂಡಿಗೆ ಅಥವಾ ಮೋರಿಗೆ ಎಸೆದು ಹೋಗುತ್ತಾರೆ. ಇದರಿಂದ ನೀರಿನ ಸಹಜ ಹರಿವಿಗೆ ತೊಂದರೆ ಆಗುತ್ತದೆ. ಇದು ನಿಲ್ಲಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಂ. ಮೋಹನ್‌.

‘ಇಲ್ಲಿ ರಸ್ತೆ ಕಸ ಗುಡಿಸುವವರು ಸಂಗ್ರವಾದ ಕಸವನ್ನೆಲ್ಲಾ ಚರಂಡಿಗೆ ಎಸೆದು ಹೋಗುತ್ತಾರೆ. ಇದರಿಂದಾಗಿಯೂ ಚರಂಡಿ ಕಟ್ಟಿ ಹೋಗುತ್ತಿದೆ’ ಎಂದು ಮಳಿಗೆಯೊಂದರ ಕಾವಲುಗಾರೊಬ್ಬರು ತಿಳಿಸಿದರು.

‘ರಾಜಕಾಲುವೆಯನ್ನು ಇನ್ನಷ್ಟು ಅಗಲಗೊಳಿಸಿ’
ಕಳೆದ ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಪ್ರವಾಹದಿಂದ ಸಮಸ್ಯೆ ಸೃಷ್ಟಿಯಾದ ಬಳಿಕ ಪಾಲಿಕೆಯ ಆಡಳಿತ ವರ್ಗ ಎಚ್ಚೆತ್ತುಕೊಂಡಿದೆ ಎನ್ನುತ್ತಾರೆ ಸ್ಥಳೀಯರು.

‘ಮೋರಿ, ಚರಂಡಿಗಳನ್ನು ಸ್ಚಚ್ಛ ಮಾಡಿಸಿದ್ದಾರೆ.  ಚರಂಡಿಗಳನ್ನು ವೈಜ್ಞಾನಿಕವಾಗಿ ದುರಸ್ತಿಪಡಿಸಿದ್ದಾರೆ. ಕೊಳಚೆ ನೀರು ಸರಾಗವಾಗಿ ಹರಿದು ಕಾಲುವೆ ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಬಾರಿ ಕಳೆದ ವರ್ಷ ಆದಷ್ಟು ಅನಾಹುತ ಆಗುವುದಿಲ್ಲ ಎನಿಸುತ್ತದೆ’ ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದರು. 

‘ಬೆಂಗಳೂರಿನ ಇತರ ಪ್ರದೇಶಗಳ ಮಳೆ ನೀರು ಕೂಡ ಇಲ್ಲಿನ ರಾಜಕಾಲುವೆಯನ್ನು ಸೇರುತ್ತದೆ. ಇಲ್ಲಿಂದ ಬೆಳ್ಳಂದೂರು ಕೆರೆಯನ್ನು ಸೇರುತ್ತದೆ. ಇಲ್ಲಿ ಮೋರಿಗಳನ್ನು ಅಗಲ ಮಾಡಿದ್ದರೂ, ನೀರು ಕೆರೆಗೆ ಸೇರುವ ಜಾಗ ಸಣ್ಣದಾಗಿದೆ. ಇಲ್ಲಿ ಕಾಲುವೆಯ ಅಗಲವನ್ನು ಇನ್ನಷ್ಟು ಹೆಚ್ಚಿಸಬೇಕು. ಇಲ್ಲದೆ ಇದ್ದರೆ, ನೀರು ಉಕ್ಕಿ ಹರಿಯುತ್ತದೆ. ಇದರ ಬಗ್ಗೆ ಅಧಿಕಾರಿ ವರ್ಗ ಗಮನ ಹರಿಸಬೇಕು’ ಎಂದು ಎಂ. ಮೋಹನ್‌ ಅವರು ಸಲಹೆ ನೀಡಿದರು.

‘ಯಾರೂ ಸಹಕಾರ ನೀಡುತ್ತಿಲ್ಲ’
ಇಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ ಎಂದು ಆರೋಪಿಸಿರುವ ಜಕ್ಕಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯೆ ಸರಸ್ವತಮ್ಮ, ‘ನಾನು ಬಿಜೆಪಿಯಿಂದ ಆಯ್ಕೆಯಾದ ಪಾಲಿಕೆ ಸದಸ್ಯೆ. ಇಲ್ಲಿರುವುದು ಕಾಂಗ್ರೆಸ್‌ ಶಾಸಕರು. ಹಾಗಾಗಿ ಅಧಿಕಾರಿಗಳೂ ನನ್ನ ಮಾತು ಕೇಳುವುದಿಲ್ಲ. ಅನೇಕ ಕಾಮಗಾರಿಗಳು ಸ್ಥಗಿತಗೊಂಡಿವೆ’ ಎಂದರು.

‘ಚರಂಡಿಗೆ ಕಸ ಹಾಕುವವರನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಪ್ರವಾಹ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !