ಕೂತನೂರು ಗ್ರಾಮದಲ್ಲಿ ಸ್ವಚ್ಛತೆ ಮಾಯ

ಶನಿವಾರ, ಏಪ್ರಿಲ್ 20, 2019
28 °C
ಗ್ರಾಮ ಪಂಚಾಯಿತಿ ಆಡಳಿತ ವಿರುದ್ಧ ಗ್ರಾಮಸ್ಥರ ಆಕ್ರೋಶ, ರಸ್ತೆ, ಚರಂಡಿ, ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಲು ಆಗ್ರಹ

ಕೂತನೂರು ಗ್ರಾಮದಲ್ಲಿ ಸ್ವಚ್ಛತೆ ಮಾಯ

Published:
Updated:
Prajavani

ಗುಂಡ್ಲುಪೇಟೆ: ರಸ್ತೆ ಮಧ್ಯದಲ್ಲಿ ಹರಿಯುತ್ತಿರುವ ಚರಂಡಿ ನೀರು, ಮನೆಯ ಮುಂದೆ ತಿಂಗಳಾನುಗಟ್ಟಲೆ ಬಿದ್ದಿರುವ ಕಸದ ರಾಶಿ, ಗಬ್ಬು‌ ವಾಸನೆಯ ನಡುವೆಯೇ ವಾಸ ಮಾಡಬೇಕಾದ ಪರಿಸ್ಥಿತಿಯನ್ನು ತಾಲ್ಲೂಕಿನ ಕೂತನೂರು ಗ್ರಾಮದ ಜನರು ಎದುರಿಸುತ್ತಿದ್ದಾರೆ. 

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಕೂತನೂರಿನಲ್ಲಿ ಉಪ್ಪಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

‘ರಸ್ತೆ, ಚರಂಡಿ, ಕುಡಿಯುವ ನೀರಿನ ಟ್ಯಾಂಕ್ ಅನ್ನು ಸ್ವಚ್ಛ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಅಧ್ಯಕ್ಷರಿಗೆ ತಿಳಿಸಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಚರಂಡಿಯನ್ನು ಸ್ವಚ್ಛಗೊಳಿಸದೆ ವರ್ಷಗಳೇ ಕಳೆದಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅನೇಕರಲ್ಲಿ ಜ್ವರ ಕಾಣಿಸಿಕೊಂಡಿದೆ. ಈ ಸಮಸ್ಯೆಗಳ ಬಗ್ಗೆ ತಿಳಿಸಲು ಪಂಚಾಯಿತಿ ಕಚೇರಿಗೆ ಹೋದರೆ ಅಧಿಕಾರಿ ಮತ್ತು ಅಧ್ಯಕ್ಷರು ಹೆದರಿಸಿ ಕಳಿಸುತ್ತಾರೆ. ಯಾವುದಕ್ಕೂ ಸ್ಪಂದಿಸುವುದಿಲ್ಲ’ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು.

ಅನೈರ್ಮಲ್ಯ ತಾಂಡವ: ಗ್ರಾಮ ಪಂಚಾಯಿತಿ ಕಚೇರಿ ಎದುರೇ ಚರಂಡಿ ನೀರು ನಿಂತಿದೆ. ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ, ಕುಡಿಯವ ನೀರಿನ ಟ್ಯಾಂಕ್ ಪಾಚಿಕಟ್ಟಿದ್ದು ವಾಸನೆ ಬರುತ್ತಿದೆ. ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಪಂಚಾಯಿತಿ ಪಕ್ಕದಲ್ಲೇ ಕಿರಿಯ ಪ್ರಾಥಮಿಕ ಶಾಲೆ ಇದೆ. ಇಲ್ಲೂ ಅನೈರ್ಮಲ್ಯ ತಾಂಡವಾಡುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ತಕರಾರು: ಚರಂಡಿ ಮಾಡಲು ಗ್ರಾಮಸ್ಥರ ತಕರಾರು ಇದೆ. ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಕೆಲವರು ಚರಂಡಿ ನಿರ್ಮಿಸಲು ಬಿಡುತ್ತಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ. 

‘ಜಾಗದ ಮಾಲೀಕತ್ವದ ಬಗ್ಗೆ ವಿವಾದ ಇರುವುದರಿಂದ ರಸ್ತೆ ನಿರ್ಮಿಸಲು ಆಗುತ್ತಿಲ್ಲ. ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಚುನಾವಣೆ ಮುಗಿದ ಬಳಿ ಮಾತು‌ಕತೆ ನಡೆಸಿ ರಸ್ತೆಯನ್ನು ಮಾಡಲಾಗುವುದು. ಚರಂಡಿಯನ್ನು ವಾರದೊಳಗೆ ಸ್ವಚ್ಛಗೊಳಿಸಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೋಹನ್ ಅವರು ತಿಳಿಸಿದರು.

ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ
‘ಹಲವು ವರ್ಷಗಳಿಂದ ಏನೂ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಎದುರಿಸುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮೂಲ ಸೌಕರ್ಯಗಳನ್ನು ನೀಡದ ಜನಪ್ರತಿನಿಧಿಗಳಿಗೆ ಏಕೆ ಮತ ನೀಡಬೇಕು?’ ಎಂಬುದು ಗ್ರಾಮಸ್ಥರ ಪ್ರಶ್ನೆ.

ವಾರದೊಳಗೆ ಗ್ರಾಮವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !