‘ಕಾರ್ಮಿಕರ ಹಕ್ಕು ಬಲಪಡಿಸಲು ಹೋರಾಟ ಅನಿವಾರ್ಯ’

ಸೋಮವಾರ, ಮೇ 20, 2019
30 °C
ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಜಾಥಾ

‘ಕಾರ್ಮಿಕರ ಹಕ್ಕು ಬಲಪಡಿಸಲು ಹೋರಾಟ ಅನಿವಾರ್ಯ’

Published:
Updated:
Prajavani

ವಿಜಯಪುರ: ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಬುಧವಾರ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಜಾಥಾ ನಡೆಯಿತು.

ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಥಾ ಪ್ರಮುಖ ಮಾರ್ಗಗಳ ಮೂಲಕ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತಕ್ಕೆ ತಲುಪಿ ಮುಕ್ತಾಯಗೊಂಡಿತು.

ಕೆಂಪು ಬಟ್ಟೆ ತೊಟ್ಟ ಅಪಾರ ಸಂಖ್ಯೆಯ ಕಾರ್ಮಿಕರು ಕೆಂಪು ಬಾವುಟ ಪ್ರದರ್ಶಿಸುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕಾರ್ಮಿಕ ಶಕ್ತಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು.

ಕಾರ್ಮಿಕ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ದಮನ ಮಾಡಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ಕಾರ್ಮಿಕರ ಪರವಾದ ಅನೇಕ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕಾರ್ಮಿಕ ಶಕ್ತಿಯನ್ನೇ ದುರ್ಬಲಗೊಳಿಸುವ ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದೆ. ಬಂಡವಾಳ ಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಆರೋಪಿಸಿದರು.

‘ನೋಟು ಅಮಾನ್ಯೀಕರಣ, ಜಿಎಸ್‌ಟಿ ಮೊದಲಾದ ವ್ಯವಸ್ಥೆಯಿಂದಾಗಿ ಆಹಾರ ಧಾನ್ಯ ಪದಾರ್ಥಗಳು, ಪೆಟ್ರೋಲ್, ಡೀಸೆಲ್‌ ಬೆಲೆಗಳು ನಿರಂತರ ಏರಿಕೆಯಾಗುತ್ತಿದೆ. ಬ್ಯಾಂಕ್‌, ವಿಮಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ದೂರಿದ ಅವರು, ₹ 2 ಕೋಟಿ ಉದ್ಯೋಗ ಸೃಷ್ಟಿ, ಬಡವರ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಮೋದಿನೀಡಿದ್ದ ಭರವಸೆ ಈಡೇರಿಸಲಿಲ್ಲ. ಅಚ್ಛೇ ದಿನ ಬರಲಿವೆ ಎಂದರು, ಆದರೆ ಈಗ ಬಂದಿದ್ದು ಕರಾಬ್ ದಿನ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ ‘ದುಡಿಯುವ ಜನರ ಹಕ್ಕುಗಳ ಸಂರಕ್ಷಣೆ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಆಳುವ ಸರ್ಕಾರಗಳು ರೂಪಿಸುತ್ತಿರುವ ‘ನವ ಉದಾರವಾದಿ ನೀತಿ’ಗಳ ಮೂಲಕ ದೇಶದಲ್ಲಿ ಸಮರಶೀಲ ಹೋರಾಟಗಳಿಂದ ಕಾರ್ಮಿಕ ವರ್ಗ ಪಡೆದಂತಹ ಕಾರ್ಮಿಕ ಹಕ್ಕುಗಳನ್ನು ಇಲ್ಲವಾಗಿಸಲು ಹೊರಟಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಸ್ತುತ ಕೇಂದ್ರ ಸರ್ಕಾರ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಸರಳೀಕರಣಗೊಳಿಸುವ ನೆಪದಲ್ಲಿ 4 ಸಂಹಿತೆಗಳಾಗಿ ಮಾರ್ಪಡಿಸಿ ಬಂಡವಾಳ ಪರ, ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಹಕ್ಕುಗಳನ್ನು ಬಲಪಡಿಸಲು ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ಕಾರ್ಮಿಕ ಮುಖಂಡರಾದ ಅಣ್ಣಾರಾಯ ಈಳಗೇರ, ಪ್ರಕಾಶ ಹಿಟ್ನಳ್ಳಿ, ಸುನಂದಾ ನಾಯಕ, ಸುರೇಖಾ ರಜಪೂತ ಸೇರಿದಂತೆ ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ಸೇರಿದಂತೆ ವಿವಿಧ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !