ದ್ವೀಪರಾಷ್ಟ್ರ ಈಗ ಸುರಕ್ಷಿತ

ಶನಿವಾರ, ಮೇ 25, 2019
22 °C
ಭದ್ರತಾ ಪಡೆ ಅಧಿಕಾರಿಗಳಿಂದ ಘೋಷಣೆ

ದ್ವೀಪರಾಷ್ಟ್ರ ಈಗ ಸುರಕ್ಷಿತ

Published:
Updated:
Prajavani

ಕೊಲಂಬೊ: ಈಸ್ಟರ್ ಭಾನುವಾರದಂದು ನಡೆದ ಭೀಕರ ಆತ್ಮಾಹುತಿ ದಾಳಿಯಿಂದ ತತ್ತರಿಸಿದ್ದ ಶ್ರೀಲಂಕಾ ಈಗ ಸಹಜಸ್ಥಿತಿಯತ್ತ ಮರಳುತ್ತಿದ್ದು, ದೇಶ ಸುರಕ್ಷಿತವಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ. 

ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಪೊಲೀಸ್ ಮಹಾನಿರ್ದೇಶಕ ಚಂದನ ವಿಕ್ರಮರತ್ನೆ ಮನವಿ ಮಾಡಿದ್ದಾರೆ. 

‘ದಾಳಿಗೆ ನೇರ ಹಾಗೂ ಪರೋಕ್ಷ ಸಂಬಂಧ ಹೊಂದಿದ್ದವರಲ್ಲಿ ಹಲವರನ್ನು ಬಂಧಿಸಲಾಗಿದೆ ಹಾಗೂ ಇನ್ನೂ ಕೆಲವರನ್ನು ಹತ್ಯೆ ಮಾಡಲಾಗಿದೆ’ ಎಂದು ಸೇನಾಪಡೆಯ ಮೂರೂ ವಿಭಾಗಗಳ ಕಮಾಂಡರ್ ಹಾಗೂ ಪೊಲೀಸ್ ಮುಖ್ಯಸ್ಥರು ಸೋಮವಾರ ರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. 

‘ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್‌ಗೆ (ಎನ್‌ಟಿಜೆ)ಸೇರಿದ್ದ ಎಲ್ಲಾ ಸ್ಫೋಟಕಗಳನ್ನು ಪತ್ತೆ ಮಾಡಲಾಗಿದೆ. ಸಂಘಟನೆ ಜತೆ ಸಂಬಂಧ ಹೊಂದಿದ್ದವರನ್ನು ಬಂಧಿಸಲಾಗಿದೆ. ಇಬ್ಬರು ಸ್ಫೋಟಕ ತಜ್ಞರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ’ ಎಂದು ವಿಕ್ರಮರತ್ನೆ ವಿವರಿಸಿದ್ದಾರೆ.

ಬಂಧಿತರ ಕುರಿತು ವಿಕ್ರಮರತ್ನೆ ವಿವರ ನೀಡಿಲ್ಲ. ಆದರೆ 9 ಮಹಿಳೆಯರ ಸಹಿತ 73 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ರುವನ್ ಗುಣಶೇಖರ ಹೇಳಿದ್ದಾರೆ. 

₹700 ಕೋಟಿ ಮೌಲ್ಯದ ಸ್ವತ್ತು ವಶ: ‘ಸಿಐಡಿ ಹಾಗೂ ಭಯೋತ್ಪಾದಕ ತನಿಖಾ ಇಲಾಖೆ (ಟಿಐಡಿ) ಅಧಿಕಾರಿ
ಗಳು ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಎನ್‌ಟಿಜೆಗೆ ಸೇರಿದ ₹14 ಕೋಟಿಗೂ ಹೆಚ್ಚು ಹಣ ಹಾಗೂ ₹ 700 ಕೋಟಿ ಮೌಲ್ಯದ ಸ್ವತ್ತುಗಳನ್ನು ಪತ್ತೆ ಮಾಡಲಾಗಿದೆ’ ಎಂದು ಗುಣಶೇಖರ ತಿಳಿಸಿದ್ದಾರೆ. 

‘ದೇಶದ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಲೆ.ಜ. ಸೇನಾನಾಯಕೆ ತಿಳಿಸಿದ್ದಾರೆ. ಏ.21ರಂದು ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 257 ಮಂದಿ ಮೃತಪಟ್ಟಿದ್ದರು.

ಬಿಗಿ ಭದ್ರತೆಯಲ್ಲಿ ತೆರೆದ ಚರ್ಚ್

ದಾಳಿಗೆ ತುತ್ತಾಗಿ ಹಾನಿಯಾಗಿರುವ ಸೇಂಟ್ ಆಂಥೊನಿ ಚರ್ಚ್ ಅನ್ನು ಮಂಗಳವಾರ ಬಿಗಿ ಭದ್ರತೆ ನಡುವೆ ಭಾಗಶಃ ತೆರೆಯಲಾಯಿತು. 

‘ಚರ್ಚ್‌ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ನಡುವೆಯೇ ಜನರಿಗೆ ಸೇಂಟ್ ಆಂಥೊನಿ ಪ್ರತಿಮೆ ಎದುರು ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು’ ಎಂದು ಕಾರ್ಡಿನಲ್ ಮಾಲ್ಕಂ ರಂಜಿತ್ ಅವರ ವಕ್ತಾರ ಪಾದ್ರಿ ಎಡ್ಮಂಡ್ ತಿಲಕರತ್ನೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !