ಭಾನುವಾರ, ಮಾರ್ಚ್ 7, 2021
32 °C
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿದ್ದಾಜಿದ್ದಿನ ಪೈಪೋಟಿ– ಒಂದು ಮತದಿಂದ ಜಯ

ವಕೀಲರ ಸಂಘ: ಇಂದುಶೇಖರ್‌ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 2019–20ನೇ ಸಾಲಿಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಉಮ್ಮತ್ತೂರು ಇಂದುಶೇಖರ್‌ ಆಯ್ಕೆಯಾಗಿದ್ದಾರೆ. 

ಶನಿವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಎಂ.ಶಿವರಾಮು, ಪ್ರಧಾನ ಕಾರ್ಯದರ್ಶಿಯಾಗಿ ಹರವೆ ಎಸ್‌.ಮಂಜು, ಖಜಾಂಚಿಯಾಗಿ ನಾಗಮ್ಮ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಬಿ.ಮಂಜು ಅವರು ಆಯ್ಕೆಯಾಗಿದ್ದಾರೆ. 

ಸಂಘದ 246 ಸದಸ್ಯರ ಪೈಕಿ 222 ಮಂದಿ ಮತ ಚಲಾಯಿಸಿದರು. ಈ ಹಿಂದೆ ಎರಡು ಬಾರಿ ಅಧ್ಯಕ್ಷರಾಗಿದ್ದ ಉಮ್ಮತ್ತೂರು ಇಂದುಶೇಖರ್‌, ನಾಗಣ್ಣ, ನಾಗರಾಜು ಮತ್ತು ಎನ್‌.ಬಿ.ಮಹೇಶ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಎನ್‌.ಬಿ.ಮಹೇಶ್‌ ಕೊನೆಕ್ಷಣದಲ್ಲಿ ಕಣದಿಂದ ನಿತೃತ್ತರಾದರು. 

ಇಂದುಶೇಖರ್ ಅವರು 125 ಮತಗಳನ್ನು ಪಡೆದರೆ, ನಾಗಣ್ಣ 84 ಮತ್ತು ನಾಗರಾಜು 11 ಮತಗಳನ್ನು ಪಡೆದರು. ಕಣದಿಂದ ಹಿಂದೆ ಸರಿದಿದ್ದರೂ ಎನ್‌.ಬಿ.ಮಹೇಶ್‌ ಅವರಿಗೆ ಒಂದು ಮತ ಬಿದ್ದಿತ್ತು. ಚಲಾವಣೆಯಾಗಿದ್ದರಲ್ಲಿ ಒಂದು ಮತ ತಿರಸ್ಕೃತಗೊಂಡಿತು. ಅಂತಿಮವಾಗಿ ಇಂದುಶೇಖರ್‌ ಅವರು 41 ಮತಗಳ ಅಂತರದಿಂದ ಗೆಲುವನ್ನು ತಮ್ಮದಾಗಿಸಿಕೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಶಿವರಾಮು ಹಾಗೂ ವಿದ್ಯುಲ್ಲತಾ ಸ್ಪರ್ಧಿಸಿದ್ದರು. ಇಬ್ಬರೂ ಕ್ರಮವಾಗಿ 126 ಮತ್ತು 95 ಮತಗಳನ್ನು ಪಡೆದರು. ಒಂದು ಮತ ತಿರಸ್ಕೃತಗೊಂಡಿತ್ತು. 

ಒಂದು ಮತ ಅಂತರದ ಜಯ: ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹರವೆ ಎಸ್‌.ಮಂಜು, ಕುಮಾರ್‌ ಮತ್ತು ರಂಗಸ್ವಾಮಿ ಅವರು ಸ್ಪರ್ಧಿಸಿದ್ದರು. ಮಂಜು ಅವರು 105 ಮತಗಳನ್ನು ಪಡೆದರೆ, ಕುಮಾರ್‌ 104 ಮತಗಳನ್ನು ಪಡೆದು ಒಂದು ಮತದಿಂದ ಸೋತರು. ಮತ್ತೊಬ್ಬ ಅಭ್ಯರ್ಥಿ ರಂಗಸ್ವಾಮಿ ಅವರಿಗೆ 13 ಮತಗಳು ಮಾತ್ರ ಬಿದ್ದವು.

ಖಜಾಂಚಿ ಸ್ಥಾನ ಬಯಸಿ ನಾಗಮ್ಮ ಮತ್ತು ಮಹೇಶ್‌ಕುಮಾರ್‌ ಅವರು ಕಣಕ್ಕಿಳಿದಿದ್ದರು. ನಾಗಮ್ಮ ಅವರು 112 ಮತಗಳನ್ನು ಪಡೆದು ನಾಲ್ಕು ಮತಗಳ ಅಂತರದಿಂದ ಗೆದ್ದರು. ಮಹೇಶ್‌ ಅವರು 108 ಮತಗಳನ್ನು ಗಳಿಸಿದರು. 

ಎರಡು ಬಾರಿ ಎಣಿಕೆ: ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಒಂದು ಮತದ ಅಂತರದಿಂದ ಆಯ್ಕೆಯಾಗಿದ್ದರಿಂದ, ಎರಡು ಬಾರಿ ಮತ ಎಣಿಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಮಹಮದ್ ವಸೀಂವುಲ್ಲಾ, ಸಹಾಯಕ ಚುನಾವಣಾಧಿಕಾರಿಯಾಗಿ ಉದಯರಂಗ ಕಾರ್ಯನಿರ್ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.