ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಬೊಂಬೆ ಮನೆ

Last Updated 22 ಮೇ 2019, 19:46 IST
ಅಕ್ಷರ ಗಾತ್ರ

ದೆಹಲಿ ಭಾರತದ ರಾಜಧಾನಿ ಮಾತ್ರವಲ್ಲ, ಅದು ಮ್ಯೂಸಿಯಂಗಳ ನಗರ. ಆದರೆ, ಟೂರಿಸ್ಟ್‌ಗಳು ದೆಹಲಿಯಲ್ಲಿ ಕೆಂಪುಕೋಟೆ, ಇಂಡಿಯಾ ಗೇಟ್, ರಾಜ್‍ಘಾಟ್, ಕುತುಬ್ ಮಿನಾರ್, ಲೋಟಸ್ ಮಹಲ್, ಅಕ್ಷರಧಾಮದಂತಹ ಜನಪ್ರಿಯ ತಾಣಗಳನ್ನಷ್ಟೇ ತೋರಿಸುತ್ತಾರೆ. ನಾವು ಕೂಡ, ಅವುಗಳನ್ನಷ್ಟೇ ನೋಡಿ ಬರುತ್ತೇವೆ.

ಆದರೆ, ದೆಹಲಿಯಲ್ಲಿ ಮೂವತ್ತಕ್ಕೂ ಹೆಚ್ಚು ಮ್ಯೂಸಿಯಂಗಳಿವೆ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅವೆಲ್ಲವನ್ನು ಒಂದೆರಡು ದಿನಗಳಲ್ಲಿ ನೋಡಲು ಸಾಧ್ಯವಿಲ್ಲ. ಇತ್ತೀಚೆಗೆ ನಾವು ಒಂದು ವಾರಗಳ ಕಾಲ ದೆಹಲಿಯಲ್ಲಿದ್ದಾಗ, ಒಂದು ವಾರದೊಳಗೆ ಆರೇಳು ಮ್ಯೂಸಿಯಂಗಳನ್ನು ನೋಡಿ ಬಂದೆವು. ಅವುಗಳಲ್ಲಿ ಶಂಕರ್ಸ್ ಇಂಟರ್‌ ನ್ಯಾಶನಲ್ ಡಾಲ್ಸ್ ಮ್ಯೂಸಿಯಂ ನಮಗೆ ವಿಶಿಷ್ಟ ಎನ್ನಿಸಿತ್ತು.

ಪ್ರಖ್ಯಾತ ವ್ಯಂಗ್ಯಚಿತ್ರಕಾರ, ‘ಶಂಕರ್ಸ್ ವೀಕ್ಲಿ’ಯ ಕೆ.ಶಂಕರ್ ಪಿಳೈ ಅವರು(1902-1989) ಚಿಲ್ಡ್ರನ್ಸ್ ಬುಕ್‍ಟ್ರಸ್ಟ್ ಸಂಸ್ಥೆಯ ಸ್ಥಾಪಕರೂ ಹೌದು. ಹಂಗೇರಿಯ ರಾಜತಾಂತ್ರಿಕರೊಬ್ಬರು ನೀಡಿದ ಗೊಂಬೆಯೊಂದು ಶಂಕರ್ ಅವರಿಗೆ ಗೊಂಬೆಗಳ ಸಂಗ್ರಹದ ಹವ್ಯಾಸಕ್ಕೆ ಪ್ರೇರಕವಾಯಿತು. ಸ್ವಂತ ಖರ್ಚಿನಲ್ಲಿ ಅನೇಕ ದೇಶ, ವಿದೇಶಗಳ ಗೊಂಬೆಗಳನ್ನು ಸಂಗ್ರಹಿಸಿ, ಮಕ್ಕಳಿಗಾಗಿ ವಿವಿಧ ಸ್ಥಳಗಳಲ್ಲಿ ಉಚಿತ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇದು ಮಕ್ಕಳನ್ನು ಮಾತ್ರವಲ್ಲ, ಹಿರಿಯರನ್ನೂ, ಪ್ರಖ್ಯಾತ ವ್ಯಕ್ತಿಗಳನ್ನೂ ಆಕರ್ಷಿಸತೊಡಗಿತು.

ಶಂಕರ್‌ ಅವರ ಡಾಲ್‌ ಮ್ಯೂಸಿಯಂಗೆ ಭೇಟಿ ನೀಡಿದವರಲ್ಲಿ ಜವಹರಲಾಲ್ ನೆಹರು ಹಾಗೂ ಇಂದಿರಾಗಾಂಧಿ ಅವರೂ ಸೇರಿದ್ದರು. ಇಂದಿರಾಗಾಂಧಿ ಅವರ ಸಲಹೆ ಮತ್ತು ಸಹಕಾರದಿಂದಾಗಿ ದೆಹಲಿಯ ಬಹದ್ದೂರ್ ಶಾ ಜಫರ್ ಮಾರ್ಗದಲ್ಲಿ 5200 ಚದರ ಅಡಿ ಕಟ್ಟಡದಲ್ಲಿ 1965ರಲ್ಲಿ ಶಂಕರ್ಸ್ ಅಂತರರಾಷ್ಟ್ರೀಯ ಡಾಲ್ಸ್ ಮ್ಯೂಸಿಯಂ ಪ್ರಾರಂಭವಾಯಿತು. ಈ ಮ್ಯೂಸಿಯಂನಲ್ಲಿ ಆರಂಭದಲ್ಲಿ ಸುಮಾರು 500 ಗೊಂಬೆಗಳಿದ್ದವು. ಅನೇಕ ವಿದೇಶಿಯ ಗಣ್ಯರು ಆಯಾ ದೇಶಗಳ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಮತ್ತು ಶಂಕರ್ ಅವರು ಆಸಕ್ತಿಯಿಂದ ಸಂಗ್ರಹಿಸಿದ್ದಾರೆ. ಭಾರತದ ವಿವಿಧ ರಾಜ್ಯಗಳ ಗೊಂಬೆಗಳನ್ನು ಈ ಮ್ಯೂಸಿಯಂಗೆ ಸೇರಿಸಲಾಗುತ್ತಿದೆ. ಈಗ ಮ್ಯೂಸಿಯಂನಲ್ಲಿ ಈಗ 85 ರಾಷ್ಟ್ರಗಳ 6500ಕ್ಕೂ ಹೆಚ್ಚು ಗೊಂಬೆಗಳು ಪ್ರದರ್ಶನಕ್ಕಿವೆ. ಈ ಮ್ಯೂಸಿಯಂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದೆ.

ತಲುಪುವುದು ಹೇಗೆ?

ಡಾಲ್ ಮ್ಯೂಸಿಯಂ, ದೆಹಲಿ ಮೆಟ್ರೊದ ವೈಲೆಟ್‌ ಮಾರ್ಗದಲ್ಲಿರುವ ಐಟಿಓ ನಿಲ್ದಾಣದ ಸಮೀಪದಲ್ಲಿದೆ ಈ ಮ್ಯೂಸಿಯಂ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಸೋಮವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ರಜೆ. ಮ್ಯೂಸಿಯಂ ನೋಡಲು ಪ್ರವೇಶ ಶುಲ್ಕ ಇದೆ. ಛಾಯಾಗ್ರಹಣಕ್ಕೆ ಅವಕಾಶವಿಲ್ಲ.

ದೆಹಲಿಯಲ್ಲಿರುವ ಮ್ಯೂಸಿಯಂಗಳ ಪಟ್ಟಿ

ರಾಷ್ಟ್ರೀಯ ಮ್ಯೂಸಿಯಂ, ರಾಷ್ಟ್ರಪತಿ ಭವನ ಮ್ಯೂಸಿಯಂ, ಪಾರ್ಲಿಮೆಂಟ್ ಮ್ಯೂಸಿಯಂ, ಸುಪ್ರೀಂಕೋರ್ಟ್ ಆಫ್ ಇಂಡಿಯಾ ಮ್ಯೂಸಿಯಂ, ಕೆಂಪುಕೋಟೆ ಆರ್ಕಿಯಾಲಾಜಿಕಲ್ ಮ್ಯೂಸಿಯಂ, ರಾಷ್ಟ್ರೀಯ ಕೃಷಿ ವಿಜ್ಞಾನ ಮ್ಯೂಸಿಯಂ, ರಾಷ್ಟ್ರೀಯ ಫಿಲಾಟಲಿಕ್ ಮ್ಯೂಸಿಯಂ, ರಾಷ್ಟ್ರೀಯ ಮಕ್ಕಳ ಮ್ಯೂಸಿಯಂ, ರಾಷ್ಟ್ರೀಯ ವಿಜ್ಞಾನ ಕೇಂದ್ರ ಮ್ಯೂಸಿಯಂ, ರಾಷ್ಟ್ರೀಯ ರೈಲ್ ಮ್ಯೂಸಿಯಂ, ಏರ್‌ಫೋರ್ಸ್ ಮ್ಯೂಸಿಯಂ, ಡೆಲ್ಲಿ ಪೊಲೀಸ್ ಮ್ಯೂಸಿಯಂ, ಮೆಟ್ರೊ ಮ್ಯೂಸಿಯಂ, ಚುನಾವಣಾ ಮ್ಯೂಸಿಯಂ, ಗಾಂಧಿ ಮ್ಯೂಸಿಯಂ, ಗಾಂಧಿ ಸ್ಮೃತಿ ಮ್ಯೂಸಿಯಂ, ಇಂದಿರಾಗಾಂಧಿ ಮೆಮೋರಿಯಲ್, ನೆಹರು ಮ್ಯೂಸಿಯಂ ಮತ್ತು ಪ್ಲಾನೆಟೋರಿಯಂ, ಅಬ್ದುಲ್ ಕಲಾಂ ಮೆಮೋರಿಯಲ್, ಜಾಕಿರ್ ಹುಸೇನ್ ಮ್ಯೂಸಿಯಂ, ಘಾಲಿಬ್ ಮ್ಯೂಸಿಯಂ ಮತ್ತು ಗ್ರಂಥಾಲಯ, ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೋರಿಯಲ್, ಕ್ರಾಫ್ಟ್ ಮ್ಯೂಸಿಯಂ, ಮಾಡ್ರನ್ ಆರ್ಟ್ ರಾಷ್ಟ್ರೀಯ ಗ್ಯಾಲರಿ, ಸಂಸ್ಕೃತಿ ಕೇಂದ್ರ– ಟೆರ್ರಾಕೋಟ ಮತ್ತು ಮೆಟಲ್ ಮ್ಯೂಸಿಯಂ, ಸಂಗೀತ ನಾಟಕ ಅಕಾಡೆಮಿ ಮ್ಯೂಸಿಯಂ, ಹ್ಯಾಂಡಿಕ್ರಾಫ್ಟ್ ಮತ್ತು ಹ್ಯಾಂಡ್‍ಲೂಂ ಮ್ಯೂಸಿಯಂ, ಪುರಾನಾ ಖಿಲಾ ಮ್ಯೂಸಿಯಂ, ಟಿಬೆಟ್ ಹೌಸ್ ಮ್ಯೂಸಿಯಂ, ಟ್ರೈಬಲ್ ಮ್ಯೂಸಿಯಂ, ರಾಷ್ಟ್ರೀಯ ಯುದ್ಧ ಸ್ಮಾರಕ (ವಾರ್ ಮೆಮೋರಿಯಲ್), ಸುಲಭ್ ಇಂಟರ್‌ನ್ಯಾಶನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್ ಮತ್ತು ಶಂಕರ್ಸ್ ಇಂಟರ್‌ನ್ಯಾಶನಲ್ ಡಾಲ್ಸ್ ಮ್ಯೂಸಿಯಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT