ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಎತ್ತಿನ ಭುಜ

Last Updated 30 ಸೆಪ್ಟೆಂಬರ್ 2018, 13:32 IST
ಅಕ್ಷರ ಗಾತ್ರ

ಕುದರೆಮುಖದ ಚಾರಣ ಮುಗಿಸಿಕೊಂಡು ಬರುವಾಗಮೂಡಿಗೆರೆಯ ಬಳಿಯಿರುವ ‘ಎತ್ತಿನ ಭುಜ’ಕ್ಕೆ ಹೋದರೆ ಹೇಗೆ ಎಂಬ ಆಲೋಚನೆ ಮೂಡಿತು. ಕಳಸ-ಕೊಟ್ಟಿಗೆಹಾರ ಮಾರ್ಗವಾಗಿ ಸುಮಾರು 90 ಕಿ.ಮೀ ದೂರದ ಬೈರಾಪುರಕ್ಕೆ ಬಂದೆ. ಅಲ್ಲಿಂದ ಒಳಗೆ ಮೂರು ಕಿ.ಮೀ ಹೋದರೆ ಸಿಗೋದೇ ನಾಣ್ಯ ಭೈರವೇಶ್ವರ ದೇವಸ್ಥಾನ. ಹೊಯ್ಸಳರ ಕಾಲದಲ್ಲಿ ಈ ದೇಗುಲದ ಸುತ್ತ ಇತ್ತು ಎಂದು ನಂಬಲಾದ ಕೋಟೆ ಈಗಿರದಿದ್ದರೂ ಅದರ ಕುರುಹುಗಳು ಈ ದೇಗುಲದ ಎದುರಿರುವ ಪುಷ್ಕರಿಣಿಯ ಬಳಿ ಕಾಣುತ್ತವೆ. ಈ ದೇಗುಲದ ಬಳಿ ನಾಣ್ಯಗಳನ್ನು ಟಂಕಿಸುವ ಟಂಕಶಾಲೆಯೂ ಇತ್ತಂತೆ. ಹಾಗಾಗಿ ಇದಕ್ಕೆ ಟಂಕಭೈರವೇಶ್ವರ ಎಂಬ ಹೆಸರೂ ಇದೆಯಂತೆ.

ದೇಗುಲವನ್ನು ಹೊಕ್ಕು ಹೊರಬಂದು ದೇಗುಲದತ್ತಲೇ ನೋಡಿದರೆ ಅದರ ಹಿಂಭಾಗದಲ್ಲಿ ಕಾಣುವ ಬೆಟ್ಟವೊಂದು ಎಲ್ಲ ಬೆಟ್ಟಗಳಂತಿರದೇ ಒಂದು ಭಾಗದಲ್ಲಿ ನೇರವಾಗಿ ಉಬ್ಬಿದಂತಿದೆ. ಎತ್ತಿನ ಭುಜದಂತೆ ಉಬ್ಬಿರುವ ಕಾರಣದಿಂದ ಇದಕ್ಕೆ ಎತ್ತಿನ ಭುಜ ಬೆಟ್ಟವೆಂದೇ ಕರೆಯುತ್ತಾರೆ. ಶೈವ ದೇವಸ್ಥಾನದ ಬಳಿಯಿರುವುದರಿಂದ ನಂದಿ-ಎತ್ತು-ಎತ್ತಿನ ಭುಜ ಎಂದು ಹೆಸರಾಗಿರಲೂಬಹುದು ಎಂಬ ಮಾಹಿತಿ ತಿಳಿಯಿತು.

ನಾಣ್ಯ ಭೈರವೇಶ್ವರ ದೇಗುಲದ ಪಕ್ಕದಲ್ಲೇ ಕಾಡೊಳಗೆ ಸಾಗಲು ಜೀಪಿನ ಹಾದಿಯಲ್ಲಿ ಸಾಗಿದೆ. ಜೀಪಿನ ಹಾದಿ ಎಂದಾಕ್ಷಣ ಕಲ್ಲ ಹಾದಿಯೆಂದಲ್ಲ. ಕೆಲವೆಡೆ ಕಲ್ಲು, ಕೆಲವೆಡೆ ಜೇಡಿ ಮಣ್ಣು, ಕೆಲವೆಡೆ ಜಂಬಿಟ್ಟಿಗೆ ಮಣ್ಣು, ಕಾಡ ಜೌಗು... ಹೀಗೆ ಸಾಗೋ ಮಳೆಗಾಲದ ಹಾದಿ. ಹೂತರೆ ಮೊಣಗಂಟಿನ ತನಕ ಹೂತುಹೋಗುವಷ್ಟು ಕೆಸರು ಕೆಲವು ಕಡೆ. ಅಂತಹ ಹಾದಿಯಲ್ಲಿ ಒಂದೂಕಾಲು ಕಿ.ಮೀ ನಡೆದೆ. ನಂತರ ಕಾಡಿನ ಹಾದಿ ಹಿಡಿದೆ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಹುಲ್ಲುಗಾವಲಿನಂತ ಎತ್ತಿನ ಭುಜ ಕಂಡಿತು.

ಹುಲ್ಲುಗಾವಲೆಂದ ತಕ್ಷಣ ಹತ್ತೋದು ಸುಲಭ ಎಂದುಕೊಳ್ಳುವಂತಿಲ್ಲ. ಮಳೆಗಾಲದ ಭಾರಿ ಮಳೆ ಮತ್ತು ಗಾಳಿಗೆ ಕೆಳಗಿನಿಂದ ಬೀಸುವ ಗಾಳಿ ಅತ್ತಿತ್ತ ತಳ್ಳುತ್ತಿತ್ತು. ಬಂಡೆಗಳ ಮೇಲೆ ಪಾಚಿ ಕಟ್ಟದಿದ್ದರೂ ಬೇಕಾಬಿಟ್ಟಿ ಹತ್ತೋಕೆ ಹೋದರೆ ಜಾರೋದು ಗ್ಯಾರಂಟಿಯಿತ್ತು.
ಸುಮಾರು ಒಂದೂವರೆ ಘಂಟೆ ಬಳಿಕ ಎತ್ತಿನ ಭುಜವನ್ನು ಹತ್ತಿ ಮುಗಿಸಿದೆ. ಆದರೆ ಮೇಲೆ ಎಲ್ಲಿ ನೋಡಿದರೂ ಮಂಜು. ನನ್ನ ಮೊರೆ ಕೇಳಿತೋ ಎನ್ನುವಂತೆ ಗಾಳಿ ಬೀಸತೊಡಗಿತ್ತು. ಬೀಸಿದ ಗಾಳಿಗೆ ಮಂಜೆಲ್ಲಾ ಮೇಲೆ ಹಾರಿ ಬಂದು ಕೆಳಗಿನ ದೃಶ್ಯಗಳು ಕಾಣತೊಡಗಿದವು. ಎರಡೇ ನಿಮಿಷ. ರಮಣೀಯ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡೆವು.

ಹಸಿರು ಸಿರಿ, ಸ್ವಚ್ಛ ಗಾಳಿ, ಆಹ್ಲಾದಕರ ವಾತಾವರಣವನ್ನು ಸವಿಯುತ್ತಾ ಎತ್ತಿನ ಭುಜದಿಂದ ಕೆಳಗಿಳಿದೆ. ಹಸಿರ ಕಾನನದಿಂದ ಕಾಂಕ್ರೀಟ್ ಕಾಡಿನತ್ತ ಪಯಣವನ್ನು ಮುಂದುವರೆಸಿದೆ.

ಪ್ರಶಸ್ತಿ ಪಿ., ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT