ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಯ್ಯನಗಿರಿ! ಚಾರಣಿಗರ ಸಿರಿ!

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಕಲಾವಿದನ ಕುಂಚದಲ್ಲಿ ಮೂಡಿದಂತೆ ಕಾಣಿಸುವ ಕಾಫಿ ಹಾಗೂ ಟೀ ತೋಟಗಳು, ದಟ್ಟ ಅರಣ್ಯ ಮತ್ತು ಗಿರಿ ಶಿಖರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಪರ್ವತಗಳು ಒಂದಕ್ಕಿಂತ ಒಂದು ಮೋಹಕ. ಇವುಗಳಲ್ಲಿ ಮುಳ್ಳಯ್ಯನಗಿರಿ ಪ್ರಮುಖವಾದುದು.

ಇದು ಪಶ್ಚಿಮ ಘಟ್ಟ ಸಾಲಿನಲ್ಲೇ ಪ್ರಾಮುಖ್ಯತೆ ಪಡೆದ ಗಿರಿಯೂ ಹೌದು. ಸಮುದ್ರ ಮಟ್ಟದಿಂದ 6330 ಅಡಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕದಲ್ಲೇ ಅತಿ ಎತ್ತರದ ಪ್ರದೇಶ. ಹಿಮಾಲಯ ಹಾಗೂ ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಜಾಗವೂ ಸಹ.

ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ 20 ಕಿ.ಮಿ. ದೂರದಲ್ಲಿದೆ. ಬೆಟ್ಟದ ತುದಿಯವರೆಗೆ ಉತ್ತಮವಾದ ರಸ್ತೆಯಿದೆ. ಇದು ಅಪಾಯಕಾರಿ ರಸ್ತೆಯೂ ಹೌದು. ತಿರುವಿನಿಂದ ಕೂಡಿದ ದಾರಿಯಲ್ಲಿ ಸಾಗಲು ಅನುಭವವೂ ಸಹನೆಯೂ ಬೇಕು. ಅಂದಹಾಗೆ, ಇಲ್ಲಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ. ಚಿಕ್ಕಮಗಳೂರಿನಿಂದ ಸರ್ಪದಾರಿಯವರೆಗೆ ಬಸ್ ಸೌಲಭ್ಯವಿದೆ. ಇಲ್ಲಿಂದ ಸುಮಾರು ಆರು ಕಿಮೀ ಚಾರಣದಲ್ಲಿ ಸಾಗಬೇಕು. ಇಲ್ಲಿನ ಚಾರಣ ಕಾಲಿನಲ್ಲಿ ಕಸುವಿರುವವರಿಗೆ ಮಾತ್ರ.

ಚಿಕ್ಕಮಗಳೂರಿನಿಂದ ಖಾಸಗಿ ಬಾಡಿಗೆ ವಾಹನಗಳು ದೊರೆಯುತ್ತವೆ. ಪ್ರಪಾತದ ಅಂಚಿನಲ್ಲಿರುವ ಅಲ್ಲಿನ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ರೋಚಕ ಅನುಭವ. ದಾರಿಯಲ್ಲಿ ಸಾಗುವಾಗ ಕಾಣಸಿಗುವ ಸುತ್ತಲಿನ ಗಿರಿ ಕಂದರಗಳ ದೃಶ್ಯ ತುಂಬಾ ಸುಂದರ. ಗಿರಿಯ ತುದಿಯಲ್ಲಿ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿದ ಗದ್ದುಗೆ ಹಾಗೂ ದೇವಾಲಯವಿದೆ. ಪುಟ್ಟದಾದ ಬಸವನ ಪ್ರತಿಮೆ ಹಾಗೂ ಪಕ್ಕದಲ್ಲಿ ಗುಹೆಯಂತಹ ರಚನೆಯಿದೆ. ಗದ್ದುಗೆ ಇರುವ ಜಾಗವನ್ನು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಬೇಕು.

ಗುಡ್ಡದ ತುದಿ ತಲುಪಿದಾಗ ಮೋಡಗಳು ಕೈಗೆ ಸಿಗುತ್ತವೇನೋ ಎಂಬಂತೆ ಭಾಸವಾಗುತ್ತದೆ. ಚಳಿಗಾಲದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಂಜು ಮುಸುಕಿ ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಬೆಟ್ಟದ ತುದಿಯೇರಿದಾಗ ಕಾಣುವ ಸುತ್ತಲಿನ ದೃಶ್ಯ ಮಂತ್ರಮುಗ್ಧರನ್ನಾಗಿಸುತ್ತದೆ. ಬೆಟ್ಟವೇರಿ ನಿಂತಾಗ ಪ್ರಕೃತಿ ಮುಂದೆ ನಾವೆಷ್ಟು ಕುಬ್ಜ ಎಂದೆನಿಸುತ್ತದೆ.

ಚಾರಣ ಪ್ರಿಯರ ಸ್ವರ್ಗವೆನಿಸಿಕೊಂಡಿರುವ ಮುಳ್ಳಯ್ಯನಗಿರಿ ದಕ್ಷಿಣ ಭಾರತದಲ್ಲೇ ಪ್ರಮುಖ ಚಾರಣ ಸ್ಥಳಗಳಲ್ಲೊಂದು. ಅಕ್ಟೋಬರ್‌ನಿಂದ ಫೆಬ್ರುವರಿ ಚಾರಣಕ್ಕೆ ಸೂಕ್ತ ಸಮಯ. ಸದಾ ಸುಯ್ಯನೆ ಬೀಸುವ ಗಾಳಿ ಬಿಸಿಲಿನಲ್ಲೂ ಚಳಿಯ ಅನುಭವ ಕೊಡುತ್ತದೆ.

ಮುಳ್ಳಯ್ಯನಗಿರಿ ಪರಿಸರದಲ್ಲಿ ತಿಂಡಿ-ಊಟಕ್ಕೆ ಸೌಲಭ್ಯಗಳಿಲ್ಲ. ಕುರುಕಲು ತಿಂಡಿಯ ಸಣ್ಣಪುಟ್ಟ ಅಂಗಡಿಗಳಿವೆ. ಚಳಿಗಾಲದಲ್ಲಿ ನೀಲಿ ಆಕಾಶದಲ್ಲಿ ಬೆಳ್ಳಿಮೋಡಗಳು ಬಿಡಿಸುವ ಚಿತ್ತಾರದೊಂದಿಗೆ ಮುಳ್ಳಯ್ಯನಗಿರಿಯ ದೃಶ್ಯಕಾವ್ಯವನ್ನು ನೋಡುವುದು ಒಂದು ರೋಚಕ ಅನುಭವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT