ಸಮತೋಲನ ಕಾಪಾಡಿ

7

ಸಮತೋಲನ ಕಾಪಾಡಿ

Published:
Updated:

‘ಅತಿರೇಕದ ಅಟ್ಟಹಾಸ ಬೇಡ’ (ಚರ್ಚೆ, ಪ್ರ.ವಾ., ಆ. 8) ಲೇಖನದಲ್ಲಿ ಪ್ರಸನ್ನ ಅವರು ಹೇಳಿರುವ ‘ಉಗ್ರ ವಿಚಾರವಾದಿಗಳನ್ನೂ ಖಂಡಿಸಬೇಕು’ ಎಂಬ ವಿಷಯದ ಕುರಿತು ಚರ್ಚಿಸುವ ಅಗತ್ಯವಿದೆ.

ಲೋಕದಲ್ಲಿ ವಿಚಾರವಾದ ಇದೆ. ಮೌಢ್ಯ ಎಂದಿನಿಂದಲೂ ಇದೆ. ‘ಟೆರರಿಸಂ’ ಎಂಬ ಅರ್ಥದ ಉಗ್ರವಾದ ಒಂದಲ್ಲ ಒಂದು ರೀತಿಯಲ್ಲಿ ಇತಿಹಾಸ ಕಾಲದುದ್ದಕ್ಕೂ ಇದ್ದೇ ಇದೆ. ಅದನ್ನು ಹೊರತುಪಡಿಸಿದಂತೆ ‘ಉಗ್ರ ವಿಚಾರ
ವಾದ’ ಎಂಬ ಮಾತು ಸ್ವಲ್ಪ ವಿಚಿತ್ರವೆಂಬಂತೆ ತೋರುತ್ತದೆ. ಒಬ್ಬ ವಿಚಾರವಾದಿ ಯಾವತ್ತೂ ತನ್ನ ವಾದವನ್ನು ಸಮಂಜಸವಾಗಿ ಮುಂದಿಡುತ್ತಾನೆ. ಅವನಲ್ಲಿ ಆವೇಶವಿರುವುದಿಲ್ಲ. ಭಾಷೆ ಉಗ್ರವಾಗಿರುವುದಿಲ್ಲ. ತಾನು ಹೇಳಬೇಕಾದ್ದನ್ನು ಸಕಾರಣವಾಗಿ, ಆಧಾರಸಹಿತವಾಗಿ ಪ್ರತಿಪಾದಿಸುತ್ತಾನೆ.

ತನ್ನ ವಾದ ಸಾಮರ್ಥ್ಯದಿಂದ ಸೌಮ್ಯ ಭಾಷೆಯಲ್ಲಿಯೇ ತನ್ನನ್ನು ವಿರೋಧಿಸುವವರನ್ನೂ ಇಂದಲ್ಲ ನಾಳೆ ಒಪ್ಪಿಸಬಲ್ಲೆನೆಂಬ ಆತ್ಮವಿಶ್ವಾಸ ಅವನದಾಗಿರುತ್ತದೆ. ವಿರೋಧಿಸುವವನ ವಿಷಯಕ್ಕೆ ಅವನಲ್ಲಿ ದ್ವೇಷ, ತಿರಸ್ಕಾರ, ಲಘು
ಮನೋಭಾವಗಳಿರುವುದಿಲ್ಲ. ಅಲ್ಲದೆ ತನ್ನನ್ನು ವಿರೋಧಿಸುವವನು ತನ್ನ ವಾದವನ್ನು ಪ್ರಬಲವಾಗಿ ಮಂಡಿಸುವುದನ್ನು ಕೇಳುತ್ತಿರುವಾಗ, ‘ಅವನು ಹೇಳುತ್ತಿರುವುದರಲ್ಲೂ ಏನಾದರೂ ಅರ್ಥವಿರಬೇಕಲ್ಲವೇ’ ಎಂದು ಯೋಚಿಸುವುದನ್ನು ಬಿಟ್ಟುಕೊಡುವುದಿಲ್ಲ. ಬುದ್ಧ, ಗಾಂಧಿ ಮೊದಲಾದವರು ಇಂಥ ವಿಚಾರವಾದಿಗಳಾಗಿದ್ದರು. ಗಾಂಧಿ ಆಫ್ರಿಕಾದಲ್ಲಿದ್ದಾಗ ಮತ್ತು ಸ್ವದೇಶಕ್ಕೆ ಹಿಂತಿರುಗಿದ ನಂತರದಲ್ಲಿ ಅವರನ್ನು ವಿರೋಧಿಸುವವರು ಬಹಳಷ್ಟು ಜನರಿದ್ದರು. ಆದರೆ ಅವರೆಲ್ಲರನ್ನೂ ‘ಗಾಂಧಿವಾದದಲ್ಲೂ ಅರ್ಥವಿರಲೇಬೇಕು’ ಎಂದು ಯೋಚಿಸುವ ಹಂತಕ್ಕೆ ಕೊಂಡೊಯ್ದ ಧೀಮಂತ ಗಾಂಧಿ. ಖಾದಿ, ಸ್ವದೇಶಿ ವಸ್ತು, ಗೋವು ಮುಂತಾದುವನ್ನು ಕುರಿತಾದ ಅವರ ಪ್ರೀತಿ, ಭಕ್ತಿಗಳಿಗೆ ‘ನಿಮ್ಮದು ಗೊಬ್ಬರ ಸಂಸ್ಕೃತಿ’ ಎಂದೆಲ್ಲ ವಿಚಾರವಾದಿ ಎಂ.ಎನ್. ರಾಯ್ ಟೀಕಿಸುತ್ತಿದ್ದರು. ಹೀಗೆ ತನ್ನನ್ನು ಉಗ್ರವಾಗಿ ಟೀಕಿಸಿ ರಾಯ್ ಬರೆದ ಲೇಖನವನ್ನು, ತಾವು ಸಂಪಾದಿಸುತ್ತಿದ್ದ ‘ಯಂಗ್ ಇಂಡಿಯಾ’ ಮತ್ತು ‘ಹರಿಜನ್’ ಪತ್ರಿಕೆಗಳಲ್ಲಿ ತಾವೇ ಪ್ರಕಟಿಸುತ್ತಿದ್ದುದರಲ್ಲಿಯೇ ಗಾಂಧಿಯವರ ದೊಡ್ಡತನವಿದ್ದುದು. ಅವರಲ್ಲಿ ವಿನೋದ ಪ್ರವೃತ್ತಿಯೂ ಅದ್ಭುತವಾಗಿಯೇ ಇತ್ತು. ಅದರಿಂದಲೂ ಎದುರಿನವನ ವಿಚಾರ ಹುರುಳಿಲ್ಲದ್ದೆಂದು ತೋರಿಸುವ ಅವರ ಜಾಣ್ಮೆ ಮಾಸ್ತಿಯವರ ‘ಗುಂಡುಸೂಜಿ’ ಎಂಬ ಕಥನಕವನದಲ್ಲಿ ವ್ಯಕ್ತವಾಗಿದೆ.

ಖ್ಯಾತ ವಿಚಾರವಾದಿ ಬರ್ಟ್ರೆಂಡ್ ರಸೆಲ್‍ರನ್ನು, ‘ನೀವು ನಂಬಿದ ವಿಚಾರಗಳಿಗೆ ಪ್ರಾಣ ಕೊಡಲೂ ಸಿದ್ಧರಿರುತ್ತೀರಲ್ಲವೇ’ ಎಂದು ಯಾರೋ ಒಬ್ಬರು ಕೇಳಿದಾಗ ಅವರು, ‘ಇಲ್ಲ ನಾಳೆ ಯಾವನಾದರೂ ಬುದ್ಧಿವಂತನೊಬ್ಬ ಬಂದು ನನ್ನ ವಿಚಾರಗಳು ಸರಿಯಿಲ್ಲವೆಂದು, ಪೊಳ್ಳೆಂದು ಸಾಧಿಸಿ ತೋರಿಸಬಹುದು. ಅದಕ್ಕಾಗಿ ನನ್ನ ಅಮೂಲ್ಯ ಜೀವವನ್ನೇಕೆ ತ್ಯಜಿಸಬೇಕು’ ಎಂದು ಮರು ಪ್ರಶ್ನಿಸಿದ್ದರಂತೆ. ನಿಜವಾದ ವಿಚಾರವಾದಿ ಯಾವಾಗಲೂ ಇಂಥ ಮುಕ್ತ ಮನಸ್ಸಿನವನಾಗಿರುತ್ತಾನೆ. ಆಕ್ರೋಶದ ಭಾಷೆಯಂತೂ ಅವನಿಂದ ಸಾವಿರ ಮೈಲಿ ದೂರ. ತನ್ನದೇ ಸರಿಯೆಂಬ, ಅದರಿಂದ ಜಗತ್ತನ್ನೇ ಬದಲಿಸಿಬಿಡುತ್ತೇನೆಂಬ ಹಟ, ಭ್ರಮೆಗಳಿಂದಲೂ ಅವನು ದೂರವೇ ಇರುತ್ತಾನೆ.

ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !