ನಮ್ಮದು ಕಡು ಬಡವರ ಶ್ರೀಮಂತ ದೇಶ!

7

ನಮ್ಮದು ಕಡು ಬಡವರ ಶ್ರೀಮಂತ ದೇಶ!

Published:
Updated:

ಕೇಂದ್ರ ಸರ್ಕಾರವು ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡಕ್ಕೆ ಅನುಗುಣವಾಗಿ ಶೇಕಡ ಹತ್ತರಷ್ಟು ‘ಮೇಲ್‌ಜಾತಿ ಮೀಸಲಾತಿ’ಗೆ ಕೈಗೊಂಡ ಕ್ರಮವನ್ನು ಯಥಾಪ್ರಕಾರ ಕೆಲವರು ‘ಕ್ರಾಂತಿಕಾರಿ’ಯೆಂದು ಕೂಗಿ ಹೇಳುತ್ತಿದ್ದಾರೆ.

ಆರ್ಥಿಕವಾಗಿ ಬಡವರಾದ ಯಾವುದೇ ಜಾತಿಯ ಜನರಿಗೆ ಉಪಯುಕ್ತವಾಗುವ ಯಾವುದೇ ಕ್ರಮವು ಸ್ವಾಗತಾರ್ಹವೇ ಸರಿ. ಇಂತಹ ಕ್ರಮಗಳು ಸಮತೋಲನದತ್ತ ಇಡುವ ಸಕಾರಾತ್ಮಕ ಹೆಜ್ಜೆಯಾಗುತ್ತವೆ, ನಿಜ. ಆದರೆ ಆರ್ಥಿಕ ದುರ್ಬಲರಿಗೆ ಮೀಸಲಾತಿ ನೀಡುವ ನೋಟ ಇದೇ ಮೊದಲಲ್ಲ.

ಹಾವನೂರು ವರದಿಯನ್ನು ಜಾರಿಗೆ ತರುವಾಗ ಈ ವರದಿಯಲ್ಲಿ ಇಲ್ಲದೆ ಇದ್ದ ‘ವಿಶೇಷ ಹಿಂದುಳಿದ ಗುಂಪು’ (ಬ್ಯಾಕ್‌ವರ್ಡ್ ಸ್ಪೆಷಲ್ ಗ್ರೂಪ್) ಎಂಬ ವಿಭಾಗವನ್ನು ಸೃಷ್ಟಿಸಿ ದೇವರಾಜ ಅರಸು ಅವರು ಶೇ 15 ರಷ್ಟು ಮೀಸಲಾತಿ ಜಾರಿಗೆ ತಂದಿದ್ದರು. ವಿ.ಪಿ. ಸಿಂಗ್ ಅವರು ಮಂಡಲ್ ವರದಿಯ ಜಾರಿಗೆ ಹೊರಟಾಗ ಎದುರಾದ ಪ್ರತಿರೋಧವನ್ನು ಅನುಲಕ್ಷಿಸಿ, ಆನಂತರ ಆರ್ಥಿಕ ದುರ್ಬಲರಿಗೆ ಶೇ 5 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದ್ದರು.

ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಇಂತಹುದೇ ಕಾನೂನು ಮಾಡಿದ್ದರು. ಅದು ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕೃತವಾಗಿತ್ತು. ಹೀಗೆ ಹಿಂದೆಯೇ ಕೆಲವು ಪ್ರಯತ್ನಗಳು ನಡೆದಿರುವುದನ್ನು ಮರೆಯಬಾರದು.

ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಈಗಿನ ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮದಲ್ಲಿ ಬಡವರ ವಾರ್ಷಿಕ ಆದಾಯದ ಗರಿಷ್ಠ ಮಿತಿಯನ್ನು ಎಂಟು ಲಕ್ಷ ರೂಪಾಯಿಗಳಿಗೆ ನಿಗದಿ ಮಾಡಿರುವುದು ಮಾತ್ರ ಒಂದು ಆರ್ಥಿಕ ಅಚ್ಚರಿಯೇ ಸರಿ. ಅಂದರೆ ಈ ದೇಶದಲ್ಲಿ ತಿಂಗಳಿಗೆ ₹ 66,661 ಹಾಗೂ ದಿನಕ್ಕೆ ₹ 2,200ಕ್ಕೂ ಹೆಚ್ಚು ಆದಾಯ ಇರುವವರು ಕೂಡ ಕಡುಬಡವರು! ಅಂದಮೇಲೆ ನಮ್ಮದು ಅತ್ಯಂತ ಶ್ರೀಮಂತ ದೇಶವೇ ಸರಿ! ಆದ್ದರಿಂದ ಕೇಂದ್ರ ಸರ್ಕಾರ ಇನ್ನೊಂದು ಕ್ರಾಂತಿಗೂ ಮುಂದಾಗಬೇಕು.

ಆದಾಯ ತೆರಿಗೆಗಾಗಿ ಕೇಂದ್ರ ಸರ್ಕಾರವು ಎರಡೂವರೆ ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಮಾತ್ರ ವಿನಾಯಿತಿ ನೀಡಿದೆ. ಇನ್ನು ಮೇಲೆ ಕಡು ಬಡವರ ಅನುಕೂಲಕ್ಕಾಗಿ ವಾರ್ಷಿಕ ಎಂಟು ಲಕ್ಷ ರೂಪಾಯಿ ಆದಾಯ ಇರುವವರಿಗೂ ಆದಾಯ ತೆರಿಗೆ ವಿನಾಯಿತಿ ನೀಡಬೇಕು! ಇಲ್ಲದಿದ್ದರೆ ಬಡತನದ ಮಾನದಂಡದಲ್ಲಿ ವಿರೋಧಾಭಾಸವುಂಟಾಗುತ್ತದೆ.

ಆದರೂ ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳಿಗೂ ವಿರೋಧಾಭಾಸವೇ ಮಾನದಂಡವಾಗುತ್ತದೆ. ಸದ್ಯ, ನ್ಯಾಯಾಲಯದಲ್ಲಿ ಮೀಸಲಾತಿಯ ಮಾನಕ್ಕೆ ದಂಡವಾಗದಿರಲಿ ಎಂದು ಹಾರೈಸೋಣ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !