ಮದ್ಯಕ್ಕಾಗಿ ನಡುರಸ್ತೆಯಲ್ಲೇ ಇರಿದು ಕೊಂದರು!

ಶುಕ್ರವಾರ, ಏಪ್ರಿಲ್ 26, 2019
22 °C
ಮರಣೋತ್ತರ ಪರೀಕ್ಷೆ ಬಳಿಕ ಪ್ರಕರಣಕ್ಕೆ ತಿರುವು

ಮದ್ಯಕ್ಕಾಗಿ ನಡುರಸ್ತೆಯಲ್ಲೇ ಇರಿದು ಕೊಂದರು!

Published:
Updated:
Prajavani

ಬೆಂಗಳೂರು: ಮದ್ಯದ ಬಾಟಲಿ ಕೊಡಲಿಲ್ಲವೆಂದು ಸತ್ಯಶೀಲನ್ (46) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಮೂವರು ಯುವಕರು, ಮರಣೋತ್ತರ ಪರೀಕ್ಷೆ ವರದಿ ನೀಡಿದ ಸುಳಿವಿನಿಂದ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.

ಕಾಡುಗೊಂಡನಹಳ್ಳಿ ಸಮೀಪದ ಶ್ಯಾಂಪುರ ನಿವಾಸಿ ಲೋಕೇಶ್ ಅಲಿಯಾಸ್ ಪಟಾಣಿ (21), ಕಾಕ್ಸ್‌ಟೌನ್‌ನ ಸೆಲ್ವರಾಜ್ ಅಲಿಯಾಸ್ ಸೆಲ್ವ (19) ಹಾಗೂ ಎ.ಸುನೀಲ್ (20) ಎಂಬುವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಮದ್ಯಕ್ಕಾಗಿ ಕೊಲೆ: ಕೂಲಿ ಕೆಲಸ ಮಾಡುವ ಸತ್ಯಶೀಲನ್, ತಾಯಿ ಕಾಂತಮಣಿ ಜತೆ ಬಾಣಸವಾಡಿಯಲ್ಲಿ ನೆಲೆಸಿದ್ದರು. ಪತಿ ಮದ್ಯವ್ಯಸನಿ ಎಂಬ ಕಾರಣಕ್ಕೆ ಸತ್ಯಶೀಲನ್ ಪತ್ನಿ ಎರಡು ವರ್ಷಗಳ ಹಿಂದೆಯೇ ದೂರವಾಗಿ ಕೆಜಿಎಫ್‌ನಲ್ಲಿದ್ದಾರೆ.

ಮಾರ್ಚ್ 24ರ ರಾತ್ರಿ 10 ಗಂಟೆ ಸುಮಾರಿಗೆ ಸಮೀಪದ ಬಾರ್‌ ಒಂದರಲ್ಲಿ ಪಾನಮತ್ತರಾಗಿದ್ದ ಸತ್ಯಶೀಲನ್, ಇನ್ನೊಂದು ಬಾಟಲಿಯನ್ನು ಪಾರ್ಸಲ್ ತೆಗೆದುಕೊಂಡು ಮನೆಗೆ ನಡೆದು ಹೋಗುತ್ತಿದ್ದರು. ಅದನ್ನು ನೋಡಿದ ಆರೋಪಿಗಳು, ತಮಗೆ ಬಾಟಲಿ ಕೊಡುವಂತೆ ಕೇಳಿದ್ದರು. ಅದಕ್ಕೆ ಅವರು ಒಪ್ಪದಿದ್ದಾಗ ಲೋಕೇಶ್ ಬೆನ್ನಿಗೆ ಇರಿದಿದ್ದ. ನಂತರ ಆತನ ಸಹಚರರ ಬಾಟಲಿ ಕಿತ್ತುಕೊಂಡಿದ್ದರು.

ರಸ್ತೆ ಬದಿ ಬಿದ್ದಿದ್ದ ಸತ್ಯಶೀಲನ್ ಅವರನ್ನು ಮರುದಿನ ಬೆಳಿಗ್ಗೆ ನೋಡಿದ ಸ್ಥಳೀಯ ಹುಡುಗರು, ‘ನಿಮ್ಮ ಮಗ ಕುಡಿದು ಉಡುಪಾಸ್ ಹೋಟೆಲ್ ಬಳಿ ಬಿದ್ದಿದ್ದಾರೆ’ ಎಂದು ಕಾಂತಮಣಿ ಅವರಿಗೆ ಹೇಳಿದ್ದರು. ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಸತ್ಯಶೀಲನ್ ಕೊನೆಯುಸಿರೆಳೆದಿದ್ದರು. ಕಾಂತಮಣಿ ಕೊಟ್ಟ ದೂರಿನ ಅನ್ವಯ ಅಸಹಜ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೌರಿಂಗ್ ಆಸ್ಪತ್ರೆಗೆ ಕಳುಹಿಸಿದ್ದರು.

ತಿರುವು ಸಿಕ್ಕಿದ್ದು ಇಲ್ಲಿ: ‘ರಾತ್ರಿ ಇಲಿ–ಹೆಗ್ಗಣಗಳು ದೇಹವನ್ನು ಕಚ್ಚಿ ತಿಂದಿದ್ದವು. ಇದರಿಂದ ದೇಹದ ಕೆಲವೆಡೆ ರಕ್ತದ ಕಲೆಗಳಿದ್ದವು. ಯಾವುದೇ ಗಾಯದ ಗುರುತುಗಳು ಕಾಣಿಸಿರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಕೆ.ಬಿ.ದಿಲೀಪ್‌ಕುಮಾರ್, ‘ಬೆನ್ನಿನ ಮೇಲೆ ಅರ್ಧ ಇಂಚಿನಷ್ಟು ಅಗಲದ ಗಾಯವಿದೆ. ಯಾರೋ ಚಾಕುವಿನಿಂದ ಚುಚ್ಚಿದಂತಿದೆ’ ಎಂದು ವರದಿ ಕೊಟ್ಟರು. ಆನಂತರ ಹೋಟೆಲ್‌ನ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಾವಿನ ರಹಸ್ಯ ಬಯಲಾಯಿತು’ ಎಂದು ಪುಲಕೇಶಿನಗರ ಪೊಲೀಸರು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 8

  Sad
 • 0

  Frustrated
 • 1

  Angry

Comments:

0 comments

Write the first review for this !